ಸಾರಾಂಶ
ರೈಲುಗಳಲ್ಲಿ ಸ್ಫೋಟಿಸಿದ್ದ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಬಂಟ ಅಬ್ದುಲ್ ಕರೀಂ ತುಂಡಾ ದೋಷಮುಕ್ತರಾಗಿದ್ದಾರೆ.
ಜೈಪುರ: ಬಾಬ್ರಿ ಮಸೀದಿ ಪ್ರಕರಣ ಧ್ವಂಸದ ಮೊದಲನೇ ವಾರ್ಷಿಕೋತ್ಸವದ ನೆನಪಿಗಾಗಿ 1993 ಡಿ.5-6ರ ನಡುವೆ ದೇಶದ ಹಲವು ಭಾಗಗಳಲ್ಲಿ ಐದು ರೈಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಅಬ್ದುಲ್ ಕರೀಂ ತುಂಡಾನನ್ನು ನಗರದ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಈ ಕುರಿತು ತೀರ್ಪು ಪ್ರಕಟಿಸಿದ ನಗರದ ಉಗ್ರ ನಿಗ್ರಹ ಕಾಯ್ದೆ (ಟಾಡಾ) ಪ್ರಕರಣಗಳ ವಿಶೇಷ ನ್ಯಾಯಾಲಯ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಆರೋಪಿ, 81 ವರ್ಷದ ತುಂಡಾನನ್ನು ಖುಲಾಸೆಗೊಳಿಸಿತು.
ಇದೇ ವೇಳೆ ಪ್ರಕರಣದ ಇತರ ಆರೋಪಿಗಳಾಗಿದ್ದ ಇರ್ಫಾನ್ ಮತ್ತು ಹಮೀದುದ್ದೀನ್‌ಗೆ ಜೀವಾವಧಿ ಶಿಕ್ಷೆಯನ್ನು ನೀಡಿದೆ.
ಪಾತಕಿ ದಾವೂದ್ ಇಬ್ರಾಹಿಂ ಬಂಟನಾಗಿರುವ ಅಬ್ದುಲ್ ಕರೀಂ ಡಿ.5 ಮತ್ತು 6ರ ನಡುವೆ ಲಖನೌ, ಕಾನ್ಪುರ, ಹೈದರಾಬಾದ್, ಸೂರತ್ ಮತ್ತು ಮುಂಬೈನಲ್ಲಿ ರೈಲುಗಳಲ್ಲಿ ಸ್ಫೋಟ ಮಾಡಿದ್ದಾಗಿ ಟಾಡಾ 2021ರಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ಆದರೆ ಈಗಾಗಲೇ ಈತ ಅನ್ಯ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದಾನೆ.