ಸಾರಾಂಶ
ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯಲ್ಲಿ ರಾಜ್ಯಪಠ್ಯಕ್ರಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೂ ವಿಷಯವಾರು ತೇರ್ಗಡೆಗೆ ಇರುವ ಅಂಕವನ್ನು 35ರ ಬದಲು 33ಕ್ಕೆ ಇಳಿಸಬೇಕೆಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಬೆಂಗಳೂರು : ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯಲ್ಲಿ ರಾಜ್ಯಪಠ್ಯಕ್ರಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೂ ವಿಷಯವಾರು ತೇರ್ಗಡೆಗೆ ಇರುವ ಅಂಕವನ್ನು 35ರ ಬದಲು 33ಕ್ಕೆ ಇಳಿಸಬೇಕೆಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ಇದು ಕೇವಲ 2 ಅಂಕದ ವಿಚಾರವಲ್ಲ. ಎಲ್ಲ ಮಕ್ಕಳಿಗೂ ಒಂದೇ ನಿರ್ದಿಷ್ಟ ಪ್ರಮಾಣದ ಅಂಕಗಳಿಗೆ ಪರೀಕ್ಷೆ ನಡೆಸುವಾಗ, ಉತ್ತೀರ್ಣಕ್ಕೆ ನಿಗದಿಪಡಿಸಿರುವ ಅಂಕಗಳಲ್ಲಿ ವ್ಯತ್ಯಾಸ ಇದ್ದರೆ ತಾರತಮ್ಯ ಮಾಡಿದಂತಾಗುತ್ತದೆ. ಈ ತಾರತಮ್ಯ ಸರಿಪಡಿಸುವ ಸಂಬಂಧ ಕ್ಯಾಮ್ಸ್ ತಜ್ಞರ ದುಂಡು ಮೇಜಿನ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಶಿಕ್ಷಣ ಇಲಾಖೆಗೆ ಈ ಹಿಂದೆಯೇ ನೀಡಿದೆ.
ಆದರೆ, ಈವರೆಗೂ ಇಲಾಖೆ ಸಚಿವರಾಗಲಿ, ಅಧಿಕಾರಿಗಳಾಗಲಿ ಈ ತಾರತಮ್ಯ ಸರಿಪಡಿಸಲು ಕ್ರಮ ವಹಿಸಿಲ್ಲ. ಕೂಡಲೇ ಈ ತಾರತಮ್ಯ ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಬೇಕು. ಇದರಿಂದ ಒಂದೆರಡು ಅಂಕಗಳಲ್ಲಿ ಅನುತ್ತೀರ್ಣರಾಗುವ ಸಾವಿರಾರು ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸಹಕಾರಿಯಾಗುತ್ತದೆ ಎಂದು ಮನವಿ ಮಾಡಿದ್ದಾರೆ.