ಸಾರಾಂಶ
-ಕಟ್ಟಡಗಳ ನಿಖರ ದತ್ತಾಂಶಕ್ಕಾಗಿ ಡಿಜಿಟಲ್ ಗುರುತು
- ಅಕ್ಷಾಂಶ-ರೇಖಾಂಶ ಆಧರಿಸಿ ಮನೆಗೆ ನಿರ್ದಿಷ್ಟ ನಕ್ಷೆನವದೆಹಲಿ: 2027ರ ಜನಗಣತಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ಮನೆ ಮತ್ತು ಕಟ್ಟಡಗಳಿಗೆ ಜಿಯೋ-ಟ್ಯಾಗ್ ಮೂಲಕ ಡಿಜಿಟಲ್ ಗುರುತು ನೀಡಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ಕರ್ನಾಟಕದಲ್ಲಿ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆಯಲ್ಲಿ ಮನೆಗಳಿಗೆ ಜಿಯೋ-ಟ್ಯಾಗ್ ನೀಡಲಾಗಿದೆ. ಇಜಿಯೋ-ಟ್ಯಾಗಿಂಗ್ ಎಂದರೆ ಒಂದು ಕಟ್ಟಡಕ್ಕೆ ಅಕ್ಷಾಂಶ ಮತ್ತು ರೇಖಾಂಶವನ್ನು ಆಧರಿಸಿ ವಿಶಿಷ್ಟ ಸ್ಥಳದ ಗುರುತು ನೀಡುವ ಪ್ರಕ್ರಿಯೆ. ಇದನ್ನು ಜಿಯೋಗ್ರಾಫಿಕಲ್ ಇನ್ಫರ್ಮೇಷನ್ ಸಿಸ್ಟಮ್ (ಜಿಐಎಸ್) ನಕ್ಷೆಯಲ್ಲಿ ದಾಖಲಿಸಲಾಗುತ್ತದೆ. ಇದರಿಂದಾಗಿ ಒಂದು ಮನೆಯ ಖಚಿತ ಸ್ಥಳವನ್ನು ಡಿಜಿಟಲ್ ನಕ್ಷೆಯಲ್ಲಿ ಗುರುತಿಸಬಹುದಾಗಿದೆ.
ಜಿಯೋ-ಟ್ಯಾಗ್‌ನಿಂದ ಏನು ಪ್ರಯೋಜನ?:ಈ ಹಿಂದೆ ಮನೆಗಳ ನಕ್ಷೆಯನ್ನು ಕೈಯಿಂದ ರಚಿಸಲಾಗುತ್ತಿತ್ತು. ಆದರೆ ಜಿಯೋ-ಟ್ಯಾಗ್‌ನಿಂದ ಸ್ವಯಂಚಾಲಿತವಾಗಿ ಡಿಜಿಟಲ್ ನಕ್ಷೆಗಳು ರಚನೆಯಾಗುತ್ತವೆ. ಇದರಿಂದ ಒಂದು ಪ್ರದೇಶದಲ್ಲಿ ಎಷ್ಟು ಮನೆಗಳು ಮತ್ತು ಕುಟುಂಬಗಳಿವೆ ಎಂಬುದನ್ನು ನಿಖರವಾಗಿ ತಿಳಿಯಬಹುದು. ಗಣತಿದಾರರಿಗೆ ಕೆಲಸವನ್ನು ಸರಿಯಾಗಿ ವಿಂಗಡಿಸಲು ಸಹಾಯವಾಗುವುದರಿಂದ ಜನಗಣತಿಯ ಕೆಲಸವೂ ಸುಲಭವಾಗುತ್ತದೆ. ವಸತಿ ಯೋಜನೆ ಮತ್ತು ಇತರ ಸರ್ಕಾರಿ ಕಾರ್ಯಕ್ರಮಗಳಿಗೆ ಜಿಯೋ-ಟ್ಯಾಗ್‌ನ ದತ್ತಾಂಶಗಳು ನೆರವಾಗುತ್ತವೆ.
=====ಡಿಜಿಟಲ್ ಜನಗಣತಿ:
2027ರ ಜನಗಣತಿಯು ಸಂಪೂರ್ಣ ಡಿಜಿಟಲ್ ಆಗಿರುತ್ತದೆ. ಮಾಹಿತಿ ಸಂಗ್ರಹಕ್ಕಾಗಿ ಮೊಬೈಲ್ ಆ್ಯಪ್‌ಗಳನ್ನು ಬಳಸಲಾಗುತ್ತದೆ. ಆ್ಯಪ್ ಮೂಲಕ ಜನರು ಸ್ವಯಂ-ಗಣತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.ಜನಗಣತಿಯ ಆರಂಭಿಕ ಹಂತವಾದ ಮನೆಪಟ್ಟಿ ಕಾರ್ಯಾಚರಣೆ 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಡೆಯಲಿದೆ. ಗಣತಿಯು 2027ರ ಫೆಬ್ರವರಿಯಿಂದ ಆರಂಭವಾಗಲಿದೆ. ಹಿಮಾಚ್ಛಾದಿತ ಪ್ರದೇಶಗಳಾದ ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 2026ರ ಸೆಪ್ಟೆಂಬರ್‌ನಲ್ಲಿಯೇ ಗಣತಿ ನಡೆಯಲಿದೆ.