ಸಾರಾಂಶ
ನವದೆಹಲಿ: ಭಾರತೀಯ ರೈಲ್ವೆ ಇತ್ತೀಚೆಗೆ ಘೋಷಿಸಿದ್ದ ಎಸಿ ಹಾಗೂ ಸ್ಲೀಪರ್ ಕೋಚ್ ಟಿಕೆಟ್ ದರ ಏರಿಕೆ ಜು.1ರಿಂದ ಜಾರಿಗೆ ಬರಲಿದೆ.ಹವಾನಿಯಂತ್ರಿತ (ಎಸಿ) ಟಿಕೆಟ್ ದರ ಪ್ರತಿ ಕಿ.ಮೀ.ಗೆ 2 ಪೈಸೆ ಹೆಚ್ಚಳವಾಗಲಿದೆ.
ಮೇಲ್/ಎಕ್ಸ್‌ಪ್ರೆಸ್ ರೈಲು ಟಿಕೆಟ್ ದರ ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಳವಾಗಲಿವೆ. ಇದು ಎಲ್ಲ ದ್ವಿತೀಯ ದರ್ಜೆ, ಸ್ಲೀಪರ್ ಕ್ಲಾಸ್, ಫಸ್ಟ್ ಕ್ಲಾಸ್‌ಗೆ ಅನ್ವಯವಾಗಲಿದೆ.
ಎಸಿ ಅಲ್ಲದ ಎರಡನೇ ದರ್ಜೆಯ ಸಾಮಾನ್ಯ ಟಿಕೆಟ್ ದರ (500 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ) ಪ್ರತಿ ಕಿ.ಮೀ.ಗೆ ಅರ್ಧ ಪೈಸೆ ಹೆಚ್ಚಳವಾಗಲಿದೆ. ಮೊದಲ 500 ಕಿ.ಮೀ.ಗೆ ಅನ್ವಯವಿಲ್ಲ.
ಆದರರೆ ಮಾಸಿಕ ಸೀಸನ್ ಟಿಕೆಟ್‌ಗಳು, ಉಪನಗರ ರೈಲು ದರಗಳು ಏರಿಕೆ ಆಗುವುದಿಲ್ಲ. ಅಲ್ಲದೆ, ಜುಲೈ 1ರ ಮೊದಲು ಬುಕ್ ಮಾಡಿದ ಟಿಕೆಟ್‌ಗಳು ಪರಿಷ್ಕೃತ ದರಕ್ಕೆ ಒಳಪಡುವುದಿಲ್ಲ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ಏರಿಕೆ ಪ್ರಮಾಣ ಎಷ್ಟು?
501 ಕಿ.ಮೀ ನಿಂದ 1500 ಕಿ.ಮೀ ವರೆಗಿನ ಟಿಕೆಟ್‌ಗಳಿಗೆ 5 ರು. ಹೆಚ್ಚಳ,
1501 ಕಿ.ಮೀ ನಿಂದ 2500 ಕಿ.ಮೀ ವರೆಗಿನ ಟಿಕೆಟ್‌ಗಳಿಗೆ 10 ರು. ಹೆಚ್ಚಳ
2501 ಕಿ.ಮೀ ನಿಂದ 3000 ಕಿ.ಮೀ ವರೆಗಿನ ಟಿಕೆಟ್‌ಗಳಿಗೆ 15 ರು. ಹೆಚ್ಚಳ
ಇನ್ನು ರೈಲು ಹೊರಡುವ 8 ತಾಸು ಮೊದಲೇ ರಿಸರ್ವೇಷನ್ ಚಾರ್ಟ್ ಸಿದ್ಧ
ನವದೆಹಲಿ ದೂರಪ್ರಯಾಣದ ರೈಲುಗಳ ಕಾಯ್ದಿರಿಸಿದ ಪಟ್ಟಿಯನ್ನು 4 ತಾಸುಗಳ ಬದಲು ಇನ್ನುಮುಂದೆ 8 ತಾಸು ಮುಂಚಿತವಾಗಿ ತಯಾರಿಸಲು ನಿರ್ಧರಿಸಿದೆ.
ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆಗೆ ಹೊರಡಲಿರುವ ರೈಲುಗಳ ರಿಸರ್ವೇಷನ್ ಪಟ್ಟಿಯನ್ನು ಹಿಂದಿನ ರಾತ್ರಿ 9 ಗಂಟೆಗೇ ಸಿದ್ಧಪಡಿಸಲಾಗುವುದು. ಈ ಬದಲಾವಣೆಯನ್ನು ಹಂತಹಂತವಾಗಿ ಜಾರಿಗೆ ತರಲಾಗುವುದು ಎಂದು ರೈಲ್ವೆ ಹೇಳಿದೆ.
ಈವರೆಗೂ ಕೇವಲ 4 ತಾಸು ಮೊದಲು ಲಿಸ್ಟ್ ಸಿದ್ಧವಾಗುತ್ತಿದ್ದರ ಕಾರಣ ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಕೊನೆಯವರೆಗೆ ಅನಿಶ್ಚಿತತೆ ಕಾಡುತ್ತಿತ್ತು. ಇದು ಇನ್ನು ನಿವಾರಣೆ ಆಗಲಿದೆ. ಸೀಟು ಸಿಗದಿದ್ದರೆ 8 ತಾಸು ಮೊದಲೇ ತಿಳಿಯುವ ಕಾರಣ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲೂ ಸಾಧ್ಯವಾಗುತ್ತದೆ.ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕ್:
ಅತ್ತ ಪ್ಯಾಸೆಂಜರ್ ರಿಸರ್ವೇಷನ್ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದ್ದು, ನಿಮಿಷಕ್ಕೆ ಇನ್ನು 1.5 ಲಕ್ಷ ಟಿಕೆಟ್ ಬುಕಿಂಗ್ ಸಾಧ್ಯಗಲಿದೆ. ಪ್ರಸ್ತುತ ನಿಮಿಷಕ್ಕೆ 32,000 ಟಿಕೆಟ್‌ಗಳು ಬುಕ್ ಆಗುತ್ತಿವೆ. ಇದಿನ್ನು 5 ಪಟ್ಟು ಹೆಚ್ಚಲಿದೆ.
ಇಂದಿನಿಂದ ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಆಧಾರ್ ಕಡ್ಡಾಯ
ನವದೆಹಲಿ: ತತ್ಕಾಲ್ ಟಿಕೆಟ್‌ಗಳ ದುರ್ಬಳಕೆ ತಡೆವ ಸಲುವಾಗಿ ಅವುಗಳ ಬುಕಿಂಗ್‌ನಲ್ಲಿ ಜು.1ರಿಂದ ಹೊಸ ಬದಲಾವಣೆ ಮಾಡಲಾಗಿದೆ. ತತ್ಕಾಲ್ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರ ಐಆರ್‌ಸಿಟಿಸಿ ಖಾತೆಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಲಾಗಿದೆ.
ಇಲ್ಲವಾದಲ್ಲಿ, ರೈಲು ನಿಲ್ದಾಣಗಳಿಗೆ ಹೋಗಿ ಬುಕಿಂಗ್ ಮಾಡಿಸಬೇಕಾಗುತ್ತದೆ ಎಂದು ಸೂಚಿಸಲಾಗಿದೆ.ಅಂತೆಯೇ, ಜು.15ರಿಂದ ಆನ್‌ಲೈನ್ ಅಥವಾ ಆಫ್‌ಲೈನ್ ತತ್ಕಾಲ್ ಬುಕಿಂಗ್‌ಗಳಿಗೆ ಒಟಿಪಿ ಆಧರಿತ ಆಧಾರ್ ದೃಢೀಕರಣ ವ್ಯವಸ್ಥೆ ಜಾರಿ ಮಾಡಲಾಗುವುದು. ಬುಕಿಂಗ್ ವೇಳೆ, ಆಧಾರ್ ಜತೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳಿಸಲಾಗುವುದು. ಈ ಮೂಲಕ, ಅಕ್ರಮ ಬುಕಿಂಗ್‌ಗಳನ್ನು ತಡೆಯಲಾಗುವುದು.ಐಆರ್‌ಸಿಟಿಸಿಗೆ ಆಧಾರ್ ಲಿಂಕ್ ಹೇಗೆ?:ಐಆರ್‌ಸಿಟಿಸಿ ಆ್ಯಪ್ ಅಥವಾ ವೆಬ್‌ಸೈಟ್‌ಗೆ ಲಾಗ್‌ಇನ್ ಆಗಿ, ಪ್ರೊಫೈಲ್‌ನಲ್ಲಿ ‘ಲಿಂಕ್ ಆಧಾರ್’ ಆಯ್ಕೆ ಮಾಡಿ. ಅಲ್ಲಿ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ. ಬಳಿಕ ಆಧಾರ್ ಜತೆ ಲಿಂಕ್ ಆಗಿರುವ ಸಂಖ್ಯೆಗೆ ಕಳಿಸಲಾಗುವ ಒಟಿಪಿಯನ್ನು ದಾಖಲಿಸಿ. ದೃಢೀಕರಣದ ನಂತರ ಆಧಾರ್ ಲಿಂಕಿಂಗ್ ಸಾಧ್ಯವಾಗಲಿದೆ.
ಇಂದಿನಿಂದ ಹೊಸ ಪಾನ್‌ಗೆ ಆಧಾರ್ ಕಡ್ಡಾಯ
ನವದೆಹಲಿ: ಜು.1ರಿಂದ ಹೊಸ ಪಾನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಲಾಗಿದೆ. ಈ ಮೊದಲು ಇದಕ್ಕೆ ಯಾವುದೇ ಮಾನ್ಯ ಗುರುತಿನ ಚೀಟಿ ಹಾಗೂ ಜನನ ಪ್ರಮಾಣಪತ್ರ ಸಾಕಿತ್ತು.ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಡಿಜಿಟಲ್ ಗುರುತಿನ ಪರಿಶೀಲನೆಯನ್ನು ಬಲಪಡಿಸಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ಬದಲಾವಣೆಯನ್ನು ಮಾಡಿದೆ.