ಸಾರಾಂಶ
ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿಗೆ ಪುರಸ್ಕಾರಟ್ರಂಪ್‌ಗೆ ಪ್ರಶಸ್ತಿ ಅರ್ಪಿಸಿದ ಮಾರಿಯಾ ಮಚಾಡೋ
---7 ಯುದ್ಧ ನಿಲ್ಲಿಸಿದಟ್ರಂಪ್‌ಗೆ ಪ್ರಶಸ್ತಿಸಿಗದೇ ಮುಜುಗರ==ಈ ವರ್ಷ ಸಿಗದಿದ್ರೂಮುಂದಿನ ವರ್ಷದರೇಸಲ್ಲಿ ಟ್ರಂಪ್
--ಓಸ್ಲೋ (ನಾರ್ವೆ): ವೆನಿಜುವೆಲಾದ ಪ್ರತಿಪಕ್ಷ ನಾಯಕಿ, ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾಡೋ ಅವರಿಗೆ ಈ ಬಾರಿಯ ಪ್ರತಿಷ್ಠಿತ ನೊಬೆಲ್ ಶಾಂತಿ ಪುರಸ್ಕಾರ ಒಲಿದು ಬಂದಿದೆ. ಈ ಮೂಲಕ ನೊಬೆಲ್ ಪ್ರಶಸ್ತಿ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ನಿರಾಸೆಯಾಗಿದೆ.ಇದರ ಬೆನ್ನಲ್ಲೇ ಅವರು ಟ್ವೀಟ್ ಮಾಡಿದ್ದು, ‘ವೆನಿಜುವೆಲಾದಲ್ಲಿನ ಪ್ರಜಾಪ್ರಭುತ್ವ ಪರ ಹೋರಾಟವನ್ನು ಅಲ್ಲಿನ ಜನರು ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿದ್ದಾರೆ. ಅವರಿಗೆ ನನ್ನ ನೊಬೆಲ್ ಪ್ರಶಸ್ತಿ ಅರ್ಪಣೆ’ ಎಂದಿದ್ದಾರೆ.
ಕವೆನಿಜುವೆಲಾದ ಉಕ್ಕಿನ ಮಹಿಳೆ ಎಂದೇ ಖ್ಯಾತಿಗಳಿಸಿರುವ ಹಾಗೂ ಪ್ರತಿಪಕ್ಷಗಳ ಈ ಹಿಂದಿನ ಅಧ್ಯಕ್ಷೀಯ ಅಭ್ಯರ್ಥಿಯೂ ಆಗಿದ್ದ ಮಾರಿಯಾ ಕೊರಿನಾ ಅವರು ನಿರಂಕುಶ ಆಡಳಿತದ ಕಪಿಮುಷ್ಟಿಯಲ್ಲಿರುವ ತಮ್ಮ ದೇಶದಲ್ಲಿ ಲೋಕತಂತ್ರ ಹಾಗೂ ಮಾನವಹಕ್ಕುಗಳ ಮರುಸ್ಥಾಪನೆಗೆ ಶಾಂತಿಯುತ ಹೋರಾಟ ನಡೆಸಿದ್ದರು. ಹೀಗಾಗಿ ಈ ಪ್ರಶಸ್ತಿ ಘೋಷಿಸಲಾಗಿದೆ.ಮಾರಿಯಾ ಸಾಧನೆ ಏನು?:ಮಾರಿಯಾ ಮಚಾಡೋ ಅವರು ವೆನುಜುವೆಲಾದ ನಿರಂಕುಶವಾದಿ ಅಧ್ಯಕ್ಷ ನಿಕೋಲಸ್ ಮಾದುರೋ ವಿರುದ್ಧ ಸಿಡಿತು ನಿಂತು ಸುದೀರ್ಘ ಕಾಲದಿಂದ ಪ್ರಜಾತಾಂತ್ರಿಕ ಹೋರಾಟ ಮುನ್ನಡೆಸಿಕೊಂಡು ಬಂದಿದ್ದಾರೆ. ಹಿಂಸೆಯ ಬದಲು ಶಾಂತಿ ಮಾರ್ಗದಲ್ಲಿ ಜನಾಂದೋಲನ ಮತ್ತು ರಾಜನೈತಿಕ ಸಂವಾದದ ಮೂಲಕ ದೇಶದಲ್ಲಿ ಬದಲಾವಣೆಗೆ, ಮಾನವ ಹಕ್ಕುಗಳ ರಕ್ಷಣೆಗೆ ಮುನ್ನುಡಿ ಬರೆಯುವ ಪ್ರಯತ್ನ ನಡೆಸುತ್ತಿದ್ದಾರೆ.
ನೊಬೆಲ್ ಕಮಿಟಿಯು ಮಾರಿಯಾ ಅವರ ಈ ಸಾಧನೆಯನ್ನು ಲೋಕತಾಂತ್ರಿಕ ಮೌಲ್ಯಗಳ ರಕ್ಷಣೆಯ ಪ್ರತೀಕ ಎಂದು ಬಣ್ಣಿಸಿದೆ. ವೆನಿಜುವೆಲಾದಲ್ಲಿ ಪ್ರಜಾಪ್ರಭುತ್ವದ ಉಳಿವಿನ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಮಾರಿಯಾ ಅವರಿಗೆ ಈ ಪ್ರಶಸ್ತಿ ಘೋಷಣೆಯಾಗಿದೆ. ಈ ಪ್ರಶಸ್ತಿಯು ನಿರಂಕುಶವಾದಿ ಅಧ್ಯಕ್ಷ ನಿಕೋಲಸ್ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಿರುವ ಅಲ್ಲಿನ ನಾಗರಿಕ ಸಮಾಜಕ್ಕೆ ಹೊಸ ಹುಮ್ಮಸ್ಸು ನೀಡುವ ನಿರೀಕ್ಷೆ ಇದೆ.ನಿರಂಕುಶವಾದದಿಂದ ನಲುಗಿರುವ ವೆನಿಜುವೆಲಾದಲ್ಲಿ ಸತತ 3 ಅವಧಿಗೆ ನಿಕೋಲಸ್ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ನಿಕೋಲಸ್ ವಿರುದ್ಧ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿದ್ದ ಪ್ರತಿಪಕ್ಷ ನಾಯಕರನ್ನು ಒಂದುಗೂಡಿಸಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಕ್ಕಿಗಾಗಿ ಧ್ವನಿ ಎತ್ತುವಲ್ಲಿ ಮಾರಿಯಾ ಯಶಸ್ವಿಯಾಗಿದ್ದಾರೆ ಎಂದು ನಾರ್ವೆಯ ನೊಬೆಲ್ ಕಮಿಟಿ ಮುಖ್ಯಸ್ಥ ಜೋರ್ಜನ್ ವಾಟ್ನೆ ಫ್ರೈಡ್ನೆಸ್ ಹೇಳಿದ್ದಾರೆ.
ಮಾರಿಯಾ ಸ್ಪರ್ಧೆಗೇ ಅವಕಾಶವಿಲ್ಲ!:ಕಳೆದ ಜುಲೈನಲ್ಲಿ ವೆನಿಜುವೆಲಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರಿಯಾ ಅವರ ಸ್ಪರ್ಧೆಗೆ ನಿರಾಕರಿಸಲಾಗಿತ್ತು. ಆದರೂ ಮಾರಿಯಾ ಬೆಂಬಲಿತ ಪಕ್ಷವೇ ಗೆಲುವು ಸಾಧಿಸಿತ್ತು. ಆದರೆ ನಿರಂಕುಶವಾದಿ ಅಧ್ಯಕ್ಷ ನಿಕೋಲಸ್ ಅವರು ಚುನಾವಣಾ ಯಂತ್ರವನ್ನು ದುರುಪಯೋಗಪಡಿಸಿಕೊಂಡು ತಾನೇ ಗೆದ್ದಿದ್ದಾಗಿ ಘೋಷಿಸಿಕೊಂಡು ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಚುನಾವಣೆ ಬಳಿಕ ಪ್ರತಿಪಕ್ಷ ನಾಯಕರನ್ನೂ ದಮನಿಸಲು ಮುಂದಾದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್‌ನಿಂದ ಮಾರಿಯಾ ಅಜ್ಞಾತ ಸ್ಥಳದಲ್ಲಿದ್ದಾರೆ. ಅಲ್ಲಿಂದಲೇ ನಿರಂಕುಶವಾದದ ವಿರುದ್ಧ ಹೋರಾಟ ಮುನ್ನಡೆಸುತ್ತಿದ್ದಾರೆ.
ಆಂಗ್‌ಸಾನ್ ಸೂಕಿಯ ನೆನಪು:ಮ್ಯಾನ್ಮಾರ್‌ನ ಉಕ್ಕಿನ ಮಹಿಳೆ, ಪ್ರಜಾಪ್ರಭುತ್ವಪರ ಹೋರಾಟಗಾರ್ತಿ ಆಂಗ್‌ಸಾನ್ ಸೂಕಿ ಅವರಿಗೆ ಗೃಹಬಂಧನದಲ್ಲಿದ್ದಾಗಲೇ 1991ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಘೋಷಿಸಲಾಗಿತ್ತು. ಇದೀಗ ಮರಿಯಾ ಅವರು ಅಜ್ಞಾತಸ್ಥಳದಲ್ಲಿ ಇದ್ದುಕೊಂಡು ಪ್ರಜಾಪ್ರಭುತ್ವಪರ ಹೋರಾಟ ಮುಂದುವರಿಸಿದ್ದಾರೆ. ಆಗಲೇ ಪುರಸ್ಕಾರ ಘೋಷಿಸಲಾಗಿದೆ.