ಮೌನಿ ಅಮಾವಾಸ್ಯೆ ಹಿನ್ನೆಲೆ ಅಯೋಧ್ಯೆ ಬಾಲರಾಮನ ದರ್ಶನಕ್ಕೆ 3 ದಿನದಲ್ಲಿ 50 ಲಕ್ಷ ಭಕ್ತರ ಆಗಮನ

| N/A | Published : Jan 30 2025, 12:30 AM IST / Updated: Jan 30 2025, 05:43 AM IST

ಮೌನಿ ಅಮಾವಾಸ್ಯೆ ಹಿನ್ನೆಲೆ ಅಯೋಧ್ಯೆ ಬಾಲರಾಮನ ದರ್ಶನಕ್ಕೆ 3 ದಿನದಲ್ಲಿ 50 ಲಕ್ಷ ಭಕ್ತರ ಆಗಮನ
Share this Article
  • FB
  • TW
  • Linkdin
  • Email

ಸಾರಾಂಶ

ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಮಹಾಕುಂಭಕ್ಕೆ ಜನಸಾಗರವೇ ಹರಿದುಬಂದಿದ್ದು, ಅಯೋಧ್ಯೆ ರಾಮಮಂದಿರಕ್ಕೆ ಬರುವವರ ಸಂಖ್ಯೆಯೂ ಅಧಿಕವಾಗಿದೆ.

ಅಯೋಧ್ಯಾ: ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಮಹಾಕುಂಭಕ್ಕೆ ಜನಸಾಗರವೇ ಹರಿದುಬಂದಿದ್ದು, ಅಯೋಧ್ಯೆ ರಾಮಮಂದಿರಕ್ಕೆ ಬರುವವರ ಸಂಖ್ಯೆಯೂ ಅಧಿಕವಾಗಿದೆ. ಕಳೆದ 3 ದಿನದಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಇದು ವಸಂತ ಪಂಚಮಿವರೆಗೂ ಮುಂದುವರೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾಕುಂಭ ಮೇಳಕ್ಕೆ ಬರುವ ಭಕ್ತರು ಅಲ್ಲಿಂದ ಅಯೋಧ್ಯೆಗೂ ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಜನದಟ್ಟಣೆ ಹೆಚ್ಚಿದ್ದು, ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸೌದಿಯಲ್ಲಿ ಭೀಕರ ರಸ್ತೆ ಅಪಘಾತ: ಭಾರತೀಯ ಮೂಲದ 9 ಮಂದಿ ಸಾವು

ನವದೆಹಲಿ: ಸೌದಿ ಅರೇಬಿಯಾದ ಜಿಝಾನ್‌ನಲ್ಲಿ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 9 ಭಾರತೀಯರು ಸೇರಿ 15 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ತೆಲಂಗಾಣದವರು ಎಂದು ತಿಳಿದುಬಂದಿದೆ. ವಿವಿಧ ಕಂಪನಿಗಳಲ್ಲಿ ಕೆಲಸಕ್ಕಿದ್ದವರು ಜಿಝಾನ್‌ನಲ್ಲಿರುವ ತಮ್ಮ ಕೆಲಸದ ಸ್ಥಳಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅದು ಟ್ರೈಲರ್‌ಗೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಒಟ್ಟು 26 ಜನರಿದ್ದರು. ಈ ಪೈಕಿ 15 ಜನರು ಸಾವನ್ನಪ್ಪಿದ್ದು, 11 ಮಂದಿಗೆ ಗಂಭೀರ ಗಾಯಗಳಾಗಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಘಟನೆ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಜೆಡ್ಡಾದಲ್ಲಿ ಕಾನ್ಸುಲ್ ಜನರಲ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಎಐ ಜೊತೆಗೆ ಸ್ವಂತ ಬುದ್ಧಿವಂತಿಕೆ ಇರಲಿ: ಮುಕೇಶ್‌ ಅಂಬಾನಿ

ಗಾಂಧಿನಗರ : ‘ಕೃತಕ ಬುದ್ಧಿಮತ್ತೆಯಲ್ಲಿ ವಿದ್ಯಾರ್ಥಿಗಳು ಪ್ರಾವಿಣ್ಯತೆ ಗಳಿಸಿದ್ದಾರೆ. ಆದರೆ ಅದರ ಜೊತೆಗೆ ಜೀವನದಲ್ಲಿ ಯಶಸ್ಸು ಸಾಧಿಸಲು ಸ್ವಂತ ಬುದ್ಧಿವಂತಿಕೆಯೂ ಅಗತ್ಯ’ ಎಂದು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಪಂಡಿತ್ ದೀನ್ ದಯಾಳ್ ಎನರ್ಜಿ ಯೂನಿವರ್ಸಿಟಿ (ಪಿಡಿಇಯು) ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮುಕೇಶ್‌ ಅಂಬಾನಿ ಎಐ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ‘ಕೃತಕ ಬುದ್ಧಿಮತ್ತೆಯನ್ನು ಸಾಧನವಾಗಿ ಬಳಸುವಲ್ಲಿ ಪ್ರವೀಣರಾಗಿರಬೇಕು. ಆದರೆ ನಿಮ್ಮ ಬುದ್ಧಿವಂತಿಕೆ ಬಳಸುವುದನ್ನು ನಿಲ್ಲಿಸಬೇಡಿ. ನೀವು ವಿಶ್ವವಿದ್ಯಾಲಯದಿಂದ ಹೊರಹೋದ ತಕ್ಷಣ ಜೀವನದ ವಿಶ್ವ ವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಬೇಕು. ಅಲ್ಲಿ ಕ್ಯಾಂಪಸ್ , ತರಗತಿ, ಬೋಧನಾ ಶಿಕ್ಷಕರು ಇರುವುದಿಲ್ಲ. ಜೀವನದಲ್ಲಿ ಮುಂದೆ ಸಾಗಲು ನಿಮ್ಮ ಬುದ್ಧಿವಂತಿಕೆ ನೆರವಾಗುತ್ತದೆ’ ಎಂದರು.

10 ಗ್ರಾಂ ಚಿನ್ನದ ದರ ಈಗ 83750ಕ್ಕೇರಿಕೆ: ಸಾರ್ವಕಾಲಿಕ ಗರಿಷ್ಠ

ನವದೆಹಲಿ: ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಿದ್ದು, ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ ಚಿನ್ನದ ದರ 910 ರು.ಗೆ ಏರಿಕೆಯಾಗಿ 83,750 ರು.ಗೆ ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ದರವಾಗಿದೆ. ಇದೇ ವೇಳೆ ಬೆಳ್ಳಿಯ ದರದಲ್ಲಿಯೂ ಏರಿಕೆಯಾಗಿದ್ದು, 1 ಕೇಜಿ ಬೆಳ್ಳಿಯ ದರ 1000 ರು. ಏರಿಕೆಯೊಂದಿಗೆ 93,000 ರು.ಗೆ ತಲುಪಿದೆ. ಆಭರಣ ಮತ್ತು ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಖರೀದಿಸುತ್ತಿದ್ದು ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಬೆಲೆ ಏರಿಕೆ ಆಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಹೇಳಿದೆ.