ಸಾರಾಂಶ
ಕೋಲ್ಕತಾ: ಕಲ್ಕತಾ ಹೈಕೋರ್ಟ್‌ನ ನ್ಯಾಯಮೂರ್ತಿ ಅಭಿಜಿತ್ ಗಂಗೂಲಿ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಭಾರತೀಯ ಜನತಾ ಪಕ್ಷ ಸೇರ್ಪಡೆಯ ಮಾಹಿತಿ ನೀಡಿದ್ದಾರೆ.
ಅಲ್ಲದೆ ಭ್ರಷ್ಟಾಚಾರಕ್ಕೆ ಪರ್ಯಾಯ ಪದ ಎನ್ನುವಂತಿರುವ ತೃಣಮೂಲ ಕಾಂಗ್ರೆಸ್ ವಿರುದ್ಧ ಹೋರಾಟದ ಘೋಷಣೆ ಮಾಡಿದ್ದಾರೆ.
ಈ ಮೊದಲೇ ರಾಜೀನಾಮೆ ನೀಡುವ ಕುರಿತು ಘೋಷಣೆ ಮಾಡಿದ್ದ ನ್ಯಾ.ಗಂಗೂಲಿ, ಮಂಗಳವಾರ ಬೆಳಗ್ಗೆ ಹೈಕೋರ್ಟ್‌ಗೆ ಆಗಮಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ಅಲ್ಲದೆ ಈ ಪತ್ರದ ಪ್ರತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೂ ರವಾನಿಸಿರುವುದಾಗಿ ತಿಳಿಸಿದರು.
ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನ್ಯಾ.ಗಂಗೂಲಿ, ‘ನಾನು ಮಾ.7ರಂದು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ.
ಬಂಗಾಳದಲ್ಲಿ ಟಿಎಂಸಿಯ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಕಾರಣ ಮತ್ತು ರಾಷ್ಟ್ರೀಯ ಪಕ್ಷವಾಗಿರುವ ಕಾರಣ ಬಿಜೆಪಿ ಸೇರುತ್ತಿದ್ಧೇನೆ ಎಂದು ಹೇಳಿದರು.
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಕುರಿತ ಪ್ರಶ್ನೆಗೆ, ಬಿಜೆಪಿ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಈ ನಡುವೆ ರಾಜ್ಯದಲ್ಲಿ ಟಿಎಂಸಿ ಸರ್ಕಾರದ ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟದ ಘೋಷಣೆಯನ್ನು ನ್ಯಾ.ಗಂಗೂಲಿ ಮಾಡಿದರು.
ಇತ್ತೀಚೆಗೆ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಟಿಎಂಸಿ ಸರ್ಕಾರದ ವಿರುದ್ಧ ನ್ಯಾ.ಗಂಗೂಲಿ ತೀರ್ಪು ನೀಡಿದ್ದರು.
ಈ ವೇಳೆ ಜಡ್ಜ್ ವಿರುದ್ಧ ಕಿಡಿಕಾರಿದ್ದ ಟಿಎಂಸಿ ನಾಯಕರು, ನ್ಯಾಯಪೀಠದಲ್ಲಿ ಕುಳಿತು ಹೋರಾಡುವ ಬದಲು ರಾಜಕೀಯಕ್ಕೆ ಬನ್ನಿ ಎಂದು ಸವಾಲು ಹಾಕಿತ್ತು.