70 ವಯೋವೃದ್ಧ ವರನಿಗೆ 25 ವರ್ಷದ ಯುವ ವಧು! ಬಿಹಾರದ ಗಯಾ ಜಿಲ್ಲೆಯಲ್ಲಿ ವಿಚಿತ್ರ ಘಟನೆ

| Published : Jul 28 2024, 02:11 AM IST / Updated: Jul 28 2024, 04:57 AM IST

ಸಾರಾಂಶ

70 ವರ್ಷದ ವ್ಯಕ್ತಿಯೊಬ್ಬ 25 ವರ್ಷದ ಮಹಿಳೆಯನ್ನು ವಿವಾಹವಾದ ವಿಚಿತ್ರ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.

ಗಯಾ: 70 ವರ್ಷದ ವ್ಯಕ್ತಿಯೊಬ್ಬ 25 ವರ್ಷದ ಮಹಿಳೆಯನ್ನು ವಿವಾಹವಾದ ವಿಚಿತ್ರ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ. ಮಹಮ್ಮದ್‌ ಸಲೀಮುಲ್ಲಾ ನೂರಾನಿ (70) ಎಂಬ ವ್ಯಕ್ತಿ ರೇಷ್ಮಾ ಪರ್ವೀನ್‌ (25) ಎಂಬುವವರನ್ನು ಮದುವೆಯಾಗಿದ್ದಾರೆ. ನೂರಾನಿ ಪತ್ನಿ 4 ವರ್ಷದ ಹಿಂದೆ ಸಾವನ್ನಪ್ಪಿದ್ದು, ಆತನ ಮಕ್ಕಳಿಗೆ ಮದುವೆಯಾಗಿ ಬೇರೆ ಕಡೆ ಮನೆ ಮಾಡಿಕೊಂಡಿದ್ದಾರೆ. ಇದರಿಂದ ನೂರಾನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಆದ್ದರಿಂದ ನೂರಾನಿ ಆತನ ಸೇವೆ, ಮನೆ ನಿರ್ವಹಣೆ ಮಾಡಲು ಮತ್ತೊಂದು ವಿವಾಹವಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ವಿವಾಹದ ವಿಡಿಯೋ ಟ್ವೀಟರ್‌ನಲ್ಲಿ ಹರಿದಾಡುತ್ತಿದ್ದು, ಕಮೆಂಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಉತ್ತರಾಖಂಡ ಪ್ರವೇಶಿಸುವ ವಾಹನಗಳಲ್ಲಿ ಕಸದ ಚೀಲ ಕಡ್ಡಾಯ

ಡೆಹರಾಡೂನ್: ರಾಜ್ಯದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಉತ್ತರಾಖಂಡ ಪ್ರವೇಸಿಸುವ ಪ್ರತಿ ವಾಹನದಲ್ಲೂ ಕಸದ ಬುಟ್ಟಿ/ಚೀಲ ಇರುವುದು ಕಡ್ಡಾಯಗೊಳಿಸಲು ಸರ್ಕಾರ ಗುರುವಾರ ಅಧಿಕಾರಿಗಳಿಗೆ ಸೂಚಿಸಿದ್ದು, ಪ್ರತಿ ಪ್ರವೇಶ ಸ್ಥಳಗಳಲ್ಲಿ ತಪಾಸಣೆ ನಡೆಸುವಂತೆ ಸಾರಿಗೆ ಇಲಾಖೆಗೆ ನಿರ್ದೇಶಿಸಿದೆ.ಈ ನಿಯಮ ಪಾಲನೆಗೆ ಸಹಕರಿಸುವಂತೆ ರಾಜ್ಯ ಸಾರಿಗೆ ಇಲಾಖೆ ಉತ್ತರ ಪ್ರದೇಶ, ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ, ಪಂಜಾಬ್, ಚಂಡೀಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಸಾರಿಗೆ ಆಯುಕ್ತರಿಗೆ ಪತ್ರದ ಮುಖೇನ ಮನವಿ ಮಾಡಿದೆ. ಚಾರ್‌ಧಾಮ ಮಾರ್ಗದಲ್ಲಿ ಮತ್ತು ಮಸ್ಸೂರಿ, ಡೆಹರಾಡೂನ್, ನೈನಿತಾಲ್‌ಗಳಂತಹ ಪ್ರೇಕ್ಷಣೀಯ ಸ್ಥಳಗಳಲ್ಲಿ ಕಸದ ರಾಶಿ ಹೆಚ್ಚಿದ್ದು, ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಆಕ್ಸ್‌ಫರ್ಡ್‌ ವಿವಿ ಕುಲಾಧಿಪತಿ ಹುದ್ದೆಗೆ ಜೈಲಿಂದಲೇ ಪಾಕ್‌ ಮಾಜಿ ಪಿಎಂ ಇಮ್ರಾನ್‌ ಸ್ಪರ್ಧೆ!

ನವದೆಹಲಿ: ಜಗತ್ತಿನ ಖ್ಯಾತ ವಿಶ್ವ ವಿದ್ಯಾಲಯಗಳಲ್ಲಿ ಒಂದಾಗಿರುವ ಬ್ರಿಟನ್‌ ದೇಶದ ಆಕ್ಸ್‌ಫರ್ಡ್‌ ವಿವಿಯ ಕುಲಾಧಿಪತಿ ಹುದ್ದೆಗೆ ನಡೆಯುವ ಚುನಾವಣೆಯಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಜೈಲಿನಿಂದಲೇ ಸ್ಪರ್ಧಿಸಲಿದ್ದಾರೆ ಎಂದು ವರದಿಯೊಂದು ಹೇಳಿದೆ.

ಇಮ್ರಾನ್‌ ಅವರು ಆಕ್ಸ್‌ಫರ್ಡ್‌ ವಿವಿ ಅಧೀನದ ಕೆಬಲ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವ್ಯಾಸಂಗ ಮಾಡಿದ್ದು, ಇದಿಷ್ಟೇ ಅಲ್ಲದೇ ಬ್ರಾಡ್‌ಫೋರ್ಡ್‌ ವಿಶ್ವ ವಿದ್ಯಾಲಯದಲ್ಲಿ 2005-2014ರವರೆಗೆ ಕುಲಾಧಿಪತಿಯಾಗಿ ಸೇವೆ ಸಲ್ಲಿಸಿದ್ದರು. ಈಗ ಅದೇ ಹುರುಪಿನಲ್ಲಿ ಆಕ್ಸ್‌ಫರ್ಡ್‌ ವಿವಿ ಚಾನ್ಸಲರ್‌ ಚುನಾವಣೆಗೂ ಸ್ಪರ್ಧೆ ಮಾಡಲಿದ್ದಾರೆ ಎಂದು ಟೆಲಿಗ್ರಾಫ್‌ ವರದಿ ಹೇಳಿದೆ.ಈ ಹುದ್ದೆಗೆ ಇದೇ ಮೊದಲ ಬಾರಿಗೆ ಆನ್ಲೈನ್‌ನಲ್ಲಿ ಚುನಾವಣೆ ನಡೆಯುತ್ತಿದ್ದು, ಇದರ ರೇಸಿನಲ್ಲಿ ಬ್ರಿಟನ್‌ ಮಾಜಿ ಪ್ರಧಾನಿ ಟೋನಿ ಬ್ಲೇರ್‌ ಹಾಗೂ ಬೋರಿಸ್ ಜಾನ್ಸನ್‌ ಸಹ ಇದ್ದಾರೆ.

ಅ, ಪ್ರದೇಶ, ರಾಜಸ್ಥಾನ ರಾಜ್ಯದಲ್ಲೂ ಅಗ್ನಿವೀರರಿಗೆ ಮೀಸಲು

ಇಟಾನಗರ/ಜೈಪುರ: ಅಗ್ನಿಪಥ್‌ ಯೋಜನೆಗೆ ವಿಪಕ್ಷಗಳ ತೀವ್ರ ವಿರೋಧದ ಬೆನ್ನಲ್ಲೆ ಮತ್ತೆ ಎರಡು ರಾಜ್ಯಗಳು ಅಗ್ನಿವೀರರಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲು ಘೋಷಿಸಿವೆ. ಅರುಣಾಚಲ ಪ್ರದೇಶ ಸರ್ಕಾರವು ಪೊಲೀಸ್, ಅಗ್ನಿಶಾಮಕ ಸೇವೆಗಳಲ್ಲಿ ನಿವೃತ್ತ ಅಗ್ನಿವೀರರನ್ನು ನೇಮಕ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅದೇ ರೀತಿ ರಾಜಸ್ಥಾನವೂ ಸಹ ಅಗ್ನಿವೀರ ಯೋಧರಿಗೆ ನಿವೃತ್ತಿಯ ನಂತರ ಜೈಲು, ಅರಣ್ಯ ಸಿಬ್ಬಂದಿ ಮತ್ತು ರಾಜ್ಯ ಪೊಲೀಸ್ ನೇಮಕಾತಿಯಲ್ಲಿ ಮೀಸಲಾತಿಯನ್ನು ಪ್ರಕಟಿಸಿದೆ. ಇದಕ್ಕೂ ಮುನ್ನ ಬಿಜೆಪಿ ರಾಜ್ಯಗಳಾದ ಉತ್ತರಾಖಂಡ, ಛತ್ತೀಸ್‌ಗಢ, ಉತ್ತರ ಪ್ರದೇಶದ ಹಾಗೂ ಮಧ್ಯಪ್ರದೇಶ ಸರ್ಕಾರಗಳು ಅಗ್ನಿವೀರರಿಗೆ ಸರ್ಕಾರಿ ಕೆಲಸದಲ್ಲಿ ಮೀಸಲು ಪ್ರಕಟಿಸಿದ್ದವು.ಇದರ ನಡುವೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಖಿಲೇಶ್‌ ಯಾದವ್‌, ‘ನಾವು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಅಗ್ನಿವೀರರಿಗೆ ಘೋಷಿಸಿರುವ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಅಧ್ಯಕ್ಷೀಯ ಎಲೆಕ್ಷನ್‌: ಟ್ರಂಪ್‌, ಕಮಲಾ ಹ್ಯಾರಿಸ್‌ ಸಮಬಲ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ನಂತರ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ನ್ಯೂಯಾರ್ಕ್ ಟೈಮ್ಸ್/ಸಿಯಾನಾ ಕಾಲೇಜ್ ಸಮೀಕ್ಷೆ ಪ್ರಕಾರ, ಕಮಲಾ ಅವರಿಗೆ ಡೆಮಾಕ್ರಟಿಕ್‌ ಪಕ್ಷದ ಶೇ.70 ರಷ್ಟು ಮತದಾರರು ಬೆಂಬಲ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಮುಖಾಮುಖಿ ಸಮೀಕ್ಷೆಯಲ್ಲಿ ಟ್ರಂಪ್‌ಗೆ ಶೇ.48 ಹಾಗೂ ಹ್ಯಾರಿಸ್‌ಗೆ ಶೇ. 47 ಮತದಾರರು ಬೆಂಬಲ ಸೂಚಿಸಿದ್ದು, ಈ ಇಬ್ಬರ ನಡುವೆ ಸಮಬಲ ಸಾಧಿಸಿದೆ ಎಂದು ತಿಳಿಸಿದೆ.