ತಮಿಳು ಚಿತ್ರರಂಗದಲ್ಲೂ ನಡೆದಿತ್ತು ದರ್ಶನ್‌ ರೀತಿ ಕೇಸ್‌

| Published : Jun 20 2024, 11:24 AM IST

crime news rajasthan
ತಮಿಳು ಚಿತ್ರರಂಗದಲ್ಲೂ ನಡೆದಿತ್ತು ದರ್ಶನ್‌ ರೀತಿ ಕೇಸ್‌
Share this Article
  • FB
  • TW
  • Linkdin
  • Email

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನ ಆಗಿರುವ ಪ್ರಕರಣವು, 80 ವರ್ಷ ಹಿಂದೆ ತಮಿಳು ಚಿತ್ರರಂಗದಲ್ಲಿ ನಡೆದ ಕೊಲೆಯ ಘಟನೆಯೊಂದನ್ನು ನೆನಪಿಸಿದೆ.

ಚೆನ್ನೈ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಬಂಧನ ಆಗಿರುವ ಪ್ರಕರಣವು, 80 ವರ್ಷ ಹಿಂದೆ ತಮಿಳು ಚಿತ್ರರಂಗದಲ್ಲಿ ನಡೆದ ಕೊಲೆಯ ಘಟನೆಯೊಂದನ್ನು ನೆನಪಿಸಿದೆ. ಆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಖ್ಯಾತ ನಟರಿಬ್ಬರ ಸಿನಿಮಾ ಜೀವನವು, ಅವರು ಜೈಲು ಸೇರಿದ ಬಳಿಕ ಅಂತ್ಯಗೊಂಡಿತ್ತು ಎಂಬುದನ್ನೂ ಇತಿಹಾಸ ಹೇಳುತ್ತದೆ.

ಅದು 1944ರಲ್ಲಿ ಸಂಭವಿಸಿದ್ದ ಪತ್ರಕರ್ತ ಲಕ್ಷ್ಮೀಕಾಂತನ್ ಅವರ ಹತ್ಯೆ. ನಟರ ಬಗ್ಗೆ ಏನೋ ಬರೆದಿದ್ದಾರೆ ಎಂಬ ಕಾರಣಕ್ಕೆ ಬಾಡಿಗೆ ಹಂತಕರ ಮೂಲಕ ಇವರ ಹತ್ಯೆ ನಡೆದಿತ್ತು. ಇದು ತಮಿಳು ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು. ಏಕೆಂದರೆ ಈ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದು ತಮಿಳು ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ಎಂ.ಕೆ. ತ್ಯಾಗರಾಜ ಭಾಗವತರ್ ಮತ್ತು ತಮಿಳು ಚಿತ್ರರಂಗದ ‘ಚಾರ್ಲಿ ಚಾಪ್ಲಿನ್’ ಎಂದೇ ಖ್ಯಾತರಾದ ಸಹವರ್ತಿ ಹಾಸ್ಯನಟ ಎನ್‌.ಎಸ್. ಕೃಷ್ಣನ್‌ ಅವರದ್ದು. ತ್ಯಾಗರಾಜನ್‌ ಪ್ರತಿನಿತ್ಯ ಮದ್ರಾಸ್‌ನಿಂದ ತಿರುಚಿಗೆ ವಿಶೇಷ ವಿಮಾನದಲ್ಲಿ ಮೀನು ತರಿಸಿಕೊಳ್ಳುತ್ತಿದ್ದರಂತೆ. ಆ ಕಾಲದಲೇ ಅವರು ಅಷ್ಟೊಂದು ಶ್ರೀಮಂತಿಕೆ ಹೊಂದಿದ್ದರು.

ಈ ಕೊಲೆ ಕೇಸ್‌ನಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಿಸಿ ಭಾಗವತರ್ ಹಾಗೂ ಕೃಷ್ಣನ್ ಅವರನ್ನು ಬಂಧಿಸಲಾಗಿತ್ತು ಹಾಗೂ ತಪ್ಪಿತಸ್ಥರು ಎಂದು ಸಾರಲಾಗಿತ್ತು. ಇಬ್ಬರೂ ಅಂಡಮಾನ್ ಜೈಲಿನಲ್ಲಿ 30 ತಿಂಗಳುಗಳನ್ನು ಕಳೆದರು. ಆದರೆ 30 ತಿಂಗಳ ನಂತರ ಪ್ರೈವಿ ಕೌನ್ಸಿಲ್ (ಅಂದಿನ ಸುಪ್ರೀಂ ಕೋರ್ಟ್‌ಗೆ ಸಮಾನ) ಅವರ ಶಿಕ್ಷೆಯನ್ನು ರದ್ದುಗೊಳಿಸಿತು. ಬಳಿಕ ಇಬ್ಬರೂ ಜೈಲಿನಿಂದ ಹೊರಬಂದರು. ಆದರೆ 8 ದಶಕ ಕಳೆದರೂ ಲಕ್ಷ್ಮೀಕಾಂತನ್‌ರ ಕೊಲೆ ಮಾಡಿದ್ದು ಯಾರು ಎನ್ನುವುದು ಇನ್ನೂ ಪತ್ತೆಯಾಗಿಲ್ಲ.

ಪ್ರಕರಣದಲ್ಲಿ ಖುಲಾಸೆಯಾಗಿ ಹೊರಬಂದಾಗ, ತಮಿಳುನಾಡಿನ ಸಿನಿಮಾ ನೋಡುಗರು ಭಾಗವತರ್‌ ಹಾಗೂ ಕೃಷ್ಣನ್‌ರನ್ನು ಮರೆತು ಬೇರೆ ಚಿತ್ರನಟರತ್ತ ಆಕರ್ಷಿತರಾಗಿದ್ದರು. ಹೀಗಾಗಿ ಈ ಕೊಲೆ ಪ್ರಕರಣ ಇಬ್ಬರೂ ನಟರ ನಟನಾ ಜೀವನ ಅಂತ್ಯಕ್ಕೆ ನಾಂದಿ ಹಾಡಿತ್ತು.

ಈ ಇಬ್ಬರು ಜೈಲು ಪಾಲಾಗಿ ತೆರೆಮರೆಗೆ ಸರಿದ ಬಳಿಕ ಎಂ.ಜಿ.ರಾಮಚಂದ್ರನ್‌ರ ಉದಯವಾಯಿತು. ಅವರು ಮೂರು ದಶಕಗಳ ಕಾಲ ತಮಿಳು ಸಿನಿಮಾದ ಸೂಪರ್‌ ಸ್ಟಾರ್‌ ಆಗಿ ಮೆರೆದರು. ದಶಕ ಕಾಲ ತಮಿಳುನಾಡಿನ ಮುಖ್ಯಮಂತ್ರಿ ಆಗಿ ಅಧಿಕಾರವನ್ನೂ ಅನುಭವಿಸಿದರು.