ವೆನಿಜುವೆಲಾಗೆ ನುಗ್ಗಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೋ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದು ತಂದಿರುವ ಅಮೆರಿಕದ ಕ್ರಮದ ಕುರಿತು ನಾನಾ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಬಹುಮುಖ್ಯವಾಗಿ, ಒಂದು ದೇಶದ ಸೈನ್ಯ ಮತ್ತೊಂದು ದೇಶದೊಳಗೆ ನುಗ್ಗಿ ಬಂಧಿಸುವುದು ಕಾನೂನು ಬದ್ಧವೇ ಎಂಬ ಪ್ರಶ್ನೆಗಳು ಎದ್ದಿವೆ
ವಾಷಿಂಗ್ಟನ್: ವೆನಿಜುವೆಲಾ ದೇಶದೊಳಗೆ ನುಗ್ಗಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೋ ಹಾಗೂ ಅವರ ಪತ್ನಿಯನ್ನು ಸೆರೆಹಿಡಿದು ತಂದಿರುವ ಅಮೆರಿಕದ ಕ್ರಮದ ಕುರಿತು ನಾನಾ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಬಹುಮುಖ್ಯವಾಗಿ, ಒಂದು ದೇಶದ ಸೈನ್ಯ ಮತ್ತೊಂದು ದೇಶದೊಳಗೆ ನುಗ್ಗಿ ಅಲ್ಲಿನ ಮುಖ್ಯಸ್ಥರನ್ನು ಬಂಧಿಸುವುದು ಕಾನೂನುಬದ್ಧವೇ ಎಂಬ ಪ್ರಶ್ನೆಗಳು ಎದ್ದಿವೆ. ಅಮೆರಿಕ ತನ್ನ ನಡೆಯನ್ನು ಸಮರ್ಥಿಸಿಕೊಂಡರೆ, ಕಾನೂನು ತಜ್ಞರು ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದಿದ್ದಾರೆ.
ಕಾನೂನು ತಜ್ಞರು ಹೇಳುವುದೇನು?:
ಯಾವುದೇ ದೇಶದ ಮೇಲೆ ಕಾರ್ಯಾಚರಣೆ ನಡೆಸಲು ಅಮೆರಿಕ ಸಂಸತ್ತಿನಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ. ಆದರೆ ಶನಿವಾರದ ಕಾರ್ಯಾಚರಣೆಯ ಪೂರ್ವದಲ್ಲಿ ಟ್ರಂಪ್ ಸರ್ಕಾರ ಸಂಸತ್ತಿಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಆ ಲೆಕ್ಕಾಚಾರದಲ್ಲಿ ಇದು ಕಾನೂನು ಬಾಹಿರ. ಯುದ್ಧಕ್ಕೆ ಅನುಮತಿ ನೀಡುವುದು ಸಂಸತ್ತಿನ ಹಕ್ಕಾದರೂ ದೇಶದ ಸಮಗ್ರತೆ ವಿಷಯ ಬಂದಾಗ ಅಮೆರಿಕ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರವಿದೆ. ಜೊತೆಗೆ ದಾಳಿಯನ್ನು ಡೆಮಾಕ್ರೆಟ್ ಮತ್ತು ರಿಪಬ್ಲಿಕನ್ ಪಕ್ಷದ ಅಧ್ಯಕ್ಷರಿಬ್ಬರೂ ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಟ್ರಂಪ್ ನಡೆಗೆ ಅಮೆರಿಕ ದೇಶದ ಬೆಂಬಲ ಸಿಕ್ಕಂತೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.
ಟ್ರಂಪ್ ವಾದವೇನು?:ಮಡುರೋ ಡ್ರಗ್ಸ್ ಕಳ್ಳಸಾಗಣೆ, ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಅಪರಾಧಗಳನ್ನು ಮಾಡಿದ್ದಾರೆ. ಅವರ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಪ್ರಕರಣವಿದೆ. ಅವರನ್ನು ಬಂಧಿಸಲು ಅಮೆರಿಕದ ಕೋರ್ಟ್ ಸೈನ್ಯದ ಸಹಾಯ ಕೇಳಿತ್ತು. ಆದ್ದರಿಂದ ಇದು ಕಾನೂನಾತ್ಮಕವಾಗಿ ಸರಿ ಎಂದು ಅಧ್ಯಕ್ಷ ಟ್ರಂಪ್ ಆಡಳಿತ ಹೇಳಿದೆ.
ತಜ್ಞರ ವಿಶ್ಲೇಷಣೆ:
ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಒಪ್ಪಿಗೆ ಅಥವಾ ರಾಷ್ಟ್ರೀಯ ಹಿತಾಸಕ್ತಿಯಂತಹ ಸಂದರ್ಭಗಳ ಹೊರತಾಗಿ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಬಲಪ್ರಯೋಗ (ಸೇನಾ ಕಾರ್ಯಾಚರಣೆ) ಮಾಡುವಂತಿಲ್ಲ. ಡ್ರಗ್ಸ್ ಕಳ್ಳಸಾಗಣೆ ಕ್ರಿಮಿನಲ್ ಅಪರಾಧ ನಿಜ. ಹಾಗೆಂದ ಮಾತ್ರಕ್ಕೆ ವಿದೇಶಿ ಸರ್ಕಾರವನ್ನು ಉರುಳಿಸಲು ಸೇನೆಯನ್ನು ಬಳಸುವ ಹಕ್ಕು ಇಲ್ಲ ಎಂಬುದು ಕಾನೂನು ತಜ್ಞರ ವಾದ.
