ಧರಾಲಿ ಪ್ರವಾಹಕ್ಕೆ ಮೇಘಸ್ಫೋಟ ಅಲ್ಲ, ಹಿಮಕೊಳ ಸ್ಫೋಟ ಕಾರಣ?

| N/A | Published : Aug 07 2025, 06:02 AM IST

Dharali Landslide
ಧರಾಲಿ ಪ್ರವಾಹಕ್ಕೆ ಮೇಘಸ್ಫೋಟ ಅಲ್ಲ, ಹಿಮಕೊಳ ಸ್ಫೋಟ ಕಾರಣ?
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಾಖಂಡದ ಉತ್ತರಕಾಶಿಯಲ್ಲಿ ಇಡೀ ಹಳ್ಳಿಯನ್ನೇ ಭೂಸಮಾಧಿ ಮಾಡಿದ ಜಲಪ್ರವಾಹ ಮೇಘಸ್ಫೋಟದಿಂದ ಸಂಭವಿಸಿದ್ದಲ್ಲ, ಬದಲಾಗಿ ಹಿಮಕೊಳಗಳ ಸ್ಫೋಟದಿಂದ ಸಂಭವಿಸಿದ್ದು ಎಂಬ ಅಂಶವನ್ನು ತಜ್ಞರು ವಿಶ್ಲೇಷಿಸಿದ್ದಾರೆ.

ನವದೆಹಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಇಡೀ ಹಳ್ಳಿಯನ್ನೇ ಭೂಸಮಾಧಿ ಮಾಡಿದ ಜಲಪ್ರವಾಹ ಮೇಘಸ್ಫೋಟದಿಂದ ಸಂಭವಿಸಿದ್ದಲ್ಲ, ಬದಲಾಗಿ ಹಿಮಕೊಳಗಳ ಸ್ಫೋಟದಿಂದ ಸಂಭವಿಸಿದ್ದು ಎಂಬ ಅಂಶವನ್ನು ತಜ್ಞರು ವಿಶ್ಲೇಷಿಸಿದ್ದಾರೆ.

ಒಂದು ಗಂಟೆಯೊಳಗೆ ಸೀಮಿತ ಪ್ರದೇಶದಲ್ಲಿ ಕನಿಷ್ಠ 100 ಮಿ.ಮೀ. ಮಳೆಯಾದರೆ ಅದನ್ನು ಮೇಘಸ್ಫೋಟ ಎಂದು ಪರಿಗಣಿಸಲಾಗುತ್ತದೆ. ಉತ್ತರಕಾಶಿಯ ಹರ್ಶಿಲ್ ಮತ್ತು ಭಟ್ವಾರಿಯಲ್ಲಿ 24 ಗಂಟೆಗಳಲ್ಲಿ ಕ್ರಮವಾಗಿ 9 ಮಿ.ಮೀ. ಮತ್ತು 11 ಮಿ.ಮೀ. ಮಳೆಯಾಗಿದೆ. ಹಾಗಾಗಿ ಇದು ಮೇಘಸ್ಫೋಟವಲ್ಲ ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಡೂನ್ ವಿವಿ ಪ್ರಾಧ್ಯಾಪಕ ಹಾಗೂ ಹಿಮಾಲಯ ಪ್ರದೇಶದ ಸಂಶೋಧಕ ಡಾ. ಡಿ.ಡಿ. ಚೌನಿಯಾಲ್, ‘ಜಲಸಮಾಧಿಯಾಗಿರುವ ಧರಾಲಿ ಗ್ರಾಮದ ಉತ್ತರದ ಹಿಮಾಚ್ಛಾದಿತ ಪರ್ವತಗಳಲ್ಲಿ ಹಲವು ಹಿಮಕೊಳಗಳಿವೆ. ಕಡಿದಾದ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಖೀರ್ ಗಂಗಾ ನದಿ ಹುಟ್ಟುತ್ತದೆ. ಭಾರೀ ಮಳೆ ಮತ್ತು ಹಿಮ ಕರಗುವಿಕೆಯಿಂದಾಗಿ, ಇಲ್ಲಿರುವ ಹಿಮಕೊಳಗಳು ತುಂಬಿವೆ. ನನ್ನ ಪ್ರಕಾರ, ಈ ಹಿಮಕೊಳಗಳ ಪೈಕಿ ಒಂದು ಸ್ಫೋಟಗೊಂಡಿದೆ. ಆ ಬಳಿಕ ಇತರ ಕೊಳಗಳೂ ಸ್ಫೋಟಗೊಳ್ಳುವಂತೆ ಮಾಡಿದೆ. ಅನಂತರ ನೀರು ಮತ್ತು ಶಿಲೆಗಳು ಪ್ರಬಲವಾಗಿ ಕೆಳಕ್ಕೆ ಹರಿದು, ಧರಾಲಿ ಗ್ರಾಮ ಕೊಚ್ಚಿಕೊಂಡು ಹೋಗಿದೆ’ ಎಂದು ತಿಳಿಸಿದ್ದಾರೆ.

ಅವೈಜ್ಞಾನಿಕವಾಗಿ ಗ್ರಾಮದ ನಿರ್ಮಾಣ:

‘ಹಳೆದ ಧರಾಲಿ ಗ್ರಾಮವನ್ನು ಖೀರ್‌ ಗಂಗಾ ನದಿಯ ಬಲಕ್ಕೆ ನಿರ್ಮಿಸಲಾಗಿತ್ತು. ಆ ಪ್ರದೇಶ ಪ್ರವಾಹ ಉಂಟಾದರೂ ಸುರಕ್ಷಿತವಾಗಿದೆ. ಆದರೆ ಹೊಸ ಗ್ರಾಮವನ್ನು ನದಿಯ ಎಡಭಾಗಕ್ಕೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ನೈಸರ್ಗಿಕ ವಿಕೋಪಗಳು ಉಂಟಾದರೂ ಸುರಕ್ಷಿತವಾಗಿರುವಂತೆ ಯೋಜನೆ ಸಿದ್ಧಪಡಿಸದೆ ನಿರ್ಮಿಸಿದ್ದರಿಂದ ಈ ಪರಿಸ್ಥಿತಿ ಬಂದಿದೆ’ ಎಂದು ಡಾ. ಚೌನಿಯಾಲ್ ವಿಶ್ಲೇಷಿಸಿದ್ದಾರೆ.

ಧರಾಲಿಯಲ್ಲಿ 150ಕ್ಕೂ ಹೆಚ್ಚು ಮಂದಿ ರಕ್ಷಣೆ

ಉತ್ತರಕಾಶಿ: ಮೇಘಸ್ಫೋಟ, ಆ ಬಳಿಕ ಕಂಡುಕೇಳರಿಯದ ದಿಢೀರ್‌ ಪ್ರವಾಹದಿಂದಾಗಿ ಬಹುತೇಕ ಭೂಸಮಾಧಿಯಾಗಿರುವ ಉತ್ತರಾಖಂಡದ ಪುಟ್ಟ ಗ್ರಾಮದ ಧರಾಲಿಯಲ್ಲಿ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಗ್ರಾಮದಲ್ಲಿ ಬುಧವಾರ ಮತ್ತೊಂದು ಶವವನ್ನು ಅವಶೇಷಗಳಡಿ ಮೇಲೆತ್ತಲಾಗಿದ್ದು, ಈ ಮೂಲಕ ದುರಂತದಲ್ಲಿ ಮೃತರ ಸಂಖ್ಯೆ 5ಕ್ಕೇರಿಂತಾಗಿದೆ.

ಈಗಾಗಲೇ 150ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದ್ದು, ನಾಪತ್ತೆಯಾಗಿರುವ 11 ಮಂದಿ ಯೋಧರು ಸೇರಿ 100ಕ್ಕೂ ಹೆಚ್ಚು ಮಂದಿಗಾಗಿ ಹುಡುಕಾಟ ಮುಂದುವರಿದಿದೆ.

ಮಂಗಳವಾರ ಮಧ್ಯಾಹ್ನ 1.40ರ ಸುಮಾರಿಗೆ ಮೇಘಸ್ಫೋಟದಿಂದಾಗಿ ದಿಢೀರ್‌ ಭಾರೀ ಮಳೆಯಾಗಿದ್ದು, ಇದರಿಂದ ಗುಡ್ಡದ ಮೇಲಿಂದ ಹರಿದು ಬಂದ ಕೆಸರುಮಿಶ್ರಿತ ಪ್ರವಾಹದ ನೀರು ನುಗ್ಗಿ ಗಂಗೋತ್ರಿ ಯಾತ್ರೆ ಮಾರ್ಗದ ಕೊನೆಯ ಹಳ್ಳಿಯಾದ ಧರಾಲಿ ಗ್ರಾಮಕ್ಕೆ ನುಗ್ಗಿದೆ. ಪ್ರವಾಹದ ತೀವ್ರತೆಗೆ ಈ ಪುಟ್ಟ ಊರಿನ ಹಲವು ಮನೆಗಳು, ಹೋಟೆಲ್‌ಗಳು, ಹೋಮ್‌ಸ್ಟೇಗಳು ಕೊಚ್ಚಿಕೊಂಡು ಹೋಗಿವೆ. 11 ಮಂದಿ ಸೇನಾ ಸಿಬ್ಬಂದಿ, ಕೇರಳದ 28 ಮಂದಿ ತಂಡ ಸೇರಿ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಸೇನೆಯ ನೆರವು:

ಧರಾಲಿ ಗ್ರಾಮದಲ್ಲಿ ರಕ್ಷಣಾ ಕಾರ್ಯಕ್ಕೆ ಇದೀಗ ಭಾರತೀಯ ವಾಯು ಸೇನೆ ಕೂಡ ಕೈಜೋಡಿಸಿದೆ. ಎಂಐ-17ಎಸ್‌, ಎಎಲ್‌ಎಚ್‌ ಎಂಕೆ ಹೆಲಿಕಾಪ್ಟರ್‌ಗಳು, ಎನ್‌-32ಎಸ್‌, ಸಿ-295ಎಸ್‌ ವಿಮಾನಗಳು ಪರಿಹಾರ ಸಾಮಗ್ರಿಗಳೊಂದಿಗೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ ಬಂದಿಳಿದಿವೆ. ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ಡೆಹ್ರಾಡೂನ್‌ನಿಂದ ಗ್ರಾಮದತ್ತ ಏರ್‌ಲಿಫ್ಟ್‌ ಮಾಡಲಾಗಿದೆ.

ಹಿಮಾಚಲದಲ್ಲಿ ಭಾರೀ ಮಳೆ: 413 ಜನರ ರಕ್ಷಣೆ

ಶಿಮ್ಲಾ: ಭಾರೀ ಮಳೆಯಿಂದಾಗಿ ಜು.15ರಂದು ಆರಂಭವಾಗಿರುವ ಹಿಮಾಚಲ ಪ್ರದೇಶದ ಕಿನ್ನರ್ ಲಾಸ ಯಾತ್ರೆಯನ್ನು ಬುಧವಾರ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಇದೇ ವೇಳೆ ಈಗಾಗಲೇ ಮಳೆಯಿಂದಾಗಿ ದಾರಿ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ 413 ಯಾತ್ರಾರ್ಥಿಗಳನ್ನು ರಕ್ಷಣೆ ಮಾಡಿ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಕಿನ್ನರ್‌ ಜಿಲ್ಲೆಯಲ್ಲಿ ಬುಧ‍ವಾರ ಸಂಭವಿಸಿದ ಮೇಘಸ್ಫೋಟ ಸಂಭವಿಸಿದ್ದು, ದಿಢೀರ್‌ ಪ್ರವಾಹದ ವಾತಾವರಣ ನಿರ್ಮಾಣವಾಗಿದೆ. ಕಿನ್ನರ್‌ ಕೈಲಾಸ ತೀರ್ಥಯಾತ್ರೆಯ ಮಾರ್ಗವಾದ ತಂಗ್‌ಲಿಪ್ಪಿ ಮತ್ತು ಕಂಗರಂಗ್‌ನಲ್ಲಿ ನಿರ್ಮಿಸಲಾಗಿದ್ದ ಎರಡು ತಾತ್ಕಾಲಿಕ ಸೇತುವೆಗಳು ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ಯಾತ್ರಾರ್ಥಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಇಂಡೋ-ಟಿಬೆಟನ್‌ ಬಾರ್ಡರ್‌ ಪೊಲೀಸ್‌(ಐಟಿಬಿಪಿ) ಮತ್ತು ಎನ್‌ಡಿಆರ್‌ಎಫ್‌ ವಿಶೇಷ ಕಾರ್ಯಾಚರಣೆ ನಡೆಸಿ ಭಕ್ತರನ್ನು ರಕ್ಷಿಸಿದೆ.

ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಸೇರಿ ಈಗಾಗಲೇ 617 ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ.

Read more Articles on