ಸಾರಾಂಶ
ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ 8 ಮಂದಿ ನಕ್ಸಲರು ಮತ್ತು ವಿಶೇಷ ಕಾರ್ಯಪಡೆಯ(ಎಸ್‌ಟಿಎಫ್)ಯ ಓರ್ವ ಸಿಬ್ಬಂದಿ ಹತರಾಗಿದ್ದಾರೆ.
ನಾರಾಯಣಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿ ಹಾಗೂ ನಕ್ಸಲರ ನಡುವೆ ಶನಿವಾರ ನಡೆದ ಗುಂಡಿನ ಚಕಮಕಿಯಲ್ಲಿ 8 ಮಂದಿ ನಕ್ಸಲರು ಮತ್ತು ವಿಶೇಷ ಕಾರ್ಯಪಡೆಯ(ಎಸ್‌ಟಿಎಫ್)ಯ ಓರ್ವ ಸಿಬ್ಬಂದಿ ಹತರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಎಸ್‌ಟಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ನಾರಾಯಣಪುರ, ಕಂಕೇರ್, ದಾಂತೇವಾಡ ಮತ್ತು ಕೊಂಡಗಾಂವ್ ಜಿಲ್ಲೆಗಳ ಭದ್ರತಾ ಸಿಬ್ಬಂದಿಗಳ ಜಂಟಿ ತಂಡವು ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ನಕ್ಸಲರ ಗುಂಪು ಎದುರಾಗಿದೆ. ಈ ವೇಳೆ ಉಭಯ ಬಣಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು ಇದರಲ್ಲಿ 8 ನಕ್ಸಲರು ಹತರಾಗಿದ್ದಾರೆ. ಇದೇ ವೇಳೆ ನಕ್ಸಲರ ಗುಂಡಿಗೆ ಓರ್ವ ಭದ್ರತಾ ಸಿಬ್ಬಂದಿ ಕೂಡಾ ಹುತಾತ್ಮರಾಗಿದ್ದಾರೆ. ಘಟನಾ ಸ್ಥಳದಿಂದ ನಕ್ಸಲರಿಗೆ ಸೇರಿದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.
ಈ ವರ್ಷದಲ್ಲಿ ರಾಜ್ಯದಲ್ಲಿ ಭದ್ರತಾ ಪಡೆಗಳು ನಕ್ಸಲರ ವಿರುದ್ಧ ಭಾರೀ ಪ್ರಮಾಣದ ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ 131 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿದೆ.