189 ಜನರನ್ನು ಬಲಿಪಡೆದ 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್‌ ಸೋಮವಾರ ಸಾಕ್ಷ್ಯಧಾರಗಳ ಕೊರತೆ ಕಾರಣ ನೀಡಿ ಖುಲಾಸೆಗೊಳಿಸಿದೆ.

ಮುಂಬೈ: 189 ಜನರನ್ನು ಬಲಿಪಡೆದ 2006ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್‌ ಸೋಮವಾರ ಸಾಕ್ಷ್ಯಧಾರಗಳ ಕೊರತೆ ಕಾರಣ ನೀಡಿ ಖುಲಾಸೆಗೊಳಿಸಿದೆ. ತನಿಖಾಧಿಕಾರಿಗಳು ಆರೋಪ ಸಾಬೀತುಪಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ನ್ಯಾಯಾಲಯದ ಮುಂದಿರುವ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಆಪಾದಿತರು ಈ ಕೃತ್ಯ ಎಸಗಿದ್ದಾರೆಂದು ಭಾವಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಕ್ಷಣವೇ ಎಲ್ಲರನ್ನೂ ಬಿಡುಗಡೆ ಮಾಡಿ ಎಂದು ಹೇಳಿ ಮಹತ್ವದ ತೀರ್ಪು ಪ್ರಕಟಿಸಿದೆ. ತೀರ್ಪಿನ ಬೆನ್ನಲ್ಲೇ ಜೈಲಿನಿಂದ 6 ಜನರನ್ನು ಬಿಡುಗಡೆ ಮಾಡಲಾಗಿದೆ.

ಇದೇ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ 5 ಜನರಿಗೆ ಗಲ್ಲು ಮತ್ತು 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಒಬ್ಬ ಆರೋಪಿ 2021ರಲ್ಲಿ ಸಾವನ್ನಪ್ಪಿದ್ದ.

ತೀರ್ಪಿನ ಕುರಿತು ಘಟನೆಯಲ್ಲಿ ಮಡಿದವರ ಕುಟುಂಬ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹೇಳಿದ್ದಾರೆ. ಮತ್ತೊಂದೆಡೆ ಸ್ಫೋಟದ ಕುರಿತು ತನಿಖೆ ನಡೆಸಿದ್ದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಂಐಎಂ ನಾಯಕ ಅಸಾದುದ್ದೀನ್‌ ಒವೈಸಿ ಒತ್ತಾಯಿಸಿದ್ದಾರೆ.

ಸರಣಿ ಸ್ಫೋಟ:

ಮುಂಬೈನ ಏಳು ಉಪನಗರ ರೈಲಿನ ಫಸ್ಟ್‌ಕ್ಲಾಸ್‌ ಕಂಪಾರ್ಟ್‌ಮೆಂಟ್‌ನಲ್ಲಿ 2006ರ ಜು.11ರಂದು ಉಗ್ರರು ಸರಣಿ ಸ್ಫೋಟ ನಡೆಸಿದ್ದರು. ಈ ಘಟನೆಯಲ್ಲಿ 189 ಮಂದಿ ಸಾವಿಗೀಡಾಗಿ, 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಈ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳವು 12 ಜನರನ್ನು ಬಂಧಿಸಿತ್ತು. ಇವರೆಲ್ಲಾ ನಿಷೇಧಿತ ಸಿಮಿ ಸಂಘಟನೆಯ ಸದಸ್ಯರಾಗಿದ್ದು, ಪಾಕಿಸ್ತಾನದ ಲಷ್ಕರ್‌ ಎ ತೊಯ್ಬಾ ಸಂಘಟನೆಯ ನೆರವಿನೊಂದಿಗೆ ಸ್ಫೋಟ ನಡೆಸಿದ್ದರು ಎಂದು ಆರೋಪ ಹೊರಿಸಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು 2015ರಲ್ಲಿ 12 ಆರೋಪಿಗಳಲ್ಲಿ ಐವರಿಗೆ ಮರಣದಂಡನೆ ಹಾಗೂ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಬಾಂಬೆ ಹೈಕೋರ್ಟ್‌ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.

ಕೋರ್ಟ್‌ ಹೇಳಿದ್ದೇನು?:

ತನಿಖಾಧಿಕಾರಿಗಳು, ಸ್ಫೋಟಕ್ಕೆ ಯಾವ ರೀತಿಯ ಬಾಂಬ್‌ ಬಳಸಲಾಗಿದೆ ಎಂಬ ದಾಖಲೆ ನೀಡಲೂ ವಿಫಲವಾಗಿದ್ದಾರೆ. ಅಲ್ಲದೆ, ಸಂಗ್ರಹಿಸಲಾಗಿರುವ ಸಾಕ್ಷ್ಯಗಳು ಕೂಡ ಆರೋಪಿಗಳನ್ನು ದೋಷಿಗಳೆಂದು ಸಾಬೀತುಪಡಿಸುವಷ್ಟು ಗಟ್ಟಿಯಾಗಿಲ್ಲ. ಸಾಕ್ಷಿಗಳ ಹೇಳಿಕೆಗಳು ಮತ್ತು ಆರೋಪಿಗಳಿಂದ ಸಂಗ್ರಹಿಸಲಾದ ಸಾಕ್ಷ್ಯಗಳಿಗೆ ಯಾವುದೇ ಮೌಲ್ಯವೂ ಇಲ್ಲ ಎಂದು ವಿಶೇಷ ಪೀಠದ ನ್ಯಾ. ಅನಿಲ್‌ ಕಿಲೋರ್‌ ಮತ್ತು ನ್ಯಾ. ಶ್ಯಾಮ್‌ ಚಂದಕ್‌ ಅವರು ತೀರ್ಪು ನೀಡುವ ವೇಳೆ ತಿಳಿಸಿದರು.

ಇದೇ ವೇಳೆ, ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಯನ್ನು ಚಿತ್ರಹಿಂಸೆ ನೀಡಿ ಬರೆಸಿದಂತಿದ್ದು, ಅದು ಅಪೂರ್ಣವಾಗಿದೆ. ಅದು ನೈಜವಾಗಿರುವಂತೆ ಗೋಚರಿಸುತ್ತಿಲ್ಲ. ತಪ್ಪೊಪ್ಪಿಗೆ ಹೇಳಿಕೆಯ ಕೆಲ ಭಾಗಗಳನ್ನು ಕಾಪಿ ಪೇಸ್ಟ್‌ ಮಾಡಲಾಗಿದೆ. ಅಲ್ಲದೆ, ಆರೋಪಿಗಳು ಕೂಡ ತಮ್ಮ ಮೇಲೆ ವಿಚಾರಣೆ ವೇಳೆ ತೀವ್ರ ದೌರ್ಜನ್ಯ ನಡೆದಿದೆ ಎಂದೂ ಹೇಳಿದ್ದಾರೆ.ಇನ್ನು ಆರೋಪಿಗಳನ್ನು ಚರ್ಚ್‌ಗೇಟ್‌ ರೈಲ್ವೆ ಸ್ಟೇಷನ್‌ಗೆ ಕರೆದೊಯ್ದ ಟ್ಯಾಕ್ಸಿ ಚಾಲಕ, ಬಾಂಬ್‌ ಅನ್ನು ಅಳವಡಿಸುವಾಗ ನೋಡಿದವರು ಮತ್ತು ಬಾಂಬ್‌ ಜೋಡಿಸುವುದನ್ನು ನೋಡಿದವರು ಮತ್ತು ಈ ಷಡ್ಯಂತ್ರಕ್ಕೆ ಸಾಕ್ಷಿಯಾದವರ ಹೇಳಿಕೆಗಳನ್ನೂ ಒಪ್ಪಿಕೊಳ್ಳಲು ಇದೇ ವೇಳೆ ನ್ಯಾಯಾಲಯ ನಿರಾಕರಿಸಿತು. ಸಾಕ್ಷಿಗಳ ಹೇಳಿಕೆಗಳು ವಿಶ್ವಾಸಾರ್ಹ ಮತ್ತು ನಂಬಿಕಾರ್ಹವಾಗಿರುವಂತೆ ಕಾಣುತ್ತಿಲ್ಲ. ಈ ಹೇಳಿಕೆಗಳ ಆಧಾರದಲ್ಲಿ ನಾವು ಆರೋಪ ಸಾಬೀತುಪಡಿಸುವುದು ಸುರಕ್ಷಿತವೂ ಅಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

ಘಟನೆ ನಡೆದು 4 ತಿಂಗಳ ಬಳಿಕ ಗುರುತುಪತ್ತೆ ಪರೇಡ್‌ ಮಾಡಲಾಯಿತು. 4 ವರ್ಷಗಳ ಬಳಿಕ ಕೋರ್ಟ್‌ನಲ್ಲಿ ಆರೋಪಿಗಳ ಗುರುತುಪತ್ತೆ ನಡೆಯಿತು. 100 ದಿನ, 4 ವರ್ಷಗಳ ಬಳಿಕ ಅಂದರೆ ಇಷ್ಟು ಸುದೀರ್ಘ ಸಮಯದ ಬಳಿಕ ಸಾಕ್ಷ್ಯಗಳಿಗೆ ಆರೋಪಿಗಳ ಮುಖ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ಖುಲಾಸೆಗೊಂಡವರು:

ಕಮಾಲ್‌ ಅನ್ಸಾರಿ (ಸದ್ಯ ಮೃತಪಟ್ಟಿದ್ದಾರೆ), ಮೊಹಮ್ಮದ್‌ ಫೈಸಲ್‌ ಅತಾವುರ್‌ ರೆಹಮಾನ್‌ ಶೇಖ್‌, ಇತ್ತೇಶಮ್‌ ಕುತುಬುದ್ದೀನ್‌ ಸಿದ್ದಿಕಿ, ನವೀದ್ ಹುಸೇನ್‌ ಖಾನ್‌, ಆಸಿಫ್‌ ಖಾನ್‌ (ಗಲ್ಲು ಶಿಕ್ಷೆಗೆ ಗುರಿಯಾಗಿದ್ದವರು). ತನ್ವೀರ್‌ ಅಹಮದ್‌ ಮೊಹಮ್ಮದ್‌ ಇಬ್ರಾಹಿಂ ಅನ್ಸಾರಿ, ಮೊಹಮ್ಮದ್‌ ಮಜೀದ್‌ ಮೊಹಮ್ಮದ್‌ ಶಫಿ, ಶೇಖ್‌ ಮೊಹಮ್ಮದ್‌ ಅಲಿ ಆಲಂ ಶೇಖ್‌, ಮೊಹಮ್ಮದ್‌ ಸಜ್ಡಿದ್ ಮರ್ಗುಬ್‌ ಅನ್ಸಾರಿ, ಮುಜಾಮಿಲ್‌ ಅತುರ್‌ ರೆಹಮಾನ್‌ ಶೇಖ್‌, ಸುಹೈಲ್‌ ಮೆಹೂದ್‌ ಶೇಖ್‌ ಮತ್ತು ಜಮೀರ್‌ ಅಹಮದ್‌ ಲತಿಯುರ್‌ ರೆಹಮ್‌ ಶೇಖ್‌ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದವರು.

ಆಗಿದ್ದೇನು?

- 2006ರಲ್ಲಿ 7 ಕಡೆ ಮುಂಬೈ ರೈಲಲ್ಲಿ ಸಂಭವಿಸಿದ್ದ ಸ್ಫೋಟ

- 189 ಮಂದಿ ಸಾವು, 800ಕ್ಕೂ ಹೆಚ್ಚು ಮಂದಿಗೆ ಗಾಯ

- ಆರೋಪ ಸಾಬೀತು ಮಾಡುವಲ್ಲಿ ಎಟಿಎಸ್‌ ವಿಫಲ

- 5 ಜನ ಗಲ್ಲು, 6 ಜನ ಜೀವಾವಧಿ ಶಿಕ್ಷೆಯಿಂದ ಬಚಾವ್‌

- ಇದರ ಬೆನ್ನಲ್ಲೇ 6 ಮಂದಿ ಜೈಲಿನಿಂದ ಬಿಡುಗಡೆ

- ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಮೊರೆ: ಸಿಎಂ ಫಡ್ನವೀಸ್‌