ಸಾರಾಂಶ
ಅಂಧರು ಕೂಡಾ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗುವ ಅರ್ಹತೆ ಹೊಂದಿದ್ದಾರೆ. ಅಂಗವೈಕಲ್ಯದ ಕಾರಣ ನೀಡಿ ಅವರಿಗೆ ಹುದ್ದೆ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನವದೆಹಲಿ: ಅಂಧರು ಕೂಡಾ ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗುವ ಅರ್ಹತೆ ಹೊಂದಿದ್ದಾರೆ. ಅಂಗವೈಕಲ್ಯದ ಕಾರಣ ನೀಡಿ ಅವರಿಗೆ ಹುದ್ದೆ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತನ್ನ ದೃಷ್ಟಿ ಮಾಂದ್ಯ ಮಗನ ನೇಮಕಾತಿಗೆ ಅಡ್ಡಿಯಾದ, ಮಧ್ಯಪ್ರದೇಶದ ನಿಬಂಧನೆಯೊಂದನ್ನು ಪ್ರಶ್ನಿಸಿ ತಾಯಿಯೊಬ್ಬರು ಕಳೆದ ವರ್ಷ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ನ್ಯಾ। ಜೆ.ಬಿ. ಪರ್ದಿವಾಲ ಮತ್ತು ಆರ್. ಮಹಾದೇವನ್ ಅವರ ದ್ವಿಸದಸ್ಯ ಪೀಠ ‘ಅಂಗವಿಕಲರು ನ್ಯಾಯಾಂಗ ಸೇವೆಯ ನೇಮಕಾತಿ ವೇಳೆ ಯಾವುದೇ ತಾರತಮ್ಯ ಎದುರಿಸಬಾರದು. ಅಂಥವರನ್ನು ಒಳಗೊಂಡ ಚೌಕಟ್ಟನ್ನು ಒದಗಿಸಲು ರಾಜ್ಯಗಳು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿ, ಮಧ್ಯಪ್ರದೇಶದಲ್ಲಿರುವ ನಿಯಮವನ್ನು ರದ್ದುಗೊಳಿಸುವಂತೆ ಆದೇಶಿಸಿದೆ.