ಸಾರಾಂಶ
189 ಜನರ ಬಲಿ ಪಡೆದ 2006ರ ಮುಂಬೈ ರೈಲು ಸ್ಫೋಟದ 12 ಆರೋಪಿಗಳನ್ನು ದೋಷಮುಕ್ತಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ.
ನವದೆಹಲಿ: 189 ಜನರ ಬಲಿ ಪಡೆದ 2006ರ ಮುಂಬೈ ರೈಲು ಸ್ಫೋಟದ 12 ಆರೋಪಿಗಳನ್ನು ದೋಷಮುಕ್ತಗೊಳಿಸಿದ ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂಕೋರ್ಟ್ ಗುರುವಾರ ತಡೆ ನೀಡಿದೆ. ಆದರೆ ಹೈಕೋರ್ಟ್ ತೀರ್ಪಿನ ನಂತರ ಬಿಡುಗಡೆಗೊಂಡಿರುವ ಅವರನ್ನು ಪುನಃ ಬಂಧಿಸಿ ಜೈಲಿಗೆ ಕಳುಹಿಸುವ ಅಗತ್ಯವಿಲ್ಲ. ಅಲ್ಲದೆ, ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಉಳಿದ ಪ್ರಕರಣಗಳಿಗೆ ಮಾನದಂಡವೆಂದು ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
12 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೀರಿತ್ತು.
ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ಪೀಠ, ‘ಆರೋಪಿಗಳನ್ನು ಬಿಡುಗಡೆ ಮಾಡಿದ ವಿಚಾರ ನಮಗೆ ತಿಳಿದಿದೆ. ಅವರನ್ನು ಪುನಃ ಜೈಲಿಗೆ ಕಳಿಸುವ ಪ್ರಶ್ನೆಯೇ ಇಲ್ಲ. ಆದರೆ ಕಾನೂನಿನ ಪ್ರಶ್ನೆಗೆ ಸಂಬಂಧಿಸಿದಂತೆ ಸರ್ಕಾರದ ಪರ ಸಾಲಿಸಿಟರ್ ಜನರಲ್ ಮಾಡಿದ ವಾದವನ್ನು ಗಮನಿಸಿ, ಆಕ್ಷೇಪಾರ್ಹ ತೀರ್ಪಿಗೆ ತಡೆ ನೀಡಲಾಗುವುದು. ಬಾಂಬೆ ಹೈಕೋರ್ಟ್‌ನ ಈ ಆಕ್ಷೇಪಾರ್ಹ ತೀರ್ಪನ್ನು ಪೂರ್ವನಿದರ್ಶನವೆಂದು ಪರಿಗಣಿಸಲಾಗುವುದಿಲ್ಲ’ ಎಂದಿತು.