ಗೋಕಾಕ : ರಾಜ್ಯದಿಂದ ಕುಂಭಮೇಳಕ್ಕೆ ತೆರಳಿದ್ದ ಇನ್ನೂ 6 ಮಂದಿ ಭಕ್ತರು ಅಪಘಾತದಲ್ಲಿ ಮೃತ

| N/A | Published : Feb 25 2025, 12:50 AM IST / Updated: Feb 25 2025, 05:01 AM IST

ಸಾರಾಂಶ

ರಾಜ್ಯದಿಂದ ಕುಂಭಮೇಳಕ್ಕೆ ತೆರಳಿದ್ದ ಇನ್ನೂ 6 ಮಂದಿ ಭಕ್ತರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶದ ವಾರಣಾಸಿ ಬಳಿ ಶುಕ್ರವಾರ ನಡೆದ ಭೀಕರ ಅಪಘಾತದಲ್ಲಿ ಬೀದರ್‌ನ 6 ಮಂದಿ ಅಸುನೀಗಿದ್ದು, ಅವರ ಮೃತದೇಹಗಳನ್ನು ಸೋಮವಾರ ಬೀದರ್‌ಗೆ ತರಲಾಗಿತ್ತು.

 ಗೋಕಾಕ : ರಾಜ್ಯದಿಂದ ಕುಂಭಮೇಳಕ್ಕೆ ತೆರಳಿದ್ದ ಇನ್ನೂ 6 ಮಂದಿ ಭಕ್ತರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶದ ವಾರಣಾಸಿ ಬಳಿ ಶುಕ್ರವಾರ ನಡೆದ ಭೀಕರ ಅಪಘಾತದಲ್ಲಿ ಬೀದರ್‌ನ 6 ಮಂದಿ ಅಸುನೀಗಿದ್ದು, ಅವರ ಮೃತದೇಹಗಳನ್ನು ಸೋಮವಾರ ಬೀದರ್‌ಗೆ ತರಲಾಗಿತ್ತು. ಅದರ ಬೆನ್ನಲ್ಲೇ ಸೋಮವಾರ ಬೆಳಗ್ಗೆ ಕುಂಭಮೇಳದಿಂದ ವಾಪಸ್ಸಾಗುತ್ತಿದ್ದ ವಾಹನ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಪಹ್ರೆವಾದಲ್ಲಿ ಅಪಘಾತಕ್ಕೀಡಾಗಿದ್ದು, ಗೋಕಾಕನ ಐವರು, ಬಾಗಲಕೋಟೆ ಜಿಲ್ಲೆಯ ಭಕ್ತರೊಬ್ಬರು ಅಸುನೀಗಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫೆ.18ರಂದು ಒಟ್ಟು 8 ಜನರು ಕುಂಭಮೇಳದಲ್ಲಿ ಭಾಗವಹಿಸಲು ಕ್ರೂಸರ್‌ ವಾಹನದಲ್ಲಿ ತೆರಳಿದ್ದರು. ಫೆ.23ರಂದು ಭಾನುವಾರ, ತಮ್ಮ ತಮ್ಮ ಮನೆಗಳಿಗೆ ಕರೆ ಮಾಡಿ ಸೋಮವಾರ ಕುಂಭಮೇಳದಲ್ಲಿ ತೀರ್ಥ ಸ್ನಾನ ಮಾಡಿ ಮರಳುತ್ತಿರುವುದಾಗಿ ತಿಳಿಸಿದ್ದರು.

ಅದರಂತೆ ಭಾನುವಾರ ಪ್ರಯಾಗರಾಜ್‌ನಿಂದ ಹೊರಟಿದ್ದರು. ಸೋಮವಾರ ಬೆಳಗಿನ ಜಾವ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಜಾಹ್ರೆವಾ ಹಳ್ಳಿಯ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ, ಮರಕ್ಕೆ ಡಿಕ್ಕಿ ಹೊಡೆದು, ನಂತರ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎದುರಿಗೆ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆಯಿತು. ಆರು ಮಂದಿ ಸ್ಥಳದಲ್ಲಿಯೇ ಅಸುನೀಗಿದರು. ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಗೋಕಾಕನ ಬಾಲಚಂದ್ರ ಗೌಡರ (50), ವಿರುಪಾಕ್ಷ ಗುಮತಿ (61), ಬಸವರಾಜ್ ಕುರಟ್ಟಿ (63), ಬಸವರಾಜ್ ದೊಡಮನಿ (49), ಹುಕ್ಕೇರಿ ತಾಲೂಕಿನ ಆನಂದಪುರದ ಸುನೀಲ್ ಶೇಡಶ್ಯಾಳೆ (45), ಬಾಗಲಕೋಟ ಜಿಲ್ಲೆ ಗುಳೇದಗುಡ್ಡದ ನಿವಾಸಿ ಈರಣ್ಣ ಶೇಬಿನಕಟ್ಟಿ (27) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮುಸ್ತಾಕ ಕಿಲ್ಲೇದಾರ, ಸದಾಶಿವ ಉಪದಲಿ ಎಂದು ಗುರುತಿಸಲಾಗಿದೆ.

ಮುಸ್ತಾಕ ಕಿಲ್ಲೇದಾರ ಹೊರತುಪಡಿಸಿ ಮೃತ 6 ಜನ ಹಾಗೂ ಗಾಯಾಳು ಸದಾಶಿವ ಉಪದಲಿ ಎಲ್ಲರೂ ಸಂಬಂಧಿಕರಾಗಿದ್ದಾರೆ. ಮಂಗಳವಾರ ಸಂಜೆ ಮೃತರ ಪಾರ್ಥಿವ ಶರೀರಗಳು ನಗರಕ್ಕೆ ಆಗಮಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.