ಸಾರಾಂಶ
ಮಹಾಕುಂಭ ನಗರ: ಪ್ರಯಾಗರಾಜ್‌ನಲ್ಲಿ ಜ.13ರಿಂದ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇದುವರೆಗೆ 60 ಕೋಟಿ ಭಕ್ತರು ಭಾಗವಹಿಸಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಶನಿವಾರ ತಿಳಿಸಿದೆ.
‘ಭಾರತದ ಜನಸಂಖ್ಯೆ ಸರಿಸುಮಾರು 143 ಕೋಟಿ ಇದೆ. ಇದರಲ್ಲಿ 110 ಕೋಟಿ ಜನ ಸನಾತನ ಧರ್ಮೀಯರಾಗಿದ್ದಾರೆ. ಪ್ರಸ್ತುತ ಇವರಲ್ಲಿ ಅರ್ಧಕ್ಕಿಂತಲೂ ಬಹುಪಾಲು ಜನ ಕುಂಭದಲ್ಲಿ ಭಾಗವಹಿಸಿ ಪುಣ್ಯಸ್ನಾನ ಮಾಡಿದ್ದಾರೆ. ಫೆ.26ರ ಮಹಾಶಿವರಾತ್ರಿಯಂದು ಕೊನೆಯ ಅಮೃತ ಸ್ನಾನ ನಡೆಯಲಿದ್ದು, ಈ ಸಂಖ್ಯೆ 65 ಕೋಟಿಯನ್ನೂ ಮೀರುವ ಸಾಧ್ಯತೆಯಿದೆ’ ಎಂದು ಸರ್ಕಾರ ತಿಳಿಸಿದೆ.
1100 ರು. ನೀಡಿ, ಕುಂಭಮೇಳದಲ್ಲಿ ಡಿಜಿಟಲ್ ಸ್ನಾನ ಮಾಡಿ!
ನವದೆಹಲಿ: ವಿಶ್ವವಿಖ್ಯಾತ ಪ್ರಯಾಗ್‌ರಾಜ್ ಮಹಾಕುಂಭ ಮೇಳ ಫೆ.26ರಂದು ಅಂತ್ಯವಾಗಲಿದ್ದು, ಇದುವರೆಗೂ ಪುಣ್ಯಸ್ನಾನ ಕೈಗೊಳ್ಳಲು ಸಾಧ್ಯವಾಗದವರಿಗೆ ಇಲ್ಲೊಬ್ಬ ವ್ಯಕ್ತಿ ವಿಶೇಷ ಆಫರ್ ನೀಡಿದ್ದಾನೆ. ದೀಪಕ್ ಗೋಯಲ್ ಎಂಬಾತ ‘ಪ್ರಯಾಗ್ ಎಂಟರ್‌ಪ್ರೈಸಸ್’ ಎಂಬ ಹೆಸರಿನಲ್ಲಿ ಹೊಸ ಬಿಸಿನೆಸ್ ಆರಂಭಿಸಿದ್ದಾರೆ.
ವಾಟ್ಸಾಪ್ ಮೂಲಕ ಆತನ ಫೋನ್‌ಗೆ ಫೋಟೊ ಕಳಿಸಿದರೆ ಸಾಕು, ಕೇವಲ 24 ಗಂಟೆಯಲ್ಲಿ ಫೋಟೊದ ಪ್ರಿಂಟ್ ತೆಗೆದು ತ್ರಿವೇಣಿ ಸಂಗಮದಲ್ಲಿ ಅದಕ್ಕೆ ಪುಣ್ಯಸ್ನಾನ ಮಾಡಿಸಲಾಗುತ್ತದೆ. ಈ ಸೇವೆಗೆ 1,100 ರು. ಶುಲ್ಕ ವಿಧಿಸಲಾಗಿದೆ’ ಎಂದು ದೀಪಕ್ ವಿಡಿಯೋದಲ್ಲಿ ತಿಳಿಸಿದ್ದಾರೆ.ಈ ವಿಡಿಯೊವನ್ನು ಆಕಾಶ್ ಬ್ಯಾನರ್ಜಿ ಎಂಬುವವರು ಶೇರ್ ಮಾಡಿದ್ದು, ‘ಅದ್ಭುತವಾದ ಎಐ ಐಡಿಯಾ. ಹೊಸ ಯೂನಿಕಾರ್ನ್ ಕಂಪನಿ ಪತ್ತೆಯಾಗಿದೆ’ ಎಂದು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಹಳಷ್ಟು ವೈರಲ್ ಆಗಿದೆ. ಹಲವರು ಯುವಕನ ಬುದ್ಧಿವಂತಿಕೆಗೆ ಶಹಭಾಸ್ ಎಂದಿದ್ದರೆ, ಇನ್ನು ಹಲವರು ಇದು ಭಕ್ತರನ್ನು ಮರುಳುಗೊಳಿಸುವ ತಂತ್ರ ಎಂದು ಟೀಕಿಸಿದ್ದಾರೆ.