ದುರಂತದ ತನಿಖೆ ಇನ್ನೂ ಮುಗಿದಿಲ್ಲ: ಎಎಐಬಿ
ನವದೆಹಲಿ: ಕಳೆದ ವರ್ಷ ಜ.12ರಂದು 260 ಜನರನ್ನು ಬಲಿಪಡೆದ ಏರ್ ಇಂಡಿಯಾ 171 ಅಪಘಾತಕ್ಕೆ, ಪೈಲಟ್‌ಗಳು ಉದ್ದೇಶಪೂರ್ವಕವಾಗಿ ಅದರ ಇಂಧನ ಸ್ವಿಚ್ ಆಫ್ ಮಾಡಿದ್ದೇ ಕಾರಣ ಎಂದು ಇಟಲಿಯ ಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ ಇದನ್ನು ವಿಮಾನ ಅಪಘಾತ ತನಿಖಾ ಬ್ಯೂರೋ(ಎಎಐಬಿ) ಅಲ್ಲಗಳೆದಿದ್ದು, ತನಿಖೆ ಇನ್ನೂ ನಡೆಯುತ್ತಿದೆ ಎಂದಿದೆ.ಈ ಹಿಂದೆ ನಡೆದ ಪರಿಶೀಲನೆಯಿಂದ, ಇಂಧನ ಸ್ವಿಚ್‌ಗಳು ದೋಷಮುಕ್ತವಾಗಿದ್ದವು ಎಂದು ತಿಳಿದುಬಂದಿತ್ತು. ಆದಕಾರಣ, ಪೈಲಟ್‌ಗಳೇ ಉದ್ದೇಶಪೂರ್ವಕವಾಗಿ ಅವನ್ನು ಆಫ್ ಮಾಡಿ ಅಪಘಾತಕ್ಕೆ ಕಾರಣರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜತೆಗೆ, ಅಪಘಾತದ ವೇಳೆ ಪೈಲಟ್‌ಗಳು ಇಂಧನ ಸ್ವಿಚ್ ಆಫ್ ಆಗಿರುವ ಬಗ್ಗೆ ಮಾತನಾಡುತ್ತಿರುವುದು ರೆಕಾರ್ಡ್ ಆಗಿತ್ತು. ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು, ಪಾಶ್ಚಿಮಾತ್ಯ ವಿಮಾನಯಾನ ಸಂಸ್ಥೆಗಳ ಮೂಲಗಳನ್ನು ಉಲ್ಲೇಖಿಸಿ ಪೈಲಟ್‌ಗಳ ಮೇಲೆ ಅವಘಡದ ಆರೋಪ ಹೊರಿಸಲಾಗಿತ್ತು. ಇದಕ್ಕೆ ಎಎಐಬಿ ಸ್ಪಷ್ಟನೆ ನೀಡಿದ್ದು, ‘ದುರಂತದ ಕುರಿತ ತನಿಖೆ ಇನ್ನೂ ನಡೆಯುತ್ತಿದೆ. ಅದು ಪೂರ್ಣಗೊಂಡಮೇಲೆ ಕಾರಣವನ್ನು ತಿಳಿಸಲಾಗುವುದು ಹಾಗೂ ಸುರಕ್ಷತಾ ಶಿಪಾರಸುಗಳನ್ನು ಮಾಡಲಾಗುವುದು’ ಎಂದಿದೆ. ಜತೆಗೆ ಪರಿಶೀಲಿಸದೆ ಯಾವುದೇ ವರದಿ ಪ್ರಕಟಿಸದಂತೆ ಮನವಿ ಮಾಡಿದೆ.