ವಿವಾದಕ್ಕೆ ಗುರಿಯಾಗಿರುವ ಖ್ಯಾತ ಗಾಯಕ, ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಈ ಕುರಿತು ಭಾನುವಾರ ವಿಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅದರಲ್ಲಿ ‘ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ನನ್ನ ಮಾತಿನ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
- ನೋವುಂಟು ಮಾಡುವ ಉದ್ದೇಶ ನನಗಿಲ್ಲ: ತೇಪೆ- ಆದರೆ ವಿಷಾದ ವ್ಯಕ್ತಪಡಿಸದ ಸಂಗೀತ ನಿರ್ದೇಶಕ
ಮುಂಬೈ: ‘ಬಾಲಿವುಡ್‌ನಲ್ಲಿ ಕೋಮು ಮನಃಸ್ಥಿತಿಯ ಕಾರಣ ನನಗೆ ಅವಕಾಶ ಸಿಗುತ್ತಿಲ್ಲ’ ಎಂಬ ಹೇಳಿಕೆ ನೀಡಿ ತೀವ್ರ ವಿವಾದಕ್ಕೆ ಗುರಿಯಾಗಿರುವ ಖ್ಯಾತ ಗಾಯಕ, ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಈ ಕುರಿತು ಭಾನುವಾರ ವಿಡಿಯೋ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅದರಲ್ಲಿ ‘ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ನನ್ನ ಮಾತಿನ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.ತಮ್ಮ ಹೇಳಿಕೆಯಲ್ಲಿ ಎಲ್ಲೂ ಅವರು ನಾನು ‘ಬಿಬಿಸಿ ಏಷ್ಯಾ’ಗೆ ನೀಡಿದ ಸಂದರ್ಶನದಲ್ಲಿ ಆಡಿದ ಮಾತಿನ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ. ಹೀಗಾಗಿ ಇದು ಅವರು ಪರೋಕ್ಷವಾಗಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಸ್ಪಷ್ಟನೆ:ತಮ್ಮ ಹೇಳಿಕೆಗೆ ಬಾಲಿವುಡ್‌ನಿಂದಲೇ ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ರೆಹಮಾನ್, ‘ಸಂಗೀತ ಯಾವಾಗಲೂ ಒಂದು ಸಂಸ್ಕೃತಿಯನ್ನು ಸಂಪರ್ಕಿಸುವ, ಆಚರಿಸುವ ಮತ್ತು ಗೌರವಿಸುವ ಮಾರ್ಗ. ಭಾರತ ನನ್ನ ಸ್ಫೂರ್ತಿ, ಗುರು ಮತ್ತು ಮನೆ. ನನ್ನ ಮಾತಿನ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿರಬಹುದು. ಆದರೆ ನನ್ನ ಉದ್ದೇಶ ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆ ಮಾಡುವುದಾಗಿದೆ. ನಾನು ಎಂದಿಗೂ ನೋವುಂಟು ಮಾಡಲು ಬಯಸಿಲ್ಲ. ನನ್ನ ಪ್ರಾಮಾಣಿಕತೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.
ಬಿಜೆಪಿ, ವಿಎಚ್‌ಪಿ ವಿರೋಧ:ರೆಹಮಾನ್ ಹೇಳಿಕೆಗೆ ಬಾಲಿವುಡ್ ಬಳಿಕ ಬಿಜೆಪಿ, ವಿಶ್ವ ಹಿಂದೂ ಪರಿಷತ್‌ನಿಂದಲೂ (ವಿಎಚ್‌ಪಿ) ವಿರೋಧ ವ್ಯಕ್ತವಾಗಿದೆ. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಮಾತನಾಡಿ, ‘ಮತಗಳ ಆಚೆಗೆ ರೆಹಮಾನ್ ಗೌರವಿಸಲ್ಪಟ್ಟಿದ್ದಾರೆ. ಅವರು ಧರ್ಮವನ್ನು ಎಳೆದುತಂದಿದ್ದು ದುರದೃಷ್ಟಕರ’ ಎಂದಿದ್ದಾರೆ. ‘ರೆಹಮಾನ್ ಈ ಹಿಂದೆ ಹಿಂದೂವಾಗಿದ್ದರು. ಅವರ್‍ಯಾಕೆ ಇಸ್ಲಾಂಗೆ ಮತಾಂತರವಾದರು? ಘರ್‌ವಾಪ್ಸಿ ಆಗಿ. ಬಹುಶಃ ನಿಮಗೆ ಮತ್ತೆ ಅವಕಾಶಗಳು ಬರಬಹುದು’ ಎಂದು ವಿಎಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಟೀಕಿಸಿದ್ದಾರೆ.