ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಹುಸಿ ಬೆದರಿಕೆಯಿಂದ ಪ್ರತಿ ವಿಮಾನಕ್ಕೆ 3 ಕೋಟಿ ರು. ನಷ್ಟ!

| Published : Oct 20 2024, 02:08 AM IST / Updated: Oct 20 2024, 04:47 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ವಿಮಾನಗಳಿಗೆ ಬರುತ್ತಿರುವ ಹುಸಿ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಹಾರಾಟ ರದ್ದಾದರೆ ಅಥವಾ ತುರ್ತು ಭೂಸ್ಪರ್ಶ ಆದರೆ ಅಂದಾಜಿನ ಪ್ರಕಾರ ಒಂದು ವಿಮಾನಕ್ಕೆ 3 ಕೋಟಿ ರು. ನಷ್ಟ ಉಂಟಾಗುತ್ತಿದೆ ಹೇಳಲಾಗಿದೆ.

ನವದೆಹಲಿ: ಇತ್ತೀಚಿನ ದಿನಗಳಲ್ಲಿ ವಿಮಾನಗಳಿಗೆ ಬರುತ್ತಿರುವ ಹುಸಿ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಹಾರಾಟ ರದ್ದಾದರೆ ಅಥವಾ ತುರ್ತು ಭೂಸ್ಪರ್ಶ ಆದರೆ ಅಂದಾಜಿನ ಪ್ರಕಾರ ಒಂದು ವಿಮಾನಕ್ಕೆ 3 ಕೋಟಿ ರು. ನಷ್ಟ ಉಂಟಾಗುತ್ತಿದೆ ಹೇಳಲಾಗಿದೆ. 1 ವಾರದಲ್ಲಿ 70 ವಿಮಾನಕ್ಕೆ ಬಾಂಬ್‌ ಬೆದರಿಕೆ ಬಂದಿದ್ದು, ಅದರ ಪ್ರಕಾರ 210 ಕೋಟಿ ರು. ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಅ.14ರಂದು ಬೆದರಿಕೆ ಸ್ವೀಕರಿಸಿದ ಮುಂಬೈ- ನ್ಯೂಯಾರ್ಕ್‌ ಏರ್‌ ಇಂಡಿಯಾ ಬೋಯಿಂಗ್‌ 777 ವಿಮಾನಕ್ಕೆ 3 ಕೋಟಿ ರು.ಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಿದೆ. ಮಿಕ್ಕಂತೆ ಬೇರೆ ಬೇರೆ ವಿಮಾನಗಳಿಗೆ ನಷ್ಟದ ಪ್ರಮಾಣವು ಬೇರೆ ಆದರೂ ಹೆಚ್ಚೂ ಕಡಿಮೆ 2-3 ಕೋಟಿ ರು. ನಷ್ಟ ಆಗೇ ಆಗುತ್ತದೆ ಎನ್ನಲಾಗಿದೆ.

ನಷ್ಟ ಏಕೆ?:ವಿಮಾನದಲ್ಲಿ ನಿಗದಿತ ಗುರಿ ಎಷ್ಟು ಇದೆಯೋ ಅಷ್ಟು ಇಂಧನ ತುಂಬಲಾಗುತ್ತದೆ. ವಿಮಾನವನ್ನು ನಿಗದಿಗಿಂತ ಮೊದಲೇ ಇಳಿಸಬೇಕು ಎಂದರೆ ಅದು ನಿರ್ದಿಷ್ಟ ಪ್ರಮಾಣದ ತೂಕಕ್ಕಿಂತ ಕಡಿಮೆ ಇರಬೇಕು. ಆಗ ತೂಕ ಇಳಿಸಲು ನೂರಾರು ಟನ್‌ ಇಂಧನವನ್ನು ಆಗಸದಲ್ಲೇ ಚೆಲ್ಲಬೇಕು. ಚೆಲ್ಲದಿದ್ದರೆ ಇಂಧನ ಜಾಸ್ತಿ ಇದ್ದ ವಿಮಾನ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನೂರಾರು ಟನ್‌ ಇಂಧನವನ್ನು ಆಗಸದಲ್ಲೇ ಚೆಲ್ಲಲಾಗುತ್ತದೆ. ಇದರಿಂದ ಸುಮಾರು 1 ಕೋಟಿ ರು. ನಷ್ಟ ಆಗುತ್ತದೆ. ಮಿಕ್ಕಂತೆ ತುರ್ತು ಭೂಸ್ಪರ್ಶ ಮಾಡಿದಾಗ ಅಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವಸತಿ, ಆಹಾರ ವ್ಯವಸ್ಥೆ ಮಾಡಬೇಕಾಗುತ್ತದೆ. ಏರ್‌ಪೋರ್ಟಲ್ಲಿ ಲ್ಯಾಂಡಿಂಗ್‌ ಶುಲ್ಕ, ಟೇಕಾಫ್‌ ಶುಲ್ಕ, ಭದ್ರತಾ ಶುಲ್ಕ ಸೇರಿ ಹಲವು ಶುಲ್ಕವನ್ನು ವಿಮಾನ ಕಂಪನಿಗಳೇ ನೀಡಬೇಕು. ಪ್ರಯಾಣಿಕರಿಗೆ ಟಿಕೆಟ್‌ ರೀಫಂಡ್‌, ಕನೆಕ್ಟಿಂಗ್‌ ವಿಮಾನದ ಶುಲ್ಕ ನೀಡಬೇಕು. ಇದೆಲ್ಲಾ ಅಂದಾಜು ತೆಗೆದುಕೊಂಡರೆ, ಒಂದು ವಿಮಾನಕ್ಕೆ ₹3 ಕೋಟಿ ಖರ್ಚು ಬೀಳಲಿದೆ.