ಸಾರಾಂಶ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸುವ ಆಶಯ ಹೊತ್ತಿದ್ದ ಕಾಂಗ್ರೆಸ್‌ಗೆ ಬುಧವಾರ ಡಬಲ್ ಶಾಕ್ ತಗುಲಿದೆ.
ಕೋಲ್ಕತಾ/ಚಂಡೀಗಢ/ನವದೆಹಲಿ:
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸುವ ಆಶಯ ಹೊತ್ತಿದ್ದ ಕಾಂಗ್ರೆಸ್‌ಗೆ ಬುಧವಾರ ಡಬಲ್ ಶಾಕ್ ತಗುಲಿದೆ.
ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜತೆ ಸಂಘರ್ಷಕ್ಕೆ ಇಳಿದಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಆಪ್‌ನ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಲೋಕಸಭೆ ಚುನಾವಣೆಯಲ್ಲಿ ತಮ್ಮ ರಾಜ್ಯಗಳಲ್ಲಿ ತಮ್ಮ ಪಕ್ಷಗಳು ಏಕಾಂಗಿಯಾಗಿ ಸ್ಪರ್ಧಿಸಲಿವೆ ಎಂದು ಘೋಷಿಸಿದ್ದಾರೆ.
ಇದರಿಂದಾಗಿ ಎನ್‌ಡಿಎ ಮೈತ್ರಿಕೂಟಕ್ಕೆ ವಿರುದ್ಧವಾಗಿ ರಚನೆಗೊಂಡಿದ್ದ ಇಂಡಿಯಾ ಮೈತ್ರಿಕೂಟದ ಭವಿಷ್ಯವೇ ಡೋಲಾಯಮಾನವಾದಂತಾಗಿದೆ. ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಜೈರಾಂ ರಮೇಶ್, ‘ಮಮತಾ ಇಲ್ಲದ ಇಂಡಿಯಾ ಕೂಟವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ಹೀಗಾಗಿ ಮಮತಾ ಹಾಗೂ ಇತರರ ಮೈತ್ರಿಯೊಂದಿಗೇ ಬಂಗಾಳದಲ್ಲಿ ಕಾಂಗ್ರೆಸ್ ಸೆಣಸಲಿದೆ’ ಎಂದಿದ್ದಾರೆ. ಇದರ ನಡುವೆ ‘ಸಣ್ಣಪುಟ್ಟ ಭಿನ್ನಮತ ಸಹಜ. ಕಾಂಗ್ರೆಸ್ ಮೂಲಗಳು ಸಹಿತ ಮಮತಾ ಜತೆ ಚರ್ಚೆಗೆ ಸಿದ್ಧ’ ಎಂದಿವೆ.
ಇನ್ನೊಂದೆಡೆ ಇಂಡಿಯಾ ಕೂಟ ತೊರೆಯುವ ಮೂಲಕ ಕೂಟಕ್ಕೆ ಮರಣಶಾಸನ ಬರೆದಿದ್ದಾರೆ ಎಂದು ಬಿಜೆಪಿಯ ನಾಯಕ ಅಮಿತ್ ಮಾಳವೀಯ ವ್ಯಂಗ್ಯವಾಡಿದ್ದಾರೆ.
ಏಕಾಂಗಿ ಕಣಕ್ಕೆ: ಕೋಲ್ಕತಾದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಪ.ಬಂಗಾಳದಲ್ಲಿ ಇನ್ನು ಮುಂದೆ ನಮ್ಮ ಪಕ್ಷವು ಕಾಂಗ್ರೆಸ್ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ.
ರಾಜ್ಯದ ಎಲ್ಲ 42 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಸೀಟು ಹಂಚಿಕೆ ಕುರಿತಂತೆ ಕಾಂಗ್ರೆಸ್ ನಾಯಕರು ನನ್ನೊಂದಿಗೆ ಮಾತನಾಡಿಯೇ ಇಲ್ಲ’ ಎಂದು ಕಿಡಿಕಾರಿದರು. ಅಲ್ಲದೆ, ‘ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಂಗಾಳಕ್ಕೆ ಆಗಮಿಸಿದ್ದರೂ ನಮಗೆ ಸೌಜನ್ಯಕ್ಕಾದರೂ ಒಂದು ಮಾತು ತಿಳಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ರಾಷ್ಟ್ರಮಟ್ಟದಲ್ಲಿ ಟಿಎಂಸಿ, ಇಂಡಿಯಾ ಕೂಟದ ಭಾಗವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಚಂಡೀಗಢದಲ್ಲಿ ಮಾತನಾಡಿ, ‘ಪಂಜಾಬ್‌ನಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಆಪ್‌ನಲ್ಲಿ ವಿರೋಧವಿದೆ.
ಹೀಗಾಗಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲ್ಲ. ಏಕಾಂಗಿಯಾಗಿ ರಾಜ್ಯದ ಎಲ್ಲ 13 ಕ್ಷೇತ್ರಗಳಲ್ಲಿ ಆಪ್ ಸ್ಪರ್ಧಿಸಲಿದೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಆಗಿದೆ’ ಎಂದರು.
ಮಮತಾ ಮುನಿಸಿಗೆ ಕಾರಣವೇನು?
ಬಂಗಾಳದಲ್ಲಿ ಕಾಂಗ್ರೆಸ್ ಪ್ರಬಲ ಪಕ್ಷವಲ್ಲ. ಟಿಎಂಸಿ ಹಾಗೂ ಸಿಪಿಎಂ ಪ್ರಬಲ ಪಕ್ಷಗಳು. ಹೀಗಾಗಿ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಈ ಎರಡೂ ಪಕ್ಷಗಳು ಒಲವು ತೋರಿದ್ದರೂ ಕಾಂಗ್ರೆಸ್ ತನಗೇ ಹೆಚ್ಚು ಸೀಟು ಬೇಕೆಂದು ‘ಅಸಮರ್ಥನೀಯ’ ರೀತಿಯಲ್ಲಿ ಪಟ್ಟು ಹಿಡಿಯಿತು ಎನ್ನಲಾಗಿದೆ.
ಅಲ್ಲದೆ, ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಮಮತಾ ಬ್ಯಾನರ್ಜಿಯನ್ನು ಅವಕಾಶವಾದಿ, ಬಿಜೆಪಿ ಏಜೆಂಟ್ ಎಂದಿದ್ದು ದೀದಿಯನ್ನು ಸಿಟ್ಟಿಗೆಬ್ಬಿಸಿತು ಎಂದು ಹೇಳಲಾಗಿದೆ. ಇದೇ ಮೈತ್ರಿ ಅಂತ್ಯಕ್ಕೆ ಕಾರಣವೆನ್ನಲಾಗಿದೆ.
ಬಿಜೆಪಿ ವ್ಯಂಗ್ಯ: ಮಮತಾ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, ‘ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ತಿ ಎಂದು ಯಾರೂ ಬಿಂಬಿಸದ ಕಾರಣ ಹತಾಶೆಗೊಂಡು ಹೊರನಡೆಯುವ ಮೂಲಕ ಇಂಡಿಯಾ ಕೂಟಕ್ಕೆ ಮರಣಶಾಸನ ಬರೆದಿದ್ದಾರೆ. ಆದರೆ ಏಕಾಂಗಿಯಾಗಿ ಸ್ಪರ್ಧೆ ಮಾಡಿದರೂ ಅವರ ತಂತ್ರ ಫಲಿಸದು’ ಎಂದು ತಿಳಿಸಿದ್ದಾರೆ.
ಇನ್ನು ಇಂಡಿಯಾ ಕೂಟ ಎಂಬುದು ಕೇವಲ ಪೇಪರ್ ಮೈತ್ರಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ನಳಿನ್ ಕೊಹ್ಲಿ ಹೇಳಿದ್ದರೆ, ಇಂಡಿಯಾ ಕೂಟವು ಹಾವು ಮುಂಗುಸಿಯ ಮಧ್ಯೆ ನಡೆಯುವ ಅಸ್ವಾಭಾವಿಕ ಮೈತ್ರಿ ಎಂದು ಬಿಜೆಪಿ ಯುವ ಮೊರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಟೀಕೆ ಮಾಡಿದ್ದಾರೆ.
ಬಂಗಾಳದ ಎಲ್ಲಾ 42 ಕ್ಷೇತ್ರಕ್ಕೆ ಏಕಾಂಗಿ ಸ್ಪರ್ಧೆ
ಪ.ಬಂಗಾಳದಲ್ಲಿ ನಮ್ಮ ಪಕ್ಷವು ಕಾಂಗ್ರೆಸ್ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ. ರಾಜ್ಯದ ಎಲ್ಲ 42 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಆದರೆ ರಾಷ್ಟ್ರಮಟ್ಟದಲ್ಲಿ ಇಂಡಿಯಾ ಕೂಟದ ಭಾಗವಾಗಿ ಮುಂದುವರೆಯುತ್ತೇವೆ.
ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ,.ಪಂಜಾಬಿನ ಎಲ್ಲಾ 13 ಕ್ಷೇತ್ರಕ್ಕೆ ಏಕಾಂಗಿ ಸ್ಪರ್ಧೆ
ಪಂಜಾಬ್‌ನಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಆಪ್‌ನಲ್ಲಿ ವಿರೋಧವಿದೆ. ಹೀಗಾಗಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ರಾಜ್ಯದ ಎಲ್ಲ 13 ಕ್ಷೇತ್ರಗಳಲ್ಲಿ ಆಪ್ ಸ್ಪರ್ಧಿಸಲಿದೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಆಗಿದೆ.
ಭಗವಂತ ಮಾನ್ ಪಂಜಾಬ್ ಮುಖ್ಯಮಂತ್ರಿ. ಪ್ರಧಾನಿ ಅಭ್ಯರ್ಥಿ ಆಗದೆ ದೀದಿ ಹತಾಶೆ
ಮಮತಾ ಹತಾಶೆ ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಯಾರೂ ಬಿಂಬಿಸದ ಕಾರಣ ಹತಾಶೆಗೊಂಡು ಇಂಡಿಯಾ ಕೂಟಕ್ಕೆ ಮರಣಶಾಸನ ಬರೆದಿದ್ದಾರೆ. ಆದರೆ ಏಕಾಂಗಿಯಾಗಿ ಸ್ಪರ್ಧೆ ಮಾಡಿದರೂ ಅವರ ತಂತ್ರ ಫಲಿಸದು.
ಅಮಿತ್ ಮಾಳವೀಯ ಬಿಜೆಪಿ ವಕ್ತಾರ
ಮೈತ್ರಿ ಜತೆಗೇ ಸ್ಪರ್ಧೆ
ಮಮತಾ ಇಲ್ಲದ ಇಂಡಿಯಾ ಕೂಟವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅವರ ಹಾಗೂ ಇತರರ ಮೈತ್ರಿಯೊಂದಿಗೇ ಬಂಗಾಳದಲ್ಲಿ ಕಾಂಗ್ರೆಸ್ ಸೆಣಸಲಿದೆ. ಸಣ್ಣಪುಟ್ಟ ಭಿನ್ನಮತ ಸಹಜ. ಮಮತಾ ಜತೆ ಚರ್ಚೆಗೆ ಸಿದ್ಧವಿದ್ದೇವೆ.
ಜೈರಾಂ ರಮೇಶ್ ಕಾಂಗ್ರೆಸ್ ನಾಯಕ