ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಇನ್ನಿಬ್ಬರು ಆಯುಕ್ತರ ಸಲಹೆಗಳಿಗೆ ಕಿವಿಗೊಡದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ, ಸಿಇಸಿ ಹುದ್ದೆಗೆ ಜ್ಞಾನೇಶ್‌ ಕುಮಾರ್‌ 48 ಗಂಟೆಯೊಳಗೆ ರಾಜೀನಾಮೆ ಕೊಡಬೇಕು ಎಂಬುದು ಸೇರಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) 4 ಬೇಡಿಕೆಗಳನ್ನು ಮುಂದಿಟ್ಟಿದೆ.

ನವದೆಹಲಿ: ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಇನ್ನಿಬ್ಬರು ಆಯುಕ್ತರ ಸಲಹೆಗಳಿಗೆ ಕಿವಿಗೊಡದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ, ಸಿಇಸಿ ಹುದ್ದೆಗೆ ಜ್ಞಾನೇಶ್‌ ಕುಮಾರ್‌ 48 ಗಂಟೆಯೊಳಗೆ ರಾಜೀನಾಮೆ ಕೊಡಬೇಕು ಎಂಬುದು ಸೇರಿ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) 4 ಬೇಡಿಕೆಗಳನ್ನು ಮುಂದಿಟ್ಟಿದೆ. ತಪ್ಪಿದಲ್ಲಿ, ‘ಜಂತರ್‌ ಮಂತರ್‌ 2.0’ ಪ್ರತಿಭಟನೆ ಶುರು ಮಾಡುವುದಾಗಿ ಎಚ್ಚರಿಸಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ, ‘ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳಾಗುತ್ತಿವೆ. ನಮ್ಮ ಮತದಾನದ ಹಕ್ಕನ್ನು ಕಸಿದಿರುವ ಜ್ಞಾನೇಶ್‌ ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ. ಯಾರು ಮತ ಚಲಾಯಿಸಬಹುದು ಎಂಬುದನ್ನು ಚುನಾವಣಾ ಆಯೋಗವೇ ನಿರ್ಧರಿಸುತ್ತಿದೆ’ ಎಂದು ಆರೋಪಿಸಿದರು.

ಜ್ಞಾನೇಶ್‌ 48 ಗಂಟೆಗಳಲ್ಲಿ ರಾಜೀನಾಮೆ ನೀಡಬೇಕು. ಮತಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಮುಂಬರುವ ಚುನಾವಣೆ ತಡೆಹಿಡಿಯಬೇಕು ಮತ್ತು ಸಿಇಸಿ ನೇಮಕಕ್ಕೆ 2023ರಲ್ಲಿ ಮಾಡಲಾದ ತಿದ್ದುಪಡಿ ರದ್ದು ಮಾಡಬೇಕು. ಒಂದು ವೇಳೆ 48 ಗಂಟೆಯಲ್ಲಿ ರಾಜೀನಾಮೆ ಕೊಡದೇ ಇದ್ದರೆ ದೇಶವ್ಯಾಪಿ ಪ್ರತಿಭಟನೆ ನಡೆಸಿ ಅಂತಿಮವಾಗಿ ದೆಹಲಿಯಲ್ಲಿ “ಜಂತರ್‌ಮಂತರ್‌ 2.0” ನಡೆಸಲಾಗುವುದು. ಇದಕ್ಕಾಗಿ ಎಲೆಕ್ಷನ್‌ ಕಮಿಷನ್‌ ಟೀಕ್‌ ಕರೋ ಅಭಿಯಾನ ಆರಂಭಿಸುತ್ತಿರುವುದಾಗಿ ತಿಳಿಸಿದರು.

ಸಿಇಸಿಗೆ ವಾಗ್ದಂಡನೆ: ಸಂಸತ್ತಲ್ಲಿ ನಿರ್ಣಯಕ್ಕೆ ವಿಪಕ್ಷಗಳ ತಯಾರಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಲು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಾಗ್ದಂಡನೆಯ ಗೊತ್ತುವಳಿ ಮಂಡಿಸಲು ವಿಪಕ್ಷಗಳು ಸಜ್ಜಾಗಿದ್ದು, ಈ ಕುರಿತು ಮುಂದಿನ ವಾರ ನೋಟಿಸ್‌ ನೀಡುವ ಸಾಧ್ಯತೆ ಇದೆ. ಚುನಾವಣಾ ಆಯೋಗದ ಎಲ್ಲಾ ನಿರ್ಧಾರಗಳನ್ನು ಕುಮಾರ್‌ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂಬ ತನಿಖಾ ವರದಿ ಪ್ರಕಟವಾದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ. ಸದ್ಯ ನೋಟಿಸ್‌ ಸಿದ್ಧಪಡಿಸಲಾಗುತ್ತಿದ್ದು, ಮಂಡನೆಗೂ ಮುನ್ನ ಕಾನೂನು ತಜ್ಞರ ಪರಿಶೀಲನೆಗೆ ಒಳಪಡಿಸಲಾಗುವುದು. ಇದು, ಕುಮಾರ್‌ ವಜಾಗೆ ಪ್ರತಿಪಕ್ಷಗಳು ನಡೆಸುತ್ತಿರುವ 3ನೇ ಯತ್ನವಾಗಲಿದೆ. ಈ ಹಿಂದೆ ಮಾ.12ರಂದು ಹಾಗೂ ಏ.24ರಂದು ಇಂತಹ ಯತ್ನ ನಡೆದಿತ್ತು.

ಏನೇನು ಬೇಡಿಕೆ?

1. ಜ್ಞಾನೇಶ್‌ ಕುಮಾರ್‌ ರಾಜೀನಾಮೆ

2. ಎಸ್‌ಐಆರ್‌ ಪ್ರಕ್ರಿಯೆ ಸ್ಥಗಿತ

3. ಮುಂದಿನ ಎಲ್ಲಾ ಚುನಾವಣೆ ರದ್ದು

4. ಸಿಇಸಿ ಆಯ್ದೆ ಕುರಿತ ನಿಯಮ ತಿದ್ದುಪಡಿ