ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಯಶವಂತ್‌ ವರ್ಮಾ ವಿರುದ್ಧ ಎಫ್‌ಐಆರ್‌ಗೆ ಸುಪ್ರೀಂ ನಕಾರ

| N/A | Published : Mar 29 2025, 12:32 AM IST / Updated: Mar 29 2025, 06:15 AM IST

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಯಶವಂತ್‌ ವರ್ಮಾ ವಿರುದ್ಧ ಎಫ್‌ಐಆರ್‌ಗೆ ಸುಪ್ರೀಂ ನಕಾರ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಯಶವಂತ್‌ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ಸುಟ್ಟ ನೋಟುಗಳು ಪತ್ತೆಯಾದ ಸಂಬಂಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ನವದೆಹಲಿ: ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಯಶವಂತ್‌ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ಸುಟ್ಟ ನೋಟುಗಳು ಪತ್ತೆಯಾದ ಸಂಬಂಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

‘ಈಗಾಗಲೇ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ ನಿಯೋಜಿಸಿದ ತ್ರಿಸದಸ್ಯ ಪೀಠ ನಡೆಸುತ್ತಿದೆ. ಅದು ಪೂರ್ಣಗೊಂಡ ಬಳಿಕ ಮುಖ್ಯ ನ್ಯಾಯಾಧೀಶರು ಅಗತ್ಯವಿದ್ದರೆ ಎಫ್‌ಐಆರ್‌ ದಾಖಲಿಸಲು ಸೂಚಿಸುತ್ತಾರೆ’ ಎಂದು ನ್ಯಾ। ಅಭಯ್‌ ಎಸ್‌. ಓಕಾ ಹಾಗೂ ಉಜ್ಜಲ್‌ ಭುಯಾನ್‌ ಅವರ ಪೀಠ ಹೇಳಿದೆ. ಅಂತೆಯೇ, ವಕೀಲರಾದ ಮ್ಯಾಥಿವ್‌ ಜೆ. ನೆದುಂಪಾರಾ ಹಾಗೂ ಇನ್ನೂ ಮೂವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ಹಾಲಿ ನ್ಯಾಯಾಧೀಶರ ಮೇಲೆ ಕೇಸು ಹಾಕಲು ಭಾರತದ ಮುಖ್ಯ ನ್ಯಾಯಾಧೀಶರ ಅನುಮತಿ ಕಡ್ಡಾಯ ಎಂಬ ನಿಯಮವಿದೆ.

ನ್ಯಾ. ವರ್ಮಾ ಅಲಹಾಬಾದ್ ಹೈಕೋರ್ಟ್‌ಗೆ ಎತ್ತಂಗಡಿ: ಕೇಂದ್ರ ಅಸ್ತು

ನವದೆಹಲಿ: ಕಳಂಕಿತ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ ಅವರಿಗೆ ಸದ್ಯಕ್ಕೆ ಯಾವುದೇ ಕರ್ತವ್ಯದ ಹೊಣೆ ಹೊರಿಸದಿರಲು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದೆ.ವರ್ಮಾ ವರ್ಗಾವಣೆ ವಿರೋಧಿಸಿ ಉತ್ತರ ಪ್ರದೇಶ ವಕೀಲರು ಸೇರಿದಂತೆ ಹಲವು ಬಾರ್ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಅದರ ನಡುವೆಯೇ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ.

ಇದರ ಬೆನ್ನಲ್ಲೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಕೀಲರು, ನ್ಯಾ। ವರ್ಮಾ ಪ್ರಮಾಣ ವಚನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.ವರ್ಮಾ ನಿವಾಸದಲ್ಲಿ ಕಂತೆ ಕಂತೆ ನೋಟು ಕಾಣಿಸಿಕೊಂಡ ವಿವಾದದ ಹಿನ್ನೆಲೆ, ಅವರನ್ನು ಅಲಹಾಬಾದ್‌ ಹೈಕೋರ್ಟ್‌ಗೆ ವರ್ಗಾವಣೆ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವಾಲಯ ಪ್ರಕಟಿಸಿದೆ.