ಸಾರಾಂಶ
ಆಪ್ ಸರ್ಕಾರವೂ ಮರಳಿ ಚುಕ್ಕಾಣಿ ಹಿಡಿದರೆ ಬಾಲಕರಿಗೆ ಉಚಿತ ಬಸ್ ಪ್ರಯಾಣ, ಮೆಟ್ರೋ ದರದಲ್ಲಿ ಶೇ.50ರಷ್ಟು ರಿಯಾಯ್ತಿಯನ್ನು ನೀಡುವುದಾಗಿ ಘೋಷಿಸಿದೆ.
ನವದೆಹಲಿ: ದೆಹಲಿಯ ವಿಧಾನಸಭೆ ಚುನಾವಣೆ ಕಾವು ಜೋರಾಗುತ್ತಿದ್ದು, ಮೂರೂ ಪಕ್ಷಗಳು ಉಚಿತಗಳ ಮಳೆಗರೆಯುತ್ತಿವೆ. ಇದರ ಸಾಲಿನಲ್ಲಿಯೇ ಆಡಳಿತ ಆಪ್ ಸರ್ಕಾರವೂ ಇದ್ದು, ಮರಳಿ ಚುಕ್ಕಾಣಿ ಹಿಡಿದರೆ ಬಾಲಕರಿಗೆ ಉಚಿತ ಬಸ್ ಪ್ರಯಾಣ, ಮೆಟ್ರೋ ದರದಲ್ಲಿ ಶೇ.50ರಷ್ಟು ರಿಯಾಯ್ತಿಯನ್ನು ನೀಡುವುದಾಗಿ ಘೋಷಿಸಿದೆ. ದೆಹಲಿಯಲ್ಲಿ 2019ರಿಂದ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಮೆಟ್ರೋ ನಿರ್ವಹಣೆ ದೆಹಲಿ ಮತ್ತು ಕೇಂದ್ರ ಸರ್ಕಾರದ 50:50 ಆಧಾರದ ಮೇಲೆ ನಡೆಯುತ್ತಿದೆ. ಹೀಗಾಗಿ ಕೇಂದ್ರವೂ ಭರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ’ ಎಂದರು.ಬಾಡಿಗೆ ಮನೆಯವರಿಗೂ ಫ್ರೀ ವಿದ್ಯುತ್, ನೀರು:
ಈಗಾಗಲೇ ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಯನ್ನು ಬಾಡಿಗೆ ಮನೆಯಲ್ಲಿರುವವರಿಗೂ ಅನ್ವಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ನೀರಿನ ದರದಲ್ಲಿ ರಿಯಾಯ್ತಿ ಕೊಡುವುದಾಗಿ ಘೋಷಿಸಿದ್ದಾರೆ.ಈವರೆಗಿನ ಉಚಿತ:
ಉಚಿತ ಬಸ್ ಯಾನ, ವಿದ್ಯುತ್ ಫ್ರೀ ಜೊತೆಗೆ, ಆಪ್ ಹಲವು ಭರಪೂರ ಭರವಸೆಗಳನ್ನು ಘೋಷಿಸಿದೆ. ಮಹಿಳಾ ಸಮ್ಮಾನ್ ಯೋಜನೆ ಅಡಿಯಲ್ಲಿ ಮಾಸಿಕ 2100 ರು. ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಯೋಜನೆ, ದಲಿತ ವಿದ್ಯಾರ್ಥಿಗಳಿಗೆ ಉಚಿತ ವಿದೇಶ ವ್ಯಾಸಂಗ, ಹಿಂದೂ ಮತ್ತು ಸಿಖ್ಖ್ ಪುರೋಹಿತರಿಗೆ ಮಾಸಿಕ 18,000 ರು. ಗೌರವಧನ ನೀಡುವುದಾಗಿ ಆಪ್ ಘೋಷಿಸಿದೆ.