ಸಾರಾಂಶ
ಬಾಯ್ಕಾಟ್ ಟರ್ಕಿ ಅಭಿಯಾನದ ಜೊತೆ ನಟ ಅಮೀರ್ ಖಾನ್ ಹೆಸರು ಥಳಕು ಹಾಕಿಕೊಂಡ ಬೆನ್ನಲ್ಲೇ, ಅಮೀರ್ ಅವರ ಚಿತ್ರ ನಿರ್ಮಾಣ ಸಂಸ್ಥೆ ತನ್ನ ಜಾಲತಾಣಗಳ ಮುಖಪುಟದಲ್ಲಿ ಇದ್ದಕ್ಕಿದ್ದಂತೆ ಭಾರತದ ರಾಷ್ಟ್ರಧ್ವಜದ ಚಿತ್ರ ಪ್ರದರ್ಶಿಸಿದೆ.
ನವದೆಹಲಿ: ಬಾಯ್ಕಾಟ್ ಟರ್ಕಿ ಅಭಿಯಾನದ ಜೊತೆ ನಟ ಅಮೀರ್ ಖಾನ್ ಹೆಸರು ಥಳಕು ಹಾಕಿಕೊಂಡ ಬೆನ್ನಲ್ಲೇ, ಅಮೀರ್ ಅವರ ಚಿತ್ರ ನಿರ್ಮಾಣ ಸಂಸ್ಥೆ ತನ್ನ ಜಾಲತಾಣಗಳ ಮುಖಪುಟದಲ್ಲಿ ಇದ್ದಕ್ಕಿದ್ದಂತೆ ಭಾರತದ ರಾಷ್ಟ್ರಧ್ವಜದ ಚಿತ್ರ ಪ್ರದರ್ಶಿಸಿದೆ.
ಸಂಸ್ಥೆ ತನ್ನ ಅಧಿಕೃತ ಲಾಂಛನ ಚಿತ್ರ ತೆಗೆದು ಅಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರ ಹಾಕಿದೆ. ಸಂಸ್ಥೆಯು ತನ್ನ ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಖಾತೆಗಳ ಮುಖಪುಟ ಬದಲಿಸಿದೆ. ಆಪರೇಷನ್ ಸಿಂದೂರಕ್ಕೆ ತಡವಾಗಿ ಬೆಂಬಲ ಘೋಷಿಸಿದ್ದಕ್ಕೆ ಮತ್ತು ಟರ್ಕಿಯ ಅಧ್ಯಕ್ಷರ ಜೊತೆಗಿನ ಅಮಿರ್ ಹಳೆಯ ಫೋಟೊ ಜಾಲತಾಣದಲ್ಲಿ ಹರಿದಾಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಅಮೀರ್‌ರ ಹೊಸ ಚಿತ್ರ ಬಹಿಷ್ಕರಿಸಬೇಕು ಎಂದು ಕರೆಕೊಟ್ಟಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪಾಕ್ ಮನುಕುಲಕ್ಕೆ ಅಪಾಯಕಾರಿ: ಸಂಸದ ಒವೈಸಿ
ಹೈದರಾಬಾದ್: ‘ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೀರ್ಘ ಇತಿಹಾಸ ಹೊಂದಿದ್ದು, ಮನುಕುಲಕ್ಕೆ ಅಪಾಯಕಾರಿಯಾಗಿದೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ಈ ಕುರಿತು ತಿಳಿಸಬೇಕಾಗಿದೆ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಪಾಕ್ ಪ್ರಾಯೋಜಿತ ಉಗ್ರವಾದವನ್ನು ಜಾಗತಿಕ ವೇದಿಕೆಯಲ್ಲಿ ಎತ್ತಿ ತೋರಿಸಲು ಸರ್ಕಾರವು ಹಲವಾರು ದೇಶಗಳಿಗೆ ಕಳುಹಿಸುತ್ತಿರುವ ಸರ್ವಪಕ್ಷ ನಿಯೋಗದಲ್ಲಿ ಒಬ್ಬರಾಗಿರುವ ಓವೈಸಿ, ‘ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ದೊಡ್ಡ ಬಲಿಪಶು ಭಾರತ. ಜಿಯಾ-ಉಲ್-ಹಕ್ ಕಾಲದಿಂದಲೂ ಜನರ ಹತ್ಯೆಯನ್ನು ನಾವೆಲ್ಲರೂ ನೋಡಿದ್ದೇವೆ. ಪಾಕಿಸ್ತಾನ ಅಮಾಯಕ ನಾಗರಿಕರನ್ನು ಕೊಲ್ಲುತ್ತಿರುವ ಬಗ್ಗೆ ಜಗತ್ತಿಗೆ ತಿಳಿಸಬೇಕಾಗಿದೆ. ಅಂತಾರಾಷ್ಟ್ರೀಯ ಸಮುದಾಯಕ್ಕೆ ನನ್ನ ಸಂದೇಶದ ತಿರುಳು ಇದೇ ಆಗಿರುತ್ತದೆ’ ಎಂದಿದ್ದಾರೆ.
ಕೇದಾರನಾಥದಲ್ಲಿ ಏರ್ ಆಂಬುಲೆನ್ಸ್ ಪತನ: ಯಾವುದೇ ಸಾವು ನೋವಿಲ್ಲ
ಹೃಷಿಕೇಶ: ಉತ್ತರಾಖಂಡದ ಹೃಷಿಕೇಶ ಏಮ್ಸ್ ಆಸ್ಪತ್ರೆಯಿಂದ ಕೇದಾರನಾಥಕ್ಕೆ ಬಂದಿದ್ದ ಏರ್ ಆಂಬುಲೆನ್ಸ್ ಹೆಲಿಕಾಪ್ಟರ್ ಶನಿವಾರ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಏಮ್ಸ್ ಆಸ್ಪತ್ರೆಯಿಂದ ವೈದ್ಯಕೀಯ ಸೇವೆಯಡಿ ರೋಗಿಯನ್ನು ಕರೆದೊಯ್ಯಲು ಕೇದಾರನಾಥಕ್ಕೆ ಹೆಲಿಕಾಪ್ಟರ್ ಆಗಮಿಸಿತ್ತು. ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್‌ನ ಹಿಂಭಾಗ ಮುರಿದು ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್, ವೈದ್ಯ ಮತ್ತು ವೈದ್ಯಕೀಯ ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಗರ್ವಾಲ್ ಆಯುಕ್ತ ವಿನಯ್ ಶಂಕರ್ ಪಾಂಡೆ ತಿಳಿಸಿದ್ದಾರೆ. ಮೇ 8ರಂದು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನಗೊಂಡು 6 ಮಂದಿ ಸಾವನ್ನಪ್ಪಿದ್ದರು.
ಭಾರತದ ಜಲಗಡಿಯಲ್ಲಿ ಬಾಂಗ್ಲಾ ತೇಲುವ ಹೊರಠಾಣೆ ನಿರ್ಮಾಣ
ಢಾಕಾ: ಜಲಮಾರ್ಗಗಳಲ್ಲಿ ಕಣ್ಗಾವಲನ್ನು ಬಲಪಡಿಸುವ ಉದ್ದೇಶದಿಂದ ಬಾಂಗ್ಲಾದೇಶವು ಭಾರತದ ನೈಋತ್ಯ ಗಡಿಯಲ್ಲಿರುವ ಸುಂದರ್‌ಬನ್ ಪ್ರದೇಶದಲ್ಲಿ ತೇಲುವ ಗಡಿ ಹೊರಠಾಣೆ (ಬಿಒಪಿ)ಯನ್ನು ಸ್ಥಾಪಿಸಿದೆ.
ಪ್ಯಾರಾಮಿಲಿಟರಿ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ನಿರ್ಮಿಸಿದ 3ನೇ ಬಿಒಪಿ ಇದಾಗಿದೆ. ಢಾಕಾದಿಂದ ನೈಋತ್ಯಕ್ಕೆ ಸುಮಾರು 300 ಕಿ.ಮೀ. ದೂರದಲ್ಲಿ ರಾಯ್‌ಮಂಗೋಲ್ ನದಿ ಮತ್ತು ಬೋಯೆಸಿಂಗ್ ಕಾಲುವೆಯ ಸಂಗಮದಲ್ಲಿ ನಿರ್ಮಾಣವಾಗಿದ್ದು, ಬಾಂಗ್ಲಾ ಮಧ್ಯಂತರ ಸರ್ಕಾರದ ನಿವೃತ್ತ ಗೃಹ ವ್ಯವಹಾರಗಳ ಸಲಹೆಗಾರ ಲೆ. ಜ. ಜಹಾಂಗೀರ್ ಆಲಂ ಚೌಧರಿ ಉದ್ಘಾಟಿಸಿದ್ದಾರೆ.‘ವಿಶಾಲವಾದ ಜೌಗು ಪ್ರದೇಶ ಮತ್ತು ನದಿ ತೀರದ ಗಡಿ ಪ್ರದೇಶಗಳಲ್ಲಿ ಭದ್ರತೆ ಮತ್ತು ಗಸ್ತು ನಿರ್ವಹಿಸುವುದು ಸವಾಲಿನ ಕೆಲಸ. ಈ ತೇಲುವ ಬಿಒಪಿಯು ಕಳ್ಳಸಾಗಣೆ, ಮಾನವ ಕಳ್ಳಸಾಗಣೆ, ಅರಣ್ಯ ಸಂಪನ್ಮೂಲ ಲೂಟಿ ಮತ್ತು ಇತರ ಗಡಿ ಅಪರಾಧಗಳನ್ನು ತಡೆಯಲು ಬಿಜಿಬಿಗೆ ತಕ್ಷಣದ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಗಳನ್ನು ನೀಡುತ್ತದೆ’ ಎಂದು ಚೌಧರಿ ಹೇಳಿದ್ದಾರೆ.