ವಿವಿಧ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೇ, ಪರೀಕ್ಷಾ ಅಕ್ರಮ ನಡೆಸಿದ್ದ 23 ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಟಿಎ) ಡಿಬಾರ್‌ ಮಾಡಿದೆ.

ನವದೆಹಲಿ: ವಿವಿಧ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ನೀಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೇ, ಪರೀಕ್ಷಾ ಅಕ್ರಮ ನಡೆಸಿದ್ದ 23 ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಟಿಎ) ಡಿಬಾರ್‌ ಮಾಡಿದೆ. ಅಲ್ಲದೆ ಉಳಿದ 40 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ ಎಂದು ಮಂಡಳಿ ನಿರ್ದೇಶಕ ಸುಬೋಧ್‌ ಕುಮಾರ್‌ ತಿಳಿಸಿದ್ದಾರೆ.

ಆದರೆ ಈ ಪ್ರಕರಣಗಳು ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾದ ಪ್ರಕರಣಗಳಿಗೆ ಸಂಬಂಧಿಸಿದ್ದಲ್ಲ. ಬದಲಾಗಿ, ಅಭ್ಯರ್ಥಿಗಳ ಪರವಾಗಿ ಇನ್ನೊಬ್ಬರು ಪರೀಕ್ಷೆ ಬರೆದ, ಅಕ್ರಮ ಎಸಗಿದ, ಮಾಹಿತಿ ತಿರುಚಿದ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ.

 ಮಾಹಿತಿ ನೀಡಿರುವ ಸುಬೋಧ್‌, ‘ನೀಟ್‌ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಬದಲಾಗಿ 63 ಅಭ್ಯರ್ಥಿಗಳು ಅಕ್ರಮ ಎಸಗಿರುವುದು ಕಂಡುಬಂದಿದೆ. ಇದರಲ್ಲಿ ತಜ್ಞ ಸಮಿತಿಯ ಶಿಫಾರಸ್ಸಿನ ಮೇರೆಗೆ 23 ಅಭ್ಯರ್ಥಿಗಳನ್ನು 1-3 ವರ್ಷಗಳವರೆಗೆ ಪರೀಕ್ಷೆ ತೆಗೆದುಕೊಳ್ಳಲು ನಿರ್ಬಂಧ ವಿಧಿಸಲಾಗಿದೆ. ಉಳಿದ 40 ಅಭ್ಯರ್ಥಿಗಳ ಫಲಿತಾಂಶ ತಡೆಹಿಡಿಯಲಾಗಿದೆ. ಜೊತೆಗೆ 1563 ಅಭ್ಯರ್ಥಿಗಳಿಗೆ ಕೃಪಾಂಕ ನೀಡಿರುವ ವಿಚಾರದಲ್ಲಿ ಮರುಪರೀಕ್ಷೆ ಇಲ್ಲವೇ ಇತರ ಮಾರ್ಗದ ಮೂಲಕ ಯಾರಿಗೂ ಅನ್ಯಾಯವಾಗದಂತೆ ಸಮಸ್ಯೆ ಬಗೆಹರಿಸಲಾಗುವುದು’ ಎಂದು ತಿಳಿಸಿದರು.

ಏಕೆ ಕೃಪಾಂಕ?: 1,563 ಅಭ್ಯರ್ಥಿಗಳಿಗೆ 70-80 ಅಂಕ ಕೃಪಾಂಕ ನೀಡಿರುವ ಕುರಿತು ಸ್ಪಷ್ಟನೆ ನೀಡಿ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ಕಾರಣದಿಂದ ಪರೀಕ್ಷೆಯನ್ನು ತಡವಾಗಿ ಆರಂಭಿಸಿದ ಕಾರಣ ಕೃಪಾಂಕ ನೀಡಲಾಗಿದೆ. ಈ ಪೈಕಿ ಕೇವಲ 6 ಮಂದಿ ಮಾತ್ರ ಕೃಪಾಂಕದಿಂದ ಪೂರ್ಣಾಂಕ ಪಡೆದಿದ್ದು, 61 ಮಂದಿ ನೈಜವಾಗಿ ಪೂರ್ಣಾಂಕ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.