ಬಾಲಿವುಡ್ ನಟ ಅಮೀರ್ ಖಾನ್ ಮತ್ತೊಮ್ಮೆ ಪ್ರೀತಿಯಲ್ಲಿ : ಬೆಂಗಳೂರಿನ ಗೌರಿ ಜತೆ ಲವ್‌

| N/A | Published : Feb 07 2025, 12:31 AM IST / Updated: Feb 07 2025, 05:26 AM IST

ಸಾರಾಂಶ

ಬಾಲಿವುಡ್ ನಟ ಅಮೀರ್ ಖಾನ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಎಂಬಾಕೆ ಜತೆ ರಿಲೇಶನ್‌ಶಿಪ್‌ನಲ್ಲಿದ್ದು, ಆಕೆಯನ್ನು ಕುಟುಂಬಸ್ಥರಿಗೆ ಪರಿಚಯ ಮಾಡಿಸಿದ್ದಾರೆ ಎಂದು ವರದಿಯಾಗಿದೆ.

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೆಂಗಳೂರು ಮೂಲದ ಗೌರಿ ಎಂಬಾಕೆ ಜತೆ ರಿಲೇಶನ್‌ಶಿಪ್‌ನಲ್ಲಿದ್ದು, ಆಕೆಯನ್ನು ಕುಟುಂಬಸ್ಥರಿಗೆ ಪರಿಚಯ ಮಾಡಿಸಿದ್ದಾರೆ ಎಂದು ವರದಿಯಾಗಿದೆ. ಗೌರಿ ಸಿನೆಮಾ ರಂಗಕ್ಕೆ ಅಪರಿಚಿತರು ಎಂಬುದಾಗಿಯೂ ತಿಳಿದುಬಂದಿದೆ. 59 ವರ್ಷದ ಅಮೀರ್ 1986ರಲ್ಲಿ ರೀನಾ ದತ್ತ ಅವರನ್ನು ವಿವಾಹವಾಗಿದ್ದರು. 2002ರಲ್ಲಿ ದಂಪತಿ ವಿಚ್ಛೇದನ ಪಡೆದಿದ್ದರು. 2005ರಲ್ಲಿ ಕಿರಣ್ ರಾವ್‌ರನ್ನು ಮದುವೆಯಾಗಿ 2021ರಲ್ಲಿ ಬೇರ್ಪಟ್ಟಿದ್ದರು. ಇದೀಗ ಅಮೀರ್ 3ನೇ ಬಾರಿ ಹಸೆಮಣೆ ಏರುವ ಗುಸುಗುಸು ಹರಿದಾಡುತ್ತಿದೆ.

ಮಮತಾ ಕುಲಕರ್ಣಿ ಬಳಿಕ ಇಶಿಕಾ ನಟನೆಗೆ ಗುಡ್‌ಬೈ, ಸನ್ಯಾಸ ದೀಕ್ಷೆ ಸ್ವೀಕಾರ 

ಪ್ರಯಾಗ್‌ರಾಜ್‌: ಸಿನಿಮಾ, ಮ್ಯೂಸಿಕ್ ವಿಡಿಯೋಗಳ ಮೂಲಕ ಜನಪ್ರಿಯತೆ ಪಡೆದದ್ದ ನಟಿ ಇಶಿಕಾ ತನೇಜಾ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸಾಧ್ವಿಯಾಗಿ ಬದಲಾಗಿದ್ದು, ಲೌಕಿಕ ಬದುಕನ್ನು ತೊರೆದಯ ಆಧ್ಯಾತ್ಮಿಕ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಜ.29ರಂದು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನದ ಬಳಿಕ ಸಾಧ್ವಿಯಾಗಿ ಬದಲಾಗಿದ್ದಾರೆ. 

‘ತಾವು ಸನಾತನ ಧರ್ಮವನ್ನು ಉತ್ತೇಜಿಸುವುದಾಗಿ ಪ್ರತಿಜ್ಞೆ ಮಾಡಿದ್ದು, ಇಂದಿನ ಯುವತಿಯರು ಕೂಡ ಮುಂದೆ ಬಂದು ಸನಾತನ ಮಾರ್ಗವನ್ನು ಅಳವಡಿಸಿಕೊಳ್ಳಬೇಕು. ಮತ್ತೆಂದೂ ಹಳೆಯ ಜೀವನಕ್ಕೆ ಮರಳುವುದಿಲ್ಲ ಎಂದಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಮಮತಾ ಕುಲಕರ್ಣಿ ಕೂಡಾ ಚಿತ್ರರಂಗಕ್ಕೆ ವಿದಾಯ ಹೇಳಿ ಸಾಧ್ವಿಯಾಗಿ ಬದಲಾಗಿದ್ದರು.

ಜೊಮ್ಯಾಟೋದ ಹೊಸ ಹೆಸರು ‘ಎಟರ್ನಲ್‌: ಕಂಪನಿ ಲೋಗೋ ಬದಲು

ನವದೆಹಲಿ: ಆನ್‌ಲೈನ್‌ ಮೂಲಕ ಆಹಾರ ಬುಕಿಂಗ್‌ ಮತ್ತು ಸರಬರಾಜು ಸೇವೆ ನೀಡುವ ಜೊಮ್ಯಾಟೋ ತನ್ನ ಹೆಸರನ್ನು ಎಟರ್ನಲ್‌ ಎಂದು ಬದಲಿಸಲು ನಿರ್ಧರಿಸಿದೆ. ಗುರುವಾರ ನಡೆದ ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಹೊಸ ಹೆಸರಿಗೆ ಅನುಮೋದನೆ ನೀಡಲಾಗಿದೆ. 

ಜೊತೆಗೆ ಶೀಘ್ರವೇ ಕಂಪನಿಗೆ ಹೊಸ ಲೋಗೋವನ್ನು ಅನಾವರಣಗೊಳಿಸುವುದಾಗಿ ಹೇಳಿದೆ. ಕಂಪನಿಯ ಆಂತರಿಕವಾಗಿ ಈಗಾಗಲೇ ಎಟರ್ನಲ್‌ ಹೆಸರು ಬಳಕೆ ಮಾಡುತ್ತಿದ್ದು, ಇನ್ನು ಸಂಪೂರ್ಣವಾಗಿ ಹೊಸ ಹೆಸರು ಬಳಸಲಾಗುತ್ತದೆ. ಇದರ ಅಡಿಯಲ್ಲಿ ಫುಡ್‌ ಡೆಲಿವರಿ, ಬ್ಲಿಂಕಿಟ್‌, ಹೈಪರ್‌ಪ್ಯೂರ್‌ ಮತ್ತು ಇನ್ನಿತರ ಸೇವೆಗಳು ಒಳಗೊಂಡಿರುತ್ತದೆ ಎಂದು ಜೊಮ್ಯಾಟೋ ತಿಳಿಸಿದೆ.

13 ವರ್ಷದ ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದ ಗ್ಯಾಂಗ್ ರೇಪ್

ಚೆನ್ನೈ: 13 ವರ್ಷದ ವಿದ್ಯಾರ್ಥಿನಿ ಮೇಲೆ ಶಾಲೆಯ ಶೌಚಾಲಯದಲ್ಲಿಯೇ ಮೂವರು ಶಿಕ್ಷಕರು ಲೈಂಗಿಕ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. 

ಜ.2ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಬಳಿಕ ಜ.5ರಿಂದ ಬಾಲಕಿ ಶಾಲೆಗೆ ಗೈರು ಹಾಜರಾಗಿದ್ದಳು. ಈ ಬಗ್ಗೆ ವಿಚಾರಿಸಲು ಶಾಲೆಯ ಮುಖ್ಯ ಶಿಕ್ಷಕ ಬಾಲಕಿಯ ಮನೆಗೆ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ಮುಖ್ಯ ಶಿಕ್ಷಕರ ಬಳಿ ಬಾಲಕಿಯ ಪೋಷಕರು ತಮ್ಮ ಮಗಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಳೆ. ಹಾಗಾಗಿ ಶಾಲೆಗೆ ಬಂದಿಲ್ಲ ಎಂದಿದ್ದಾರೆ. ಆದರೆ ಈ ಮಾತಿನಲ್ಲಿ ನಂಬಿಕೆ ಬಾರದ ಕಾರಣ ಮುಖ್ಯೋಪಾಧ್ಯಾಯರು ಒತ್ತಾಯಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿನ್ನಸ್ವಾಮಿ, ಆರುಮುಗಂ, ಪ್ರಕಾಶ್‌ ಎನ್ನುವ ಮೂರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ದೆಹಲಿ ಗದ್ದುಗೆ ಯಾರಿಗೆ: ನಾಳೆ ಫಲಿತಾಂಶ ಪ್ರಕಟ 

ನವದೆಹಲಿ: ಭಾರೀ ಕುತುಹೂಲ ಸೃಷ್ಟಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿ ಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಲಿದೆ. ಒಟ್ಟು 70 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೂರು ರಾಜಕೀಯ ಪಕ್ಷಗಳು ಗೆಲುವಿನ ನಿರೀಕ್ಷೆಯಲ್ಲಿವೆ. ಆಪ್ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ದಿಲ್ಲಿ ಗದ್ದುಗೆ ಹಿಡಿಯುವ ಕಾತುರದಲ್ಲಿದೆ. ಫೆ.5ರಂದು ಹೊರ ಬಿದ್ದ ಚುನಾವಣೋತ್ತರ ಫಲಿತಾಂಶದಲ್ಲಿ ಬಿಜೆಪಿ ಗೆಲುವು ಪಡೆಯಬಹುದು ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹೀಗಾಗಿ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

ಟ್ರಂಪ್‌ ಎಚ್ಚರಿಕೆ ಬಳಿಕ ಅಮೆರಿಕ ಹಡಗುಗಳಿಗೆ ಪನಾಮಾ ಕಾಲುವೆ ಫ್ರೀ 

ವಾಷಿಂಗ್ಟನ್‌: ಪನಾಮಾ ಕಾಲುವೆಯ ಮೂಲಕ ಅಮೆರಿಕದ ಸರ್ಕಾರಿ ಹಡಗುಗಳಿಗೆ ಯಾವುದೇ ಶುಲ್ಕ ವಿಧಿಸದೇ ಇರಲು ಪನಾಮಾ ಸರ್ಕಾರ ನಿರ್ಧರಿಸಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಪನಾಮಾ ಕಾಲುವೆಯನ್ನು ಬಲವಂತವಾಗಿ ವಶಕ್ಕೆ ತೆಗೆದುಕೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಪನಾಮಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಟ್ರಂಪ್‌ ಎಚ್ಚರಿಕೆ ಬಳಿಕ ಚೀನಾ ಜೊತೆಗಿನ ಒನ್‌ ಬೆಲ್ಟ್‌ ಒನ್‌ ರೋಡ್‌ ಯೋಜನೆಯಿಂದಲೂ ಹಿಂದೆ ಸರಿಯುವುದಾಗಿ ಪನಾಮಾ ಅಧ್ಯಕ್ಷರು ಇತ್ತೀಚೆಗೆ ಘೋಷಿಸಿದ್ದರು. ಉಚಿತ ಪ್ರಯಾಣದ ಅವಕಾಶದಿಂದಾಗಿ ಅಮೆರಿಕ ಸರ್ಕಾರಕ್ಕೆ ನೂರಾರು ಕೋಟಿ ರು. ಹಣ ಉಳಿಯಲಿದೆ.