ದಿಲ್ಲಿ ವಿಧಾನಸಭೆ ಚುನಾವಣೆಗೆ 5 ದಿನ ಇರುವಾಗ ಆಡಳಿತಾರೂಢ ಆಪ್‌ಗೆ 8 ಶಾಸಕರು ರಾಜೀನಾಮೆ!

| N/A | Published : Feb 01 2025, 01:31 AM IST / Updated: Feb 01 2025, 05:07 AM IST

ಸಾರಾಂಶ

ದೆಹಲಿ ವಿಧಾನಸಭೆ ಚುನಾವಣೆಗೆ ಕೇವಲ 5 ದಿನ ಬಾಕಿ ಇರುವ ಹೊತ್ತಿನಲ್ಲಿಯೇ ಆಡಳಿತಾರೂಢ ಆಮ್‌ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್‌ ನಾಯಕತ್ವದ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿ 8 ಶಾಸಕರು ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಕೇವಲ 5 ದಿನ ಬಾಕಿ ಇರುವ ಹೊತ್ತಿನಲ್ಲಿಯೇ ಆಡಳಿತಾರೂಢ ಆಮ್‌ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್‌ ನಾಯಕತ್ವದ ಮೇಲೆ ವಿಶ್ವಾಸವಿಲ್ಲ ಎಂದು ಹೇಳಿ 8 ಶಾಸಕರು ಪಕ್ಷ ಮತ್ತು ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಹಾಲಿ ಶಾಸಕರಾಗಿರುವ ಈ ಏಳೂ ಜನರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಲಾಗಿತ್ತು. ಅದರ ಬೆನ್ನಲ್ಲೇ ಅವರೆಲ್ಲಾ ಇದೀಗ ರಾಜೀನಾಮೆ ಪ್ರಕಟಿಸಿದ್ದಾರೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆ.5ರಂದು ಚುನಾವಣೆ ನಡೆಯಲಿದ್ದು, ಫೆ.8ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ನಂಬಿಕೆ ಇಲ್ಲ:

ಪಕ್ಷದಲ್ಲಿ ಮಲತಾಯಿ ಧೋರಣೆ ಹೆಚ್ಚಾಗಿದೆ. ವರ್ಷಾನುವರ್ಷದಿಂದ ಪಕ್ಷಕ್ಕಾಗಿ ನಿಯತ್ತಿನಿಂದ ದುಡಿದವರನ್ನು ಕಡೆಗಣಿಸಲಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಧ್ಯೇಯದೊಂದಿಗೆ ಅಧಿಕಾರಕ್ಕೆ ಬಂದ ಆಪ್‌, ಈಗ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಾಯಕತ್ವದಲ್ಲಿ ವಿಶ್ವಾಸ ಹೋಗಿದೆ. ಶೀಘ್ರವಾಗಿ ನಮ್ಮ ಮುಂದಿನ ನಿರ್ಧಾರವನ್ನು ತಿಳಿಸಲಿದ್ದೇವೆ ಎಂದು ಶಾಸಕರು ಹೇಳಿದ್ದಾರೆ.

ಆಪ್‌ ಕಿಡಿ:

7 ಶಾಸಕರು ರಾಜೀನಾಮೆ ಸಲ್ಲಿಸಿರುವ ಬಗ್ಗೆ ಆಪ್‌ ವಕ್ತಾರೆ ರೀನಾ ಗುಪ್ತಾ ಕಿಡಿಕಾರಿದ್ದು, ನಮ್ಮ ಆಂತರಿಕ ಸಮೀಕ್ಷೆಯಲ್ಲಿ ಈ ಶಾಸಕರ ವಿರುದ್ಧ ಜನರ ಅಸಮಾಧಾನ ಹೆಚ್ಚಿತ್ತು. ಹೀಗಾಗಿ ಇವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಹೀಗಾಗಿ ಇವರು ರಾಜೀನಾಮೆ ಕೊಟ್ಟು ಬೇರೆ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜೀನಾಮೆ ನೀಡಿದವರು:

ಮೆಹ್ರೌಲಿಯ ನರೇಶ್‌ ಯಾದವ್‌, ತ್ರಿಲೋಕಪುರಿಯ ರೋಹಿತ್‌ ಕುಮಾರ್, ಜನಕ್‌ಪುರಿ ಶಾಸಕ ರಾಜೇಶ್‌ ರಿಷಿ, ಕಸ್ತೂರಬಾ ನಗರದ ಮದನ್‌ ಲಾಲ್‌, ಆದರ್ಶನ ನಗರ ಶಾಸಕ ಪವನ್‌ ಶರ್ಮಾ, ಪಲಂನ ಶಾಸಕಿ ಭಾವನಾ ಗೌರ್‌ ಮತ್ತು ಬಿಜ್ವಾಸನ್‌ನ ಬಿ.ಎಸ್‌. ಜೂನ್‌ ರಾಜೀನಾಮೆ ಸಲ್ಲಿಸಿದ ಶಾಸಕರು.

- ಕೇಜ್ರಿವಾಲ್‌ ನಾಯಕತ್ವದ ಮೇಲೆ ನಮಗೆ ವಿಶ್ವಾಸವಿಲ್ಲ: ಶಾಸಕರು- ಟಿಕೆಟ್‌ ನಿರಾಕರಿಸಲಾಗಿತ್ತು, ಅದಕ್ಕೇ ಪಕ್ಷ ಬಿಟ್ಟಿದ್ದಾರೆ: ಕೇಜ್ರಿ ಪಕ್ಷ

- ದಿಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಆಪ್‌ಗೆ 7 ಶಾಸಕರಿಂದ ಶಾಕ್‌- ಪಕ್ಷದಲ್ಲಿ ಮಲತಾಯಿ ಧೋರಣೆ ಹೆಚ್ಚಾಗಿದೆ, ಕಡೆಗಣನೆ ಹೆಚ್ಚಿದೆ ಎಂದು ಟೀಕೆ- ಆಪ್‌ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿ ರಾಜೀನಾಮೆ ಪ್ರಕಟ- ಕೇಜ್ರಿವಾಲ್‌ ನಾಯಕತ್ವದಲ್ಲಿ ವಿಶ್ವಾಸವಿಲ್ಲ ಎಂದು ಪಕ್ಷಕ್ಕೂ ತ್ಯಾಗಪತ್ರ ಸಲ್ಲಿಕೆ

 ವಿಷಯುದ್ಧ: ಆಯೋಗಕ್ಕೆನೀರು ತುಂಬಿದ ಆರು ಬಾಟಲಿ ನೀಡಿದ ಕೇಜ್ರಿ

ನವದೆಹಲಿ: ದೆಹಲಿಯತ್ತ ಹರಿಯುವ ಯಮುನಾ ನದಿಗೆ ಹರ್ಯಾಣದ ಬಿಜೆಪಿ ಸರ್ಕಾರ ವಿಷ ಬೆರೆಸಿ ನರಮೇಧ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ 2ನೇ ನೋಟಿಸ್‌ಗೆ ಸ್ವತಃ ಆಯೋಗದ ಕಚೇರಿಗೆ ತೆರಳಿ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಉತ್ತರ ನೀಡಿದ್ದಾರೆ. ಈ ವೇಳೆ ಅಮೋನಿಯಾ ಬೆರೆತ ನೀರಿನ ಆರು ಬಾಟಲಿಗಳನ್ನೂ ಒಯ್ದಿದ್ದಾರೆ.---