ಸಾರಾಂಶ
ಹೈದರಾಬಾದ್: ಆ್ಯಪ್‌ಗಳ ಮೂಲಕ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜು ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟರಾದ ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಲಕ್ಷ್ಮಿ ಮಂಚು ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ.
ನೂರಾರು ಕೋಟಿ ಅಕ್ರಮ ಹಣ ವ್ಯವಹಾರದಲ್ಲಿ ತೊಡಗಿರುವ ಆರೋಪ ಹೊತ್ತಿರುವ ಜಂಗ್ಲಿ, ರಮ್ಮಿ, ಜೀತ್‌ವಿನ್‌ಗಳಂತಹ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿರುವ ಕಾರಣ ಒಟ್ಟು 21 ಜನರ ವಿರುದ್ಧ ಇತ್ತೀಚೆಗೆ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ದಾಖಲಿಸಿತ್ತು. ಅದರ ಬೆನ್ನಲ್ಲೇ ನಾಲ್ವರಿಗೂ ಬೇರೆಬೇರೆ ದಿನದಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಆ ವೇಳೆ, ನಟರ ಹೇಳಿಕೆಗಳನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ದಾಖಲಿಸಲಾಗುವುದು. 5 ರಾಜ್ಯಗಳ ಪೊಲೀಸರು ಅಕ್ರಮ ಬೆಟ್ಟಿಂಗ್ ಹಗರಣ ಸಂಬಂಧ ದಾಖಲಿಸಿರುವ ಎಫ್‌ಐಆರ್ ಆಧಾರದಲ್ಲಿ ಇ.ಡಿ. ತಾನು ಕೂಡಾ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ನಾಸಾ-ಇಸ್ರೋ ಜಂಟಿ ಉಪಗ್ರಹ ‘ನಿಸಾರ್’ ಜು.30ಕ್ಕೆ ಉಡಾವಣೆ
ಬೆಂಗಳೂರು: ಭಾರತ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆಗಳಾದ ಇಸ್ರೋ ಮತ್ತು ನಾಸಾ ಜಂಟಿಯಾಗಿ ನಿರ್ಮಿಸಿರುವ ಮೊತ್ತಮೊದಲ ‘ನಿಸಾರ್’ ಉಪಗ್ರಹವನ್ನು ಆಂಧ್ರಪ್ರದೇಶದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜು.30ರಂದು ಉಡಾವಣೆ ಮಾಡಲಾಗುವುದು.
ಇಸ್ರೋ ನೀಡಿರುವ ಮಾಹಿತಿ ಪ್ರಕಾರ, ನಾಸಾ-ಇಸ್ರೋ ಸಿಂಥೆಟಿಕ್ ಅಪಾರ್ಚರ್ ರಾಡಾರ್ (ನಿಸಾರ್) ಅನ್ನು ಜಿಎಸ್‌ಎಲ್‌ವಿ-ಎಫ್16 ರಾಕೆಟ್ ಬಳಸಿ 743 ಕಿ.ಮೀ. ಎತ್ತರದಲ್ಲಿರುವ ಸೂರ್ಯನ ಕಕ್ಷೆಗೆ ಸಮವಾದ ಕಕ್ಷೆಗೆ ಕೊಂಡೊಯ್ದು, 98.4 ಡಿಗ್ರಿ ಇಳಿಜಾರಿನಲ್ಲಿ ಸ್ಥಾಪಿಸಲಾಗುವುದು. ಬಳಿಕ ನಿಸಾರ್, ತನ್ನಲ್ಲಿರುವ ಸ್ವೀಪ್‌ಸಾರ್ ತಂತ್ರಜ್ಞಾನ ಬಳಸಿ, 242 ಕಿ.ಮೀ. ಎತ್ತರದಿಂದ ಭೂಮಿಯ ಮೇಲೆ ನಿಗಾ ವಹಿಸಲಿದೆ.ಉಪಯೋಗವೇನು?:ಕಣ್ಗಾವಲು ಉಪಗ್ರಹವಾಗಿರುವ ನಿಸಾರ್, ಪ್ರತಿ 12 ದಿನಕ್ಕೊಮ್ಮೆ ಹವಾಮಾನ ವರದಿಯನ್ನು ರವಾನಿಸಲಿದೆ. ಭೂಮಿಯ ಮೇಲ್ಮೈಯಲ್ಲಿ ನೆಲದ ರೂಪ ಬದಲು, ಮಂಜುಗಡ್ಡೆಯ ಚಲನೆ, ಸಸ್ಯವರ್ಗದ ಚಲನಶೀಲತೆಯಂತಹ ಸಣ್ಣ ಬದಲಾವಣೆಗಳನ್ನೂ ಪತ್ತೆ ಮಾಡಲು ಇದು ಶಕ್ತವಾಗಿದೆ. ಅಂತೆಯೇ, ಸಮುದ್ರದ ಮಂಜುಗಡ್ಡೆಯ ವರ್ಗೀಕರಣ, ಹಡಗು ಪತ್ತೆ, ಸಮುದ್ರ ತೀರದ ಮೇಲೆ ನಿಗಾ, ಬಿರುಗಾಳಿಯ ಅಧ್ಯಯನ, ಮಣ್ಣಿನ ತೇವಾಂಶದಲ್ಲಿನ ಬದಲಾವಣೆಗಳು, ಮೇಲ್ಮೈ ಜಲ ಸಂಪನ್ಮೂಲ ಮೇಲ್ವಿಚಾರಣೆ ಮತ್ತು ವಿಪತ್ತು ನಿರ್ವಹಣೆಗೂ ಇದನ್ನು ಬಳಸಲಾಗುವುದು.
ನಿಸಾರ್ ವಿಶೇಷತೆ:
2,392 ಕೆ.ಜಿ. ತೂಗುವ ನಿಸಾರ್, 2 ರಡಾರ್ ಫ್ರೀಕ್ವೆನ್ಸಿ(ನಾಸಾದ ಎಲ್ ಬ್ಯಾಂಡ್ ಮತ್ತು ಇಸ್ರೋದ ಎಸ್ ಬ್ಯಾಂಡ್)ಗಳನ್ನು ಬಳಸುವ ಮೊದಲ ಉಪಗ್ರಹವಾಗಿದೆ. ಈ ಎರಡೂ ರಡಾರ್‌ಗಳು, ನಾಸಾದ 12 ಮೀ. ಉದ್ದದ ಬಲೆಯಂತಹ ಆಂಟೆನಾವನ್ನು ಬಳಸುತ್ತವೆ.
ಅಂಡಮಾನ್: ಒಂಗೆ ಸಮುದಾಯದ 9 ಮಕ್ಕಳು ಫಸ್ಟ್ ಟೈಂ ಎಸ್ಸೆಸೆಲ್ಸಿ ಪಾಸ್
ಶ್ರೀವಿಜಯಪುರಂ: ಅಂಡಮಾನ್ ದ್ವೀಪದ ಒಂಗೆ ಬುಡಕಟ್ಟು ಸಮುದಾಯದ 9 ಮಕ್ಕಳು ಇದೇ ಮೊದಲ ಬಾರಿ ಎಸ್‌ಎಸ್‌ಎಲ್‌ಸಿ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇತಿಹಾಸ ರಚಿಸಿದ್ದಾರೆ. ಇಲ್ಲಿಯವರೆಗೆ, ಈ ಬುಡಕಟ್ಟಿನ ಒಬ್ಬರೂ ಹೈಸ್ಕೂಲ್ ಮೆಟ್ಟಿಲೇರಿ 10ನೇ ತರಗತಿ ಪಾಸ್ ಮಾಡಿದ ಉದಾಹರಣೆಯೇ ಇಲ್ಲ.
ಈ ಸಾಧನೆಯು, ಅಂಡಮಾನ್ ಆಡಳಿತ ಮತ್ತು ಆದಿವಾಸಿ ಕಲ್ಯಾಣ ನಿರ್ದೇಶನಾಲಯ ಮತ್ತು ಅಂಡಮಾನ್ ಆದಿಮ್ ಜನಜಾತಿ ವಿಕಾಸ ಸಮಿತಿಯ(ಎಎಜೆವಿಎಸ್) ಜಂಟಿ ಯತ್ನದಿಂದ ಸಾಧ್ಯವಾಗಿದೆ. ಇದರ ಹಿಂದಿರುವ ಶಿಕ್ಷಕರು ಮತ್ತು ಮಕ್ಕಳ ಪರಿಶ್ರಮವನ್ನು ಅಂಡಮಾನ್‌ನ ಮುಖ್ಯ ಕಾರ್ಯದರ್ಶಿಗಳು ಶ್ಲಾಘಿಸಿದ್ದಾರೆ.
ಗುಣಮಟ್ಟದ ಶಿಕ್ಷಣ ಒದಗಿಸಿ, ಉಚಿತ ಪಠ್ಯಪುಸ್ತಕಗಳ ವಿತರಿಸಿ, ಸಮವಸ್ತ್ರಗಳನ್ನು ನೀಡುವ ಮೂಲಕ ಅಂಡಮಾನ್ ಆಡಳಿತವು ಕಲಿಕೆಯನ್ನು ಪ್ರೋತ್ಸಾಹಿಸಿದೆ. ಜತೆಗೆ, ಎಎಜೆವಿಎಸ್ ಮತ್ತು ಶಿಕ್ಷಣ ನಿರ್ದೇಶನಾಲಯ ಒಟ್ಟಾಗಿ ವಿಶೇಷ ತರಬೇತಿ ತರಗತಿಗಳನ್ನು ನಡೆಸಿ, ಸಾಂಸ್ಕೃತಿಕ ಸೂಕ್ಷ್ಮ ಬೋಧನಾ ಪರಿಸರವನ್ನು ಖಚಿತಪಡಿಸಿ, ಶಾಲೆ ಬಿಡುವುದನ್ನು ಕಡಿಮೆ ಮಾಡಲು ಪೌಷ್ಠಿಕಾಂಶಯುಕ್ತ ಆಹಾರ ನೀಡಿ ಬೆಂಬಲಿಸಿವೆ.