ಎಂಟನೇ ವೇತನ ಆಯೋಗ ರಚಿಸುವ ಅಂತಿಮ ಪ್ರಕ್ರಿಯೆ : ಕೇಂದ್ರ ಸರ್ಕಾರಿ ನೌಕರರ ವೇತನ ಏರಿಕೆ?

| N/A | Published : Mar 27 2025, 01:03 AM IST / Updated: Mar 27 2025, 04:50 AM IST

ಸಾರಾಂಶ

ಕೇಂದ್ರ ಸರ್ಕಾರವು ಎಂಟನೇ ವೇತನ ಆಯೋಗ ರಚಿಸುವ ಅಂತಿಮ ಪ್ರಕ್ರಿಯೆ ಆರಂಭಿಸಿದೆ. ಈ ಕುರಿತ ಷರತ್ತು ಮತ್ತು ನಿಬಂಧನೆಗಳನ್ನು ಮುಂದಿನ ತಿಂಗಳ ಆರಂಭದಲ್ಲಿ ಸಚಿವ ಸಂಪುಟದ ಒಪ್ಪಿಗೆಗಾಗಿ ಕಳುಹಿಸಿಕೊಡಲಿದೆ.  

ಮುಂಬೈ: ಕೇಂದ್ರ ಸರ್ಕಾರವು ಎಂಟನೇ ವೇತನ ಆಯೋಗ ರಚಿಸುವ ಅಂತಿಮ ಪ್ರಕ್ರಿಯೆ ಆರಂಭಿಸಿದೆ. ಈ ಕುರಿತ ಷರತ್ತು ಮತ್ತು ನಿಬಂಧನೆಗಳನ್ನು ಮುಂದಿನ ತಿಂಗಳ ಆರಂಭದಲ್ಲಿ ಸಚಿವ ಸಂಪುಟದ ಒಪ್ಪಿಗೆಗಾಗಿ ಕಳುಹಿಸಿಕೊಡಲಿದೆ. ಕ್ಯಾಬಿನೆಟ್‌ ಒಪ್ಪಿಗೆ ಬೆನ್ನಲ್ಲೇ ಈ ಕುರಿತ ನೋಟಿಸ್‌ ಹೊರಬೀಳಲಿದ್ದು, ಈ ಮೂಲಕ ಏಪ್ರಿಲ್‌ನಿಂದಲೇ 8ನೇ ವೇತನ ಆಯೋಗ ತನ್ನ ಕಾರ್ಯ ಆರಂಭಿಸಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ, 8ನೇ ವೇತನ ಆಯೋಗದ ಅನುಷ್ಠಾನದಿಂದ ಕೇಂದ್ರ ಸರ್ಕಾರಿ ನೌಕರರ ವೇತನ 14 ಸಾವಿರದಿಂದ 19 ಸಾವಿರದ ವರೆಗೆ ಏರಿಕೆಯಾಗಲಿದೆ ಎಂದು ಅಮೆರಿಕದ ಅಂತಾರಾಷ್ಟ್ರೀಯ ಹೂಡಿಕೆ ಕಂಪನಿ ಗೋಲ್ಡ್‌ಮನ್‌ ಸ್ಯಾಚ್ಸ್‌ ಹೇಳಿದೆ. 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಈ ವೇತನ ಪರಿಷ್ಕರಣೆಯ ಲಾಭಪಡೆಯಲಿದ್ದಾರೆ.

8ನೇ ವೇತನ ಆಯೋಗ ಏಪ್ರಿಲ್‌ನಲ್ಲಿ ನೇಮಕವಾಗುವ ಸಾಧ್ಯತೆ ಇದ್ದು, ಈ ಸಮಿತಿಯ ಶಿಫಾರಸ್ಸುಗಳು 2026-27ರಲ್ಲಿ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ.

ಹೇಗಿರುತ್ತೆ ಲೆಕ್ಕಾಚಾರ?:

ಕೇಂದ್ರ ಸರ್ಕಾರದ ಮಧ್ಯಮ ಹಂತದ ನೌಕರರ ಸರಾಸರಿ ತಿಂಗಳ ವೇತನ 1 ಲಕ್ಷದಷ್ಟಿರುತ್ತದೆ. ಬಜೆಟ್‌ ಹಂಚಿಕೆ ಆಧಾರದ ಮೇಲೆ ವೇತನ ಹೆಚ್ಚಳ ನಿರ್ಧಾರವಾಗಲಿದೆ. ಒಂದು ವೇಳೆ ಬಜೆಟ್‌ ಹಂಚಿಕೆ 1.75 ಲಕ್ಷ ಕೋಟಿ ಆಗಿದ್ದರೆ ವೇತನವು 1,14, 600 ಆಗಲಿದೆ. ಒಂದು ವೇಳೆ ಬಜೆಟ್‌ ಹಂಚಿಕೆ 2 ಲಕ್ಷ ಕೋಟಿಯಾದರೆ ವೇತನವು 1.160, 700 ರು.ಗೆ ಏರಿಕೆಯಾಗಲಿದೆ. ಅದೇ ರೀತಿ ಬಜೆಟ್‌ನಲ್ಲಿ 2.25 ಲಕ್ಷ ಕೋಟಿಯಷ್ಟು ಹಣ ಹಂಚಿಕೆ ಮಾಡಿದರೆ ವೇತನವು 1,18,800 ರು.ವರೆಗೆ ಹೆಚ್ಚಳ ಕಾಣಲಿದೆ ಎಂದು ಅಂದಾಜಿಸಲಾಗಿದೆ.