ಸಾರಾಂಶ
ಜಮ್ಮು : ಇಲ್ಲಿನ ಕಿಶ್ತ್ವಾರ್ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಭಾರೀ ಮೇಘಸ್ಫೋಟ ಸಂಭವಿಸಿದೆ. ಇಬ್ಬರು ಸಿಐಎಸ್‌ಎಫ್ ಸಿಬ್ಬಂದಿ ಸೇರಿ 46 ಮಂದಿ ಬಲಿಯಾಗಿದ್ದು, 120 ಮಂದಿಯನ್ನು ರಕ್ಷಿಸಲಾಗಿದೆ. 38 ಜನರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಆಘಾತ ವ್ಯಕ್ತಪಡಿಸಿದ್ದಾರೆ. ಮೇಘಸ್ಫೋಟದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒಮರ್ ಮಾಹಿತಿ ನೀಡಿದ್ದಾರೆ. ಕೇಂದ್ರದಿಂದ ಸಕಲ ರಕ್ಷಣಾ ನೆರವು ನೀಡುವ ಬಗ್ಗೆ ಮೋದಿ ಹಾಗೂ ಶಾ ಭರವಸೆ ನೀಡಿದ್ದಾರೆ.ಆಗಿದ್ದೇನು?:
ಮಚೈಲ್ ಮಾತಾ ಜಾತ್ರೆಗಾಗಿ ಚಶೋತಿ ಎಂಬಲ್ಲಿ ಜನ ನೆರೆದಿದ್ದ ವೇಳೆ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ಮೇಘಸ್ಫೋಟ ಸಂಭವಿಸಿ ಭಾರೀ ಮಳೆಯಾಗಿದೆ. ಆಗ ಹಠಾತ್ ಪ್ರವಾಹ ಉಂಟಾಗಿ ಜನರು ಹಾಗೂ ಭದ್ರತೆಗಿದ್ದ ಸಿಐಎಸ್ಎಫ್ ಸಿಬ್ಬಂದಿ ಸೇರಿ ಅನೇಕರು ಕೊಚ್ಚಿಕೊಂಡು ಹೋಗಿದ್ದಾರೆ.
ಘಟನೆಯಿಂದ ಅಪಾರ ನಷ್ಟವಾಗಿದ್ದು, ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್, ಸೇನೆ, ಸ್ಥಳೀಯರಿಂದ ರಕ್ಷಣಾ ಕಾರ್ಯ ಮುಂದುವರಿಸಿವೆ. ಅತ್ತ ಯಾತ್ರೆಗೆ ಕಡಿವಾಣ ಹಾಕಲಾಗಿದೆ. ನಿರಂತರ ಮಳೆಯು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಮಾಡಿದೆ.
ಒಂದು ಗಂಟೆಯಲ್ಲಿ 10 ಸೆಂ.ಮೀ. ಮಳೆ ಸುರಿದರೆ ಮೇಘಸ್ಫೋಟ ಎನ್ನುತ್ತಾರೆ.
ಸಿಎಂ, ಶಾ ಆಘಾತ:
‘ಘಟನೆ ಸಂಭವಿಸಿದ ಪ್ರದೇಶಗಳಿಂದ ಆ ಕುರಿತ ಮಾಹಿತಿಗಳು ಒಂದೊಂದಾಗಿ ಲಭಿಸುತ್ತಿವೆ. ಸುದ್ದಿ ಕಠೋರವಾದರೂ ನಿಖರವಾಗಿದೆ’ ಎಂದು ಸಿಎಂ ಒಮರ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಜತೆಗೆ, ಸ್ವಾತಂತ್ರ್ಯ ದಿನದ ಮುನ್ನಾ ದಿನದ ಚಹಾಕೂಟ ರದ್ದು ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಮಿತ್ ಶಾ, ‘ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಸಿಎಂ ಅವರಿಂದ ಮೇಘಸ್ಫೋಟಕ್ಕೆ ಸಂಬಂಧಿಸಿ ಮಾಹಿತಿ ಪಡೆದೆ’ ಎಂದರು.