ಸಾರಾಂಶ
ಪಟನಾ: ದೇಶಾದ್ಯಂತ ಬಿರುಗಾಳಿ ಎಬ್ಬಿಸಿದ್ದ ಬಿಹಾರದ ಜಾತಿಗಣತಿ ವರದಿಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ರಾಜ್ಯದ ಶೇ.64ರಷ್ಟು ಕುಟುಂಬಗಳ ಆದಾಯ ಮಾಸಿಕ 10 ಸಾವಿರ ರು.ಗಿಂತ ಕಡಿಮೆ ಇದೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಇದರಿಂದಾಗಿ ರಾಜ್ಯದ ಜನ ತೀರಾ ಕಡುಬಡವರಾಗಿದ್ದಾರೆ ಎಂಬುದು ಸಾಬೀತಾದಂತಾಗಿದೆ.
ರಾಜ್ಯದಲ್ಲಿ ಶೇ.34ರಷ್ಟು ಕುಟುಂಬಗಳ ಮಾಸಿಕ ಆದಾಯ 6 ಸಾವಿರ ರು.ಗಿಂತ ಕಡಿಮೆ ಇದೆ. ಇನ್ನು ಶೇ.29.61ರಷ್ಟು ಕುಟುಂಬಗಳ ಮಾಸಿಕ ಆದಾಯ 10 ಸಾವಿರ ರು.ಗಿಂತ ಕಡಿಮೆ ಇದೆ ಎಂದು ವರದಿ ಹೇಳಿದೆ. ಇದನ್ನು ಒಟ್ಟಾರೆ ಸೇರಿಸಿದರೆ ಶೇ.64ರಷ್ಟು ಕುಟುಂಬಗಳು ಮಾಸಿಕ ಕೇವಲ 10 ಸಾವಿರ ರು.ನಲ್ಲಿ ಜೀವನ ನಡೆಸುತ್ತಿವೆ ಎಂದು ಗೊತ್ತಾಗುತ್ತದೆ.ಇದೇ ವೇಳೆ, ಶೇ.28ರಷ್ಟು ಕುಟುಂಬಗಳು 10 ಸಾವಿರ ರು.ನಿಂದ 50 ಸಾವಿರ ರು.ವರೆಗಿನ ಆದಾಯದಲ್ಲಿ ಜೀವನ ನಿರ್ವಹಣೆ ಮಾಡುತ್ತಿವೆ. ಕೇವಲ ಶೇ.4ರಷ್ಟು ಕುಟುಂಬಗಳ ಆದಾಯ ಮಾತ್ರ 50 ಸಾವಿರ ರು.ಗಿಂತ ಹೆಚ್ಚಿದೆ ಎಂದು ಜಾತಿ ಗಣತಿ ವರದಿ ಹೇಳಿದೆ.
ಇನ್ನು ರಾಜ್ಯದ 13.1 ಕೋಟಿ ಜನಸಂಖ್ಯೆಯಲ್ಲಿ ಶೇ.80ರಷ್ಟು ಜನರು ಹಿಂದುಳಿದ ಅಥವಾ ತುಳಿತಕ್ಕೊಳಗಾದ ವರ್ಗಗಳಿಗೆ ಸೇರಿದ್ದಾರೆ ಎಂದೂ ಅದು ಕಳವಳ ವ್ಯಕ್ತಪಡಿಸಿದೆ.ಜಾತಿವಾರು ಬಡವರು:
ಪರಿಶಿಷ್ಟ ಜಾತಿ ಮತ್ತು ಪಂಗಡದಲ್ಲಿ ಶೇ.42ರಷ್ಟು ಜನ ಬಡವರಾಗಿದ್ದಾರೆ. ಪರಿಶಿಷ್ಟ ಜಾತಿಯಲ್ಲಿ ಶೇ.5.76ರಷ್ಟು ಜನ ಮಾತ್ರ 11 ಮತ್ತು 12ನೇ ತರಗತಿ ಓದಿದ್ದಾರೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.9ರಷ್ಟು ಜನ ಮಾತ್ರ 12ನೇ ತರಗತಿ ಓದಿದ್ದಾರೆ. 2017-18ರ ರಾಷ್ಟ್ರೀಯ ದತ್ತಾಂಶ ಕಚೇರಿ ವರದಿಗೆ ಹೋಲಿಸಿದರೆ ಇದರ ಪ್ರಮಾಣ ಶೇ.6ರಷ್ಟು ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.ಪರಿಶಿಷ್ಟರಲ್ಲೇ ಒಳವರ್ಗೀಕರಣ ಮಾಡಿದರೆ, ಪರಿಶಿಷ್ಟ ಜಾತಿಯ ಶೇ.42.93ರಷ್ಟು ಕುಟುಂಬಗಳು, ಪರಿಶಿಷ್ಟ ಪಂಗಡದ ಶೇ.42.7ರಷ್ಟು ಕುಟುಂಬಗಳು ಬಡತನವನ್ನು ಹೊಂದಿವೆ. ಇತರ ಹಿಂದುಳಿದ ವರ್ಗಗಳಲ್ಲಿ ಶೇ.33.16 ಹಾಗೂ ತೀವ್ರ ಹಿಂದುಳಿದ ವರ್ಗದಲ್ಲಿ ಶೇ.33.58 ಹಾಗೂ ಇತರೆ ಜಾತಿಗಳಲ್ಲಿ ಶೇ.23.72ರಷ್ಟು ಮತ್ತು ಸಾಮಾನ್ಯ ವರ್ಗದಲ್ಲಿ ಶೇ.25ರಷ್ಟು ಬಡವರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.