ಹಿಮಾಚಲ ಪ್ರದೇಶದ ಕುಲು, ಮಂಡಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಮೇಘಸ್ಪೋಟ: 50 ಮಂದಿ ಸಾವಿನ ಶಂಕೆ

| Published : Aug 04 2024, 01:15 AM IST / Updated: Aug 04 2024, 05:05 AM IST

ಸಾರಾಂಶ

ಹಿಮಾಚಲ ಪ್ರದೇಶದ ಕುಲು, ಮಂಡಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ನಾಪತ್ತೆ ಆಗಿದ್ದ ಸುಮಾರು 50 ಜನರು ಸಾವನ್ನಪ್ಪಿರಬಹುದು ಎಂದ ಹಿಮಾಚಲ ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.

ಶಿಮ್ಲಾ: ಹಿಮಾಚಲ ಪ್ರದೇಶದ ಕುಲು, ಮಂಡಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ನಾಪತ್ತೆ ಆಗಿದ್ದ ಸುಮಾರು 50 ಜನರು ಸಾವನ್ನಪ್ಪಿರಬಹುದು ಎಂದ ಹಿಮಾಚಲ ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.

ಶನಿವಾರ ಮಾತನಾಡಿದ ಸಿಂಗ್‌, ‘ದುರಂತದಲ್ಲಿ ನಾಪತ್ತೆ ಆದ 50 ಜನರು ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಆದರೆ ನಿಖರ ಅಂಕಿಅಂಶ, ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಗೊತ್ತಾಗಲಿದೆ’ ಎಂದರು.

ಮೇಘಸ್ಫೋಟದಿಂದ ಅಪಾರ ಆಸ್ತಿಪಾಸ್ತಿಗಳು ನಷ್ಟವಾಗಿದ್ದು, ಸಂತ್ರಸ್ತ ಕುಟುಂಬಗಳಿಗೆ ಸಿಎಂ ಸುಖವಿಂದರ್‌ ಸಿಂಗ್ 50 ಸಾವಿರ ರು. ಪರಿಹಾರ ಘೋಷಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಆ.7ರ ತನಕ ಮಳೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೇದಾರನಾಥ: ಮಳೆಯಿಂದ ಸಿಲುಕಿದ್ದ 10,500 ಜನರ ತೆರವು

 ರುದ್ರಪ್ರಯಾಗ : ಉತ್ತರಾಖಂಡದ ಪವಿತ್ರ ಧಾರ್ಮಿಕ ಕ್ಷೇತ್ರ ಕೇದಾರನಾಥ್‌ ಯಾತ್ರೆಗೆ ತೆರಳುವ ಹಂತದಲ್ಲಿ ವಿವಿಧೆಡೆ ಭಾರೀ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿರುವ ಯಾತ್ರಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ. 

10,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಇದರಲ್ಲಿ ಕೆಲವರನ್ನು ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ರವಾನಿಸಲಾಗಿದೆ.ಕೇದರನಾಥ, ಭೀಮಾಲಿ ಮತ್ತು ಗೌರಿಕುಂಡದಲ್ಲಿ ಸುಮಾರು 1,300 ಯಾತ್ರಿಕರು ಸಿಲುಕಿಕೊಂಡಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ತಂಡಗಳು ಯತ್ರಾರ್ಥಿಗಳನ್ನು ರಕ್ಷಿಸಲು ಶ್ರಮಿಸುತ್ತಿದ್ದು, ಭಾರತೀಯ ವಾಯುಪಡೆಯ ಚಿನೋಕ್ ಮತ್ತು ಎಂಐ17 ಹೆಲಿಕಾಪ್ಟರ್‌ ಕೂಡಾ ಕೈಜೋಡಿಸಿದ್ದು ತ್ವರಿತ ನೆರವು ಲಭಿಸಲು ಸಾಧ್ಯವಾಗಿದೆ. ರುದ್ರಪ್ರಯಾಗದ ವರಿಷ್ಠಾಧಿಕಾರಿ ವಿಶಾಖ ಅಶೋಕ್‌ ಭದನೆ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರು ಕಾಣೆಯಾದ್ದಾರೆ ಎಂಬ ವದಂತಿಗಳನ್ನು ನಂಬಬೇಡಿ. ಇಲ್ಲಿ ಮೊಬೈಲ್‌ ಸಿಗ್ನಲ್‌ ಸಿಗದ ಕಾರಣ ಕೆಲವು ಯಾತ್ರಿಕರು ತಮ್ಮ ಕುಟುಂಬಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರನ್ನು ಸುರಕ್ಷಿತವಾಗಿ ಕಾಪಾಡಲಾಗುತ್ತದೆ ಎಂದು ಹೇಳಿದರು.

ಕೇರಳದ ವಯನಾಡು ದುರಂತದ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟದಿಂದ ಜಲಪ್ರಳಯ ಸಂಭವಿಸಿ, ಪ್ರಾಣಹಾನಿ ಹಾಗೂ ಹಲವು ಅನಾಹುತಗಳು ಸಂಭವಿಸಿರ್ಧದ್ದವು.