ದೆಹಲಿ : ಇಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜೀನಾಮೆ ಮತ್ತು ನೂತನ ಸಿಎಂ ಘೋಷಣೆ

| Published : Sep 17 2024, 12:51 AM IST / Updated: Sep 17 2024, 04:55 AM IST

ಸಾರಾಂಶ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಂದು ರಾಜೀನಾಮೆ ಸಲ್ಲಿಸುವ ನಿರೀಕ್ಷೆಯಿದೆ. ಆಪ್ ಶಾಸಕಾಂಗ ಸಭೆಯಲ್ಲಿ ನೂತನ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗಲಿದೆ.

 ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಂಗಳವಾರ ಸಂಜೆ 4.30ಕ್ಕೆ ಉಪರಾಜ್ಯಪಾಲ ವಿ.ಕೆ. ಸಕ್ಸೇನಾ ಅವರನ್ನು ಭೇಟಿಯಾಗಲಿದ್ದು, ಈ ವೇಳೆ ರಾಜೀನಾಮೆ ಸಲ್ಲಿಸುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಇಂದು ಬೆಳಗ್ಗೆ 11.30ಕ್ಕೆ ಆಪ್‌ ಸಕಾಂಗ ಸಭೆ ನಡೆಯಲಿದ್ದು ನೂತನ ಮುಖ್ಯಮಂತ್ರಿ ಹೆಸರು ಘೋಷಿಸಲಾಗುತ್ತದೆ.

ಮಂಗಳವಾರ ಸಂಜೆ 4.30ಕ್ಕೆ ತಮ್ಮನ್ನು ಭೇಟಿಯಾಗಲು ಕೇಜ್ರಿವಾಲ್‌ ಅವರಿಗೆ ಉಪರಾಜ್ಯಪಾಲರು ಸಮಯಾವಕಾಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿ ಅಬಕಾರಿ ಹಗರಣ ಸಂಬಂಧ ತಿಹಾರ್‌ ಜೈಲಿನಿಂದ ಬಿಡುಗಡೆಯಾದ ಎರಡು ದಿನದಲ್ಲೇ ಕೇಜ್ರಿವಾಲ್‌ ಅವರು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದರು. 2 ದಿನದಲ್ಲಿ ಹುದ್ದೆ ತ್ಯಜಿಸುವುದಾಗಿ ತಿಳಿಸಿದ್ದರು. ಜನರು ಪ್ರಾಮಾಣಿಕತೆಯ ಪ್ರಮಾಣಪತ್ರ ನೀಡುವವರೆಗೂ ತಾವಾಗಲೀ ಅಥವಾ ಮನೀಶ್‌ ಸಿಸೋಡಿಯಾ ಅವರು ಹುದ್ದೆ ಅಲಂಕರಿಸುವುದಿಲ್ಲ ಎಂದು ಹೇಳಿದ್ದರು. ಅದರ ಭಾಗವಾಗಿ ಮಂಗಳವಾರ ಅವರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

ಮುಂದಿನ ಸಿಎಂ ಬಗ್ಗೆ ಸಭೆ:

ಈ ನಡುವೆ, ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆ ಆಪ್‌ನಲ್ಲಿ ಬಿರುಸುಗೊಂಡಿದೆ. ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರು ಕೇಜ್ರಿವಾಲ್‌ ಅವರ ಮನೆಗೆ ತೆರಳಿ ಸಮಾಲೋಚನೆ ನಡೆಸಿದ್ದಾರೆ. ಈ ನಡುವೆ ಆಮ್‌ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಕೂಡ ಸಂಜೆ ನಡೆದಿದ್ದು, ಸಂಭಾವ್ಯ ಸಿಎಂ ಬಗ್ಗೆ ಚರ್ಚೆ ನಡೆಸಿದೆ.

ಮಂಗಳವಾರ ಬೆಳಗ್ಗೆ 11. 30ಕ್ಕೆ ಪಕ್ಷದ ಶಾಸಕಾಂಗ ಸಮಿತಿ ಸಭೆ ನಿಗದಿ ಆಗಿದ್ದು, ಅಲ್ಲಿ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಆಪ್‌ ಹೇಳಿದೆ.ರೇಸ್‌ನಲ್ಲಿ ಸಚಿವರಾದ ಆತಿಷಿ, ಗೋಪಾಲ ರಾಯ್‌, ಸೌರಭ್‌ ಭಾರದ್ವಾಜ್‌, ಕೈಲಾಶ್‌ ಗಹಲೋಟ್‌, ಸಂಸದ ರಾಘವ ಚಡ್ಢಾ, ದಲಿತ ಶಾಸಕಿಯೂ ಆಗಿರುವ ಉಪಸ್ಪೀಕರ್‌ ರಾಖಿ ಬಿರ್ಲಾ ಹಾಗೂ ಕೇಜ್ರಿವಾಲ್‌ ಪತ್ನಿ ಸುನಿತಾ ಕೇಜ್ರಿವಾಲ್‌ ಹೆಸರುಗಳು ಇವೆ.