ಲಡಾಖ್‌ನಲ್ಲಿರುವ ‘ರಾಂಚೋ ಶಾಲೆ’ ಎಂದೇ ಜನಪ್ರಿಯವಾಗಿರುವ ಡ್ರಕ್ ಪದ್ಮಾ ಕರ್ಪೋ ಶಾಲೆಗೆ ಸ್ಥಾಪನೆಯಾದ 2 ದಶಕಗಳ ಬಳಿಕ ಸಿಬಿಎಸ್‌ಇ ಮಾನ್ಯತೆ ದೊರಕಿದೆ.

ನವದೆಹಲಿ: ಲಡಾಖ್‌ನಲ್ಲಿರುವ ‘ರಾಂಚೋ ಶಾಲೆ’ ಎಂದೇ ಜನಪ್ರಿಯವಾಗಿರುವ ಡ್ರಕ್ ಪದ್ಮಾ ಕರ್ಪೋ ಶಾಲೆಗೆ ಸ್ಥಾಪನೆಯಾದ 2 ದಶಕಗಳ ಬಳಿಕ ಸಿಬಿಎಸ್‌ಇ ಮಾನ್ಯತೆ ದೊರಕಿದೆ. 2009ರಲ್ಲಿ ತೆರೆ ಕಂಡ ಅಮೀರ್ ಖಾನ್ ಅಭಿನಯದ ‘3 ಈಡಿಯಟ್ಸ್’ ಚಿತ್ರದಲ್ಲಿ ಈ ಶಾಲೆಯ ಚಿತ್ರೀಕರಣ ನಡೆದಿತ್ತು. ಆ ಬಳಿಕ ಶಾಲೆ ಜಮ್ಮು ಮತ್ತು ಕಾಶ್ಮೀರ ರಾಜ್ಯ ಶಾಲಾ ಶಿಕ್ಷಣ ಮಂಡಳಿಯೊಂದಿಗೆ ಸಂಯೋಜನೆಯಾಗಿತ್ತು. ‘ಹಲವಾರು ವರ್ಷಗಳ ಪ್ರಯತ್ನದ ನಂತರ ಅಂತಿಮವಾಗಿ ಸಿಬಿಎಸ್‌ಇ ಮಾನ್ಯತೆ ಪಡೆದುಕೊಂಡಿದ್ದೇವೆ. 10ನೇ ತರಗತಿಯ ಮೊದಲ ಬ್ಯಾಚ್ ವಿದ್ಯಾರ್ಥಿಗಳು ಈಗ ಸಿಬಿಎಸ್‌ಇ ಮಂಡಳಿ ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ’ ಎಂದು ಪ್ರಾಂಶುಪಾಲ ಮಿಂಗೂರ್ ಆಂಗ್ಮೋ ತಿಳಿಸಿದ್ದಾರೆ.

ಕೆನಡಾ ಉತ್ಸವದ ವೇಳೆ ಕಾರು ಹರಿದು 9 ಜನರ ಸಾವು: ಉಗ್ರಾತಂಕ

ವ್ಯಾಂಕೋವರ್: ಕೆನಡಾದ ವ್ಯಾಂಕೋವರ್ ನಗರದ ಫಿಲಿಪಿನೋ ಪರಂಪರೆ ಉತ್ಸವದಲ್ಲಿ ನೆರೆದಿದ್ದ ಜನಸಮೂಹದ ಮೇಲೆ ವ್ಯಕ್ತಿಯೊಬ್ಬ ಕಾರು ಚಲಾಯಿಸಿ ಕನಿಷ್ಠ 9 ಜನರ ಸಾವಿಗೆ ಕಾರಣನಾಗಿದ್ದಾನೆ, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ರಾತ್ರಿ 8:14ಕ್ಕೆ ರಸ್ತೆ ಪ್ರವೇಶಿಸಿದ ವಾಹನವು ಲಾಪು ಲಾಪು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರ ಮೇಲೆ ಹಾಯ್ದುಹೋಗಿದೆ. ಹಲವರು ಗಾಯಗೊಂಡಿದ್ದಾರೆ. ಸಾವುನೋವುಗಳ ನಿಖರ ಸಂಖ್ಯೆ ತಕ್ಷಣಕ್ಕೆ ಲಭ್ಯವಾಗಿಲ್ಲ. ಆದರೆ ಇದು ಭಯೋತ್ಪಾದಕ ಕೃತ್ಯವಲ್ಲ ಎಂಬ ವಿಶ್ವಾಸ ನಮಗಿದೆ’ ಎಂದು ವ್ಯಾಂಕೋವರ್ ಪೊಲೀಸ್ ಇಲಾಖೆ ತಿಳಿಸಿದೆ. ಘಟನೆ ಹಿನ್ನೆಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇದು ಉಗ್ರ ಕೃತ್ಯ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇರಾನ್ ಬಂದರು ಸ್ಫೋಟ: ಸಾವಿನ ಸಂಖ್ಯೆ 28ಕ್ಕೇರಿಕೆ, 850 ಜನರಿಗೆ ತೀವ್ರ ಗಾಯ

ಮಸ್ಕಟ್: ಕ್ಷಿಪಣಿ ಇಂಧನ ತಯಾರಿಸಲು ಬಳಸುವ ರಾಸಾಯನಿಕ ಸಂಗ್ರಹಿಸಿದ್ದ ದಕ್ಷಿಣ ಇರಾನ್‌ನ ಶಾಹಿದ್ ರಜಯಿ ಬಂದರಿನಲ್ಲಿ ಶನಿವಾರ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 25 ಮಂದಿ ಮೃತಪಟ್ಟಿದ್ದು, 850 ಮಂದಿಗೆ ಗಾಯಗಳಾಗಿದೆ. ಶನಿವಾರ ರಾತ್ರಿಯಿಡೀ ಬಂದರಿನಲ್ಲಿ ಬೆಂಕಿ ಉರಿಯುತ್ತಲೇ ಇದ್ದು, ಭಾನುವಾರ ಬೆಳಿಗ್ಗೆ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳು ನೀರನ್ನು ಚೆಲ್ಲಿ ಬೆಂಕಿ ನಂದಿಸುವ ಪ್ರಯತ್ನ ಮಾಡಿವೆ. ‘ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳಲ್ಲಿ ಬಳಸಲು ಉದ್ದೇಶಿಸಲಾದ ಘನ ಇಂಧನದ ಸಾಗಣೆಯನ್ನು ಸರಿಯಾಗಿ ನಿರ್ವಹಿಸದ ಕಾರಣ ಬೆಂಕಿ ಕಾಣಿಸಿಕೊಂಡಿದೆ’ ಎಂದು ಖಾಸಗಿ ಭದ್ರತಾ ಸಂಸ್ಥೆ ಆಂಬ್ರೇ ತಿಳಿಸಿದೆ.

ಸಂಪುಟದಿಂದ ಸೆಂಥಿಲ್‌, ಪೊನ್ಮುಡಿಗೆ ಗೇಟ್‌ಪಾಸ್‌

ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ತಮಿಳುನಾಡಿನ ಡಿಎಂಕೆ ಸರ್ಕಾರದ ಸಚಿವ ಸೆಂಥಿಲ್‌ ಬಾಲಾಜಿ ಮತ್ತು ಹಿಂದೂ ಚಿಹ್ನೆಗಳ ಕುರಿತು ಕೀಳು ಹೇಳಿಕೆ ನೀಡಿದ್ದ ಸಚಿವ ಪೊನ್ಮುಡಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಸೆಂಥಿಲ್‌ ಅವರು ಸಚಿವಸ್ಥಾನವನ್ನು ತೊರೆದಿದ್ದಾರೆ. ಮತ್ತೊಂದೆಡೆ ಪೊನ್ಮುಡಿ ಕೀಳು ಹೇಳಿಕೆ ಬೆನ್ನಲ್ಲೇ ದೇಶಾದ್ಯಂತ ಭಾರಿ ಆಕ್ರೋಶ ಹೊರಹೊಮ್ಮೆ, ಮದ್ರಾಸ್‌ ಹೈಕೋರ್ಟ್‌ ಪ್ರಕರಣ ದಾಖಲಿಸಿಕೊಂಡಿದ್ದು, ಹೀಗಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

ದಿಲ್ಲಿಯ 800 ಗುಡಿಸಲಿಗೆ ಬೆಂಕಿ; 2 ಮಕ್ಕಳ ಸಾವು

ನವದೆಹಲಿ: ದೆಹಲಿಯ ರೋಹಿಣಿ ನಗರದ ಜುಗ್ಗಿ ಕ್ಲಸ್ಟರ್‌ನಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ 800 ಗುಡಿಸಲು ಅಗ್ನಿಗೆ ಸುಟ್ಟು ಭಸ್ಮವಾಗಿದ್ದು ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿ, 5 ಜನ ಗಾಯಗೊಂಡಿದ್ದಾರೆ. 5 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದ 800ಕ್ಕೂ ಹೆಚ್ಚು ಗುಡಿಸಲುಗಳಿಗೆ ಬೆಂಕಿ ಆವರಿಸಿದ್ದು, 25ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸತತ 3 ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿವೆ.