ತಮಿಳುನಾಡಿನ ಪ್ರಸಿದ್ಧ ಮದುರೈ ಮೀನಾಕ್ಷಿ ದರ್ಶನಕ್ಕೆ ನನಗೆ ತಡೆ : ನಟಿ ನಮಿತಾ ಆರೋಪ

| Published : Aug 27 2024, 01:30 AM IST / Updated: Aug 27 2024, 05:08 AM IST

Namitha

ಸಾರಾಂಶ

ತಮಿಳುನಾಡಿನ ಪ್ರಸಿದ್ಧ ಮದುರೈ ಮೀನಾಕ್ಷಿ ದೇಗುಲಕ್ಕೆ ತೆರಳಿದ ತಮಗೆ, ಹಿಂದೂ ಎಂದು ಸಾಬೀತುಪಡಿಸುವ ಸಾಕ್ಷ್ಯವನ್ನು ದೇಗುಲದ ಸಿಬ್ಬಂದಿ ಕೇಳಿದರು ಹಾಗೂ ಈ ವೇಳೆ ಬಹಳ ಅಸಭ್ಯವಾಗಿ ನಡೆದುಕೊಂಡರು ಎಂದು ಖ್ಯಾತ ನಟಿ ನಮಿತಾ ಆರೋಪಿಸಿದ್ದಾರೆ.

ಮದುರೈ: ತಮಿಳುನಾಡಿನ ಪ್ರಸಿದ್ಧ ಮದುರೈ ಮೀನಾಕ್ಷಿ ದೇಗುಲಕ್ಕೆ ತೆರಳಿದ ತಮಗೆ, ಹಿಂದೂ ಎಂದು ಸಾಬೀತುಪಡಿಸುವ ಸಾಕ್ಷ್ಯವನ್ನು ದೇಗುಲದ ಸಿಬ್ಬಂದಿ ಕೇಳಿದರು ಹಾಗೂ ಈ ವೇಳೆ ಬಹಳ ಅಸಭ್ಯವಾಗಿ ನಡೆದುಕೊಂಡರು ಎಂದು ಖ್ಯಾತ ನಟಿ ನಮಿತಾ ಆರೋಪಿಸಿದ್ದಾರೆ.

‘ನಾನು ಹಿಂದೂ ಧರ್ಮೀಯಳು. ತಿರುಮಲದಲ್ಲಿ ಹಿಂದೂ ವ್ಯಕ್ತಿಯನ್ನು ಮದುವೆ ಆಗಿದ್ದೆ. ಶ್ರೀಕೃಷ್ಣ ಎಂಬ ಮಗನಿದ್ದಾನೆ. ಆದರೆ ನನಗೆ ಮೀನಾಕ್ಷಿ ದೇಗುಲಕ್ಕೆ ಬಂದಾಗ ಹಿಂದೂ ಎಂದು ಸಾಬೀತು ಮಾಡುವ ಸರ್ಟಿಫಿಕೇಟ್‌ ಕೊಡಿ ಎಂದು ಸಿಬ್ಬಂದಿ ಕೇಳಿದರು ಹಾಗೂ ಅಸಭ್ಯವಾಗಿ ವರ್ತಿಸಿ ದರ್ಶನದಿಂದ ತಡೆದರು. ನನ್ನ ಜೀವನದಲ್ಲಿ ಎಂದೂ ಇಂಥ ಸನ್ನಿವೇಶ ಎದುರಿಸಿರಲಿಲ್ಲ’ ಎಂದಿದ್ದಾರೆ.

‘ಆದರೆ ಕೊನೆಗೆ ಸ್ಪಷ್ಟನೆ ನೀಡಿದ ನಂತರ ಮತ್ತು ಹಣೆಗೆ ಕುಂಕುಮ ಹಚ್ಚಿಕೊಂಡ ನಂತರ ದರ್ಶನ ಮಾಡಲು ಬಿಟ್ಟರು’ ಎಂದು ನಟಿ ಹೇಳಿದ್ದಾರೆ.

ಆದರೆ ನಮಿತಾ ಆರೋಪ ತಳ್ಳಿಹಾಕಿರುವ ದೇಗುಲ ಮಂಡಳಿ, ‘ನಮಿತಾ ಮಾಸ್ಕ್ ಧರಿಸಿದ್ದರು. ಹೀಗಾಗಿ ಅವರನ್ನು ತಡೆದು ನೀವು ಹಿಂದುವೇ ಎಂದು ಕೇಳಲಾಯಿತು. ಸ್ಪಷ್ಟನೆ ನೀಡಿದ ನಂತರ ಹಣೆಗೆ ಕುಂಕುಮ ಹಚ್ಚಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು’ ಎಂದಿದೆ.