ನ್ಯಾ। ವರ್ಮಾ ವಾಗ್ದಂಡನೆ ಪ್ರಕ್ರಿಯೆ ಆರಂಭ

| N/A | Published : Jul 22 2025, 01:15 AM IST / Updated: Jul 22 2025, 04:04 AM IST

Justice Yashwanth Verma

ಸಾರಾಂಶ

ಸುಟ್ಟ ನೋಟುಗಳ ಕಂತೆ ಪತ್ತೆಯಾಗಿದ್ದ ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾ। ಯಶವಂತ್‌ ವರ್ಮಾ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆಗೆ ಸೋಮವಾರ ಸಂಸತ್ತಿನಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

 ನವದೆಹಲಿ: ಸುಟ್ಟ ನೋಟುಗಳ ಕಂತೆ ಪತ್ತೆಯಾಗಿದ್ದ ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾ। ಯಶವಂತ್‌ ವರ್ಮಾ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆಗೆ ಸೋಮವಾರ ಸಂಸತ್ತಿನಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಪ್ರಸ್ತುತ ಅಲಹಬಾದ್‌ ಹೈಕೋರ್ಟ್‌ನಲ್ಲಿರುವ ವರ್ಮಾಗೆ ವಾಗ್ದಂಡನೆ ಕೋರಿ ಒಟ್ಟು 152 ಲೋಕಸಭಾ ಸದಸ್ಯರು ಲೋಕಸಭೆಯ ಸ್ಪೀಕರ್‌ ಮತ್ತು ರಾಜ್ಯಸಭೆಯ ಸಭಾಧ್ಯಕ್ಷರಿಗೆ ನೋಟಿಸ್‌ ನೀಡಿದ್ದಾರೆ.

ಅತ್ತ ರಾಜ್ಯಸಭೆಯ ಸ್ಪೀಕರ್‌ ಜಗದೀಪ್‌ ಧನಕರ್‌ ಅವರಿಗೆ ಸಲ್ಲಿಕೆಯಾದ ಪತ್ರಕ್ಕೆ ಆಪ್‌ ಮತ್ತು ಇಂಡಿಯಾ ಕೂಟದ ನಾಯಕರು ಸೇರಿದಂತೆ 63 ರಾಜ್ಯಸಭಾ ಸದಸ್ಯರು ಅಂಕಿತ ಹಾಕಿದ್ದಾರೆ.

ಮುಂದೇನು?:

ಸಂಸದರ ಪ್ರಸ್ತಾವನೆಯನ್ನು ಸ್ಪೀಕರ್ ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು. ನ್ಯಾಯಾಧೀಶರ (ವಿಚಾರಣಾ) ಕಾಯ್ದೆ ಪ್ರಕಾರ, ಒಂದೇ ದಿನ ಎರಡೂ ಮನೆಗಳಲ್ಲಿ ಸಲ್ಲಿಕೆಯಾದ ಪ್ರಸ್ತಾವನೆ ಅಂಗೀಕಾರವಾದರೆ, ಉಭಯ ಸದನಗಳ ಸಭಾಪತಿಗಳು ಆರೋಪ ಪರಿಶೀಲನೆಗೆ ಸಮಿತಿ ರಚಿಸಬಹುದು. ಸಮಿತಿಯು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶರು, ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಮತ್ತು ಖ್ಯಾತ ನ್ಯಾಯಶಾಸ್ತ್ರಜ್ಞರನ್ನು ಒಳಗೊಂಡಿರುತ್ತದೆ. ಅವರಿಗೆ 3 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗುತ್ತದೆ.

ಆ ವರದಿಯನ್ನು ಬಳಿಕ ಉಭಯ ಸದನಗಳಲ್ಲಿ ಮಂಡಿಸಿ, ಚರ್ಚೆ ನಡೆಸಲಾಗುತ್ತದೆ. ಅಲ್ಲಿ ಗೊತ್ತುವಳಿಯ ಮೇಲೆ ಮತದಾನ ನಡೆದು, ನ್ಯಾಯಾಧೀಶರನ್ನು ತೆಗೆದು ಹಾಕುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. 2/3ರಷ್ಟು ಬಹುಮತ ದೊರೆತರೆ ವರ್ಮಾರ ವಾಗ್ದಂಡನೆ ಅವಕಾಶ ಸಿಗುತ್ತದೆ. ಬಳಿಕ ಸಂಸತ್ತಿನ ಶಿಫಾರಸಿನ ಅನ್ವಯ ರಾಷ್ಟ್ರಪತಿಗಳು, ನ್ಯಾಯಾಧೀಶರ ವಜ ಮಾಡುತ್ತಾರೆ.

Read more Articles on