ಸಾರಾಂಶ
ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ಅದರ ನಿರ್ದೇಶಕ ಅನಿಲ್ ಅಂಬಾನಿಯವರನ್ನು ‘ವಂಚಕ’ ಎಂದು ವರ್ಗೀಕರಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಈ ಕುರಿತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ
ನವದೆಹಲಿ: ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ಅದರ ನಿರ್ದೇಶಕ ಅನಿಲ್ ಅಂಬಾನಿಯವರನ್ನು ‘ವಂಚಕ’ ಎಂದು ವರ್ಗೀಕರಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಈ ಕುರಿತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಎಸ್‌ಬಿಐ, ಅನಿಲ್ ಅಂಬಾನಿ ಹಾಗೂ ಕಂಪನಿಯನ್ನು ಜೂ.13ರಂದು ‘ವಂಚಕ’ ಎಂದು ವರ್ಗೀಕರಿಸಿ, ಆರ್‌ಬಿಐಗೆ ವರದಿ ನೀಡಿತ್ತು. ಇದೀಗ ಸಿಬಿಐಗೆ ದೂರು ಸಲ್ಲಿಸಲು ಮುಂದಾಗಿದೆ. ಅಂಬಾನಿ ಮೇಲೆ ಬ್ಯಾಂಕ್‌ನಿಂದ ಸುಮಾರು 3,000 ಕೋಟಿ ರು. ಸಾಲ ಪಡೆದು ವಂಚಿಸಿದ ಆರೋಪವಿದೆ.
ವೈಷ್ಣೋದೇವಿ ಮಾರ್ಗ, ಪೂಂಛ್‌ನಲ್ಲಿ ಭೂಕುಸಿತ: ಯಾತ್ರಾಥಿ, ಮಗು ಸಾವು
ಜಮ್ಮು: ಜಮ್ಮು ಕಾಶ್ಮೀರದಲ್ಲಿ ಸೋಮವಾರ ಸಂಭವಿಸಿದ ಪ್ರತ್ಯೇಕ ಭೂಕುಸಿತದಲ್ಲಿ 5 ವರ್ಷದ ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ವೈಷ್ಣೋದೇವಿ ಬೆಟ್ಟದ ಗುಡ್ಡಕುಸಿತದಲ್ಲಿ ಚೆನ್ನೈ ಭಕ್ತರೊಬ್ಬರು, ಪೂಂಛ್‌ನ ಶಾಲೆಯ ಮೇಲೆ ಬಂಡೆಕಲ್ಲು ಉರುಳಿ 5 ವರ್ಷದ ಮಗು ಮೃತಪಟ್ಟಿದೆ. ವೈಷ್ಣೋದೇವಿ ಬೆಟ್ಟದ ಶುರುವಿನಲ್ಲಿರುವ ನೋಂದಣಿ ಕೇಂದ್ರದ ಬಳಿ ಗುಡ್ಡ ಕುಸಿದಿದ್ದು, ಈ ವೇಳೆ ಚೆನ್ನೈ ಮೂಲದ ಉಪ್ಪನ್ ಶ್ರೀವತ್ಸವ (70) ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೂಂಛ್‌ನಲ್ಲಿ ಶಾಲೆಯ ಮೇಲೆ ಬಂಡೆಕಲ್ಲು ಉರುಳಿ 5 ವರ್ಷದ ಬಾಲಕ ಇಹ್ಸಾನ್ ಅಲಿ ಮೃತಪಟ್ಟಿದ್ದಾನೆ. ನಾಲ್ವರು ಗಾಯಗೊಂಡಿದ್ದಾರೆ.
ರೇಸಿಂಗ್ ವೇಳೆ ಕಾರು ಅಪಘಾತ: ತಮಿಳು ನಟ ಅಜಿತ್ ಪಾರು
ನವದೆಹಲಿ: ಇಟಲಿಯಲ್ಲಿ ನಡೆದ ರೇಸ್ ವೇಳೆ ತಮಿಳು ನಟ ಅಜಿತ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಭಾನುವಾರ ರೇಸ್‌ನ 2ನೇ ಸುತ್ತಿನಲ್ಲಿ ಕಾರು ಚಲಾಯಿಸುವಾಗ ಆಯತಪ್ಪಿ, ನಿಂತಿದ್ದ ಕಾರಿಗೆ ಅಜಿತ್ ಕಾರು ಡಿಕ್ಕಿ ಹೊಡೆದಿದೆ. ಅದರ ರಭಸಕ್ಕೆ ನಟನ ಕಾರು ಜಖಂಗೊಂಡಿದೆ. ಕೂಡಲೇ ಕಾರಿನಿಂದ ಇಳಿದ ಅಜಿತ್, ರಸ್ತೆ ಮೇಲೆ ಬಿದ್ದ ಕಾರಿನ ತುಂಡುಗಳನ್ನು ಹೆಕ್ಕಿ ಇತರೆ ಕಾರುಗಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಈ ಹಿಂದೆಯೂ ಎರಡು ಬಾರಿ ರೇಸ್ ವೇಳೆ ಅಜಿತ್ ಕಾರು ಅಪಘಾತಕ್ಕೆ ತುತ್ತಾಗಿತ್ತು.
ಅಕ್ರಮ ಮತಾಂತರದಲ್ಲಿ ಬಂಧಿತ ಮೊಹಮ್ಮದ್ ಮತಾಂತರದ ಸಂತ್ರಸ್ತ!
ಆಗ್ರಾ: ಇತ್ತೀಚೆಗಷ್ಟೇ ಅಕ್ರಮ ಮತಾಂತರ ಆರೋಪದಲ್ಲಿ ಉತ್ತರ ಪ್ರದೇಶದ ಪೊಲೀಸರಿಂದ ಬಂಧಿತರಾಗಿರುವ 10 ಆರೋಪಿಗಳ ಪೈಕಿ ಒಬ್ಬಾತ, ತಾನೇ ಸ್ವತಃ ಅಕ್ರಮ ಮತಾಂತರದ ಸಂತ್ರಸ್ತನಾಗಿದ್ದು, ಪುನಃ ಹಿಂದೂ ಧರ್ಮಕ್ಕೆ ತೆರಳಲು ಇಷ್ಟಪಡುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ. ಆರೋಪಿ ಮೊಹಮ್ಮದ್ ಅಲಿ ಈ ಹಿಂದೆ ಪಿಯೂಷ್ ಪನ್ವಾರ್ ಆಗಿದ್ದ. ಮುಸ್ಲಿಂ ಯುವತಿಯೊಬ್ಬಳ ಪ್ರೇಮದ ಬಲೆಗೆ ಬಿದ್ದು ಇಸ್ಲಾಮಿಗೆ ಮತಾಂತರವಾಗಿದ್ದ. ಆ ಬಳಿಕ ಆಕೆ ಕೈಕೊಟ್ಟಿದ್ದಳು. ನಂತರ ನಿಷೇಧಿತ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಸಂಪರ್ಕಕ್ಕೆ ಬಂದು ಅಕ್ರಮ ಮತಾಂತರದಲ್ಲಿ ತೊಡಗಿದ್ದ ಎಂಬ ಅಂಶವನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ದಿಢೀರ್ ಅನಾರೋಗ್ಯ: ತಮಿಳುನಾಡು ಸಿಎಂ ಸ್ಟಾಲಿನ್ ಅಸ್ಪತ್ರೆಗೆ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಸೋಮವಾರ ಬೆಳಿಗ್ಗೆ ವಾಕಿಂಗ್ ಮಾಡುವ ಸಂದರ್ಭದಲ್ಲಿ ತಲೆಸುತ್ತು ಬಂದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ವೈದ್ಯರು ಸ್ಟಾಲಿನ್ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಿದ್ದು, ವಿವಿಧ ಪರೀಕ್ಷೆಗಳನ್ನು ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಸ್ಟಾಲಿನ್ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.