ಸಾರಾಂಶ
ವಿಶಾಖಪಟ್ಟಣಂ: ಪಟಾಕಿ ತಯಾರಿಕಾ ಘಟಕದಲ್ಲಿ ಭೀಕರ ಸ್ಫೋಟ ಉಂಟಾಗಿ 2 ಮಹಿಳೆಯರು ಸೇರಿ 8 ಜನರನ್ನು ಬಲಿ ಪಡೆದ ಘಟನೆ ಅನಕಪಲ್ಲಿ ಜಿಲ್ಲೆಯ ಕೈಲಾಸಪಟ್ಟಣಂ ಗ್ರಾಮದಲ್ಲಿ ನಡೆದಿದೆ.
ದುರ್ಘಟನೆಯಲ್ಲಿ 7 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ಮಧ್ಯಾಹ್ನದ ಹೊತ್ತಿಗೆ ಕಾರ್ಖಾನೆ ಆವರಣದಲ್ಲಿ ಸ್ಫೋಟ ಸಂಭವಿಸಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿ ಎಲ್ಲೆಡೆ ವ್ಯಾಪಿಸಿತು. ಘಟನೆ ನಡೆದಾಗ ಘಟಕದಲ್ಲಿ 15 ಕಾರ್ಮಿಕರಿದ್ದರು. ಸ್ಥಳೀಯ ಉತ್ಸವ ಮತ್ತು ಮದುವೆಗಳಿಗಾಗಿ ಪಟಾಕಿ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುವ ಆತಂಕವಿದೆ. ಘಟನೆಗೆ ಸಿಎಂ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ.
ಉಕ್ರೇನ್‌ನ ಸುಮಿ ಮೇಲೆ ರಷ್ಯಾ ಕ್ಷಿಪಣಿ ದಾಳಿ: 30 ಬಲಿ, 84 ಜನರಿಗೆ ಗಾಯ
ಕೀವ್: ಉಕ್ರೇನ್‌ನ ಸುಮಿ ನಗರದ ಮೇಲೆ ಭಾನುವಾರ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 84 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಭಾನುವಾರ ಬೆಳಿಗ್ಗೆ 10:15ರ ಸುಮಾರಿಗೆ ಪವಿತ್ರ ಪಾಮ್ ಸಂಡೆ ಆಚರಿಸಲು ಸ್ಥಳೀಯರು ಒಟ್ಟುಗೂಡುತ್ತಿದ್ದಾಗ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಗರದ ಹೃದಯಭಾಗಕ್ಕೆ ಅಪ್ಪಳಿಸಿದವು. ಹಬ್ಬದ ದಿನವೇ ನಮ್ಮ ಸಮುದಾಯ ಭೀಕರ ದುರಂತವನ್ನು ಅನುಭವಿಸಿದೆ. ಘಟನೆಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದು, ‘ಕೊಳಕು ಮನಃಸ್ಥಿತಿಯವರು ಮಾತ್ರ ಅಮಾಯಕ ನಾಗರಿಕರ ಪ್ರಾಣವನ್ನು ತೆಗೆಯಬಲ್ಲರು. ಯಾವ ಮಾತುಕತೆಗಳಿಂದಲೂ ರಷ್ಯಾದ ಕ್ಷಿಪಣಿ ಮತ್ತು ಬಾಂಬ್ ದಾಳಿ ನಿಲ್ಲಿಸಲು ಸಾಧ್ಯವಾಗಿಲ್ಲ’ ಎಂದಿದ್ದಾರೆ.
ತಿರುಪತಿ ದರ್ಶನಕ್ಕೆ 20 ಗಂಟೆ ಸರದಿ: ನಿತ್ಯ 72000 ಜನರ ಭೇಟಿ
ತಿರುಪತಿ: ಮಕ್ಕಳಿಗೆ ಬೇಸಿಗೆ ರಜೆ, ವಾರಾಂತ್ಯ ಹಿನ್ನೆಲೆಯಲ್ಲಿ ವಾರ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭಾರೀ ಪ್ರಮಾಣದ ಭಕ್ತರು ಆಗಮಿಸುತ್ತಿದ್ದ ಕನಿಷ್ಠ 18- 20 ಗಂಟೆಗಳ ಕಾಲ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆಯುವ ಸನ್ನಿವೇಳ ನಿರ್ಮಾಣವಾಗಿದೆ. ಬೆಳಿಗ್ಗೆ ದರ್ಶನ ಸಮಯ ಆರಂಭವಾದ ನಂತರ ಟೋಕನ್‌ಗಳಿಲ್ಲದೇ ಸರತಿ ಸಾಲಿನಲ್ಲಿ ದರ್ಶನ ಪಡೆಯಲು ಕಿ.ಮೀ ಗಟ್ಟಲೆ ಭಕ್ತರು ನಿಂತಿದ್ದರು. ಭಕ್ತರ ಸಾಲು ಎಂಬಿಸಿ ರಸ್ತೆಯ ತನಕವೂ ವಿಸ್ತರಿಸಿತ್ತು. 18-20 ಗಂಟೆಗಳ ಕಾಲ ಭಕ್ತಾಧಿಗಳು ತಿಮ್ಮಪ್ಪನ ಕಣ್ತುಂಬಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು.ಶನಿವಾರ ಒಂದೇ ದಿನ 72,923 ಭಕ್ತರು ತಿರುಪತಿಗೆ ಆಗಮಿಸಿದ್ದರು. 35,571 ಭಕ್ತರು ಕ್ಷೌರ ಸೇವೆ ನೆರವೇರಿಸಿದ್ದಾರೆ. ಅಲ್ಲದೇ 3.33 ಕೋಟಿ ರು.ಗಳಷ್ಟು ಹುಂಡಿ ಹಣ ಸಂಗ್ರಹವಾಗಿದೆ.
ಶೂ ಧರಿಸಿ ತಿರುಪತಿ ಮುಖ್ಯದ್ವಾರ ಪ್ರವೇಶ: 7 ಸಿಬ್ಬಂದಿಗಳ ಅಮಾನತು
ತಿರುಪತಿ: ವಿಶ್ವವಿಖ್ಯಾತ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲದಲ್ಲಿ ಮೂವರು ಶೂ ಧರಿಸಿ ದೇವಾಲಯದ ಮುಖ್ಯದ್ವಾರ ಪ್ರವೇಶಿಸಿದ ಘಟನೆಗೆ ಸಂಬಂಧಿಸಿದಂತೆ ಟಿಟಿಡಿಯ ಇಬ್ಬರು ನೌಕರರು ಮತ್ತು ಐವರು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಾಥಮಿಕ ವಿಚಾರಣೆಯ ಬಳಿಕ, ಟಿಟಿಡಿ ಆಡಳಿತವು ಕಾರ್ಯನಿರ್ವಾಹಕ ಅಧಿಕಾರಿ ಜೆ. ಶ್ಯಾಮಲಾ ರಾವ್ ಅವರ ನಿರ್ದೇಶನದ ಮೇರೆಗೆ, ಹಿರಿಯ ಸಹಾಯಕ ಚಕ್ರಪಾಣಿ, ಕಿರಿಯ ಸಹಾಯಕ ವಾಸು ಹಾಗೂ ಟಿಟಿಡಿಯ ಭದ್ರತಾ ಪಡೆಯ ಐವರು ಸದಸ್ಯರಾದ ಡಿ. ಬಾಲಕೃಷ್ಣ, ವಸುಮತಿ, ಟಿ. ರಾಜೇಶ್ ಕುಮಾರ್, ಕೆ. ವೆಂಕಟೇಶ್ ಮತ್ತು ಎಂ. ಬಾಬು ಅವರನ್ನು ಅಮಾನತುಗೊಳಿಸಿದೆ.
ಒಂದೇ ಗಂಟೆ ಅವಧೀಲಿ ಭಾರತ ಸೇರಿ ಮೂರು ದೇಶಗಳಲ್ಲಿ 4 ಭೂಕಂಪ
ನವದೆಹಲಿ: ಮಾರ್ಚ್‌ನಲ್ಲಿ ನಡೆದ ಮ್ಯಾನ್ಮಾರ್, ಥಾಯ್ಲೆಂಡ್ ಭೂಕಂಪನ ಮಾಸುವ ಮುನ್ನವೇ ಮತ್ತೆ ಕೆಲವೆಡೆ ಭೂಮಿ ನಡುಗಿದ್ದು, ಭಾರತ, ಮ್ಯಾನ್ಮಾರ್, ತಜಕಿಸ್ತಾನ್ ದೇಶಗಳಲ್ಲಿ ಗಂಟೆಯ ಅಂತರದಲ್ಲಿ ನಾಲ್ಕು ಕಡೆಗಳಲ್ಲಿ ಭೂಮಿ ಕಂಪಿಸಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಲಘು ಭೂಕಂಪನ ಸಂಭವಿಸಿದ್ದು, 3.4ರಷ್ಟು ತೀವ್ರತೆಯಲ್ಲಿ ಕಂಪಿಸಿದೆ.ಸಣ್ಣ ಪ್ರಮಾಣದ ಭೂಕಂಪನವಾದರೂ ಜನರು ಭಯದಿಂದ ಕಟ್ಟಡಗಳಿಂದ ಹೊರ ಓಡಿ ಬಂದ ಘಟನೆ ನಡೆಯಿತು. ಇನ್ನು ಮ್ಯಾನ್ಮಾರ್‌ನಲ್ಲೂ ಭಾನುವಾರ ಭೂಮಿ ಕಂಪಿಸಿದ್ದು, ಶೇ.5.5ರಷ್ಟು ತೀವ್ರತೆ ದಾಖಲಾಗಿದೆ. ಮತ್ತೊಂದೆಡೆ ತಜಕಿಸ್ತಾನದಲ್ಲಿ ಭೂಮಿ ಕಂಪಿಸಿದ್ದು, ಭಾನುವಾರ ಬೆಳಿಗ್ಗೆ 9.54ರ ಸುಮಾರಿಗೆ 6.1ರ ತೀವ್ರತೆಯಲ್ಲಿ ಕಂಪನ ವಾಗಿದೆ.