ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟಕ್ಕೆ ಮರಳುವ ಮಾತು ಆಡಿರುವುದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ.ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ವಾಗ್ಯುದ್ಧಕ್ಕೆ ನಾಂದಿ ಹಾಡಿದೆ.

ಕೋಲ್ಕತಾ/ಮುಂಬೈ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟಕ್ಕೆ ಮರಳುವ ಮಾತು ಆಡಿರುವುದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ.ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ವಾಗ್ಯುದ್ಧಕ್ಕೆ ನಾಂದಿ ಹಾಡಿದೆ. ಇದರೊಂದಿಗೆ ಹೈಕಮಾಂಡ್‌ಗೇ ಚೌಧರಿ ಸಡ್ಡು ಹೊಡೆದಂತಾಗಿದೆ.

ಇತ್ತೀಚೆಗೆ ಮಾತನಾಡಿದ್ದ ಅಧೀರ್‌, ಮಮತಾ ಮತ್ತೆ ಮೈತ್ರಿಕೂಟಕ್ಕೆ ಮರಳುವುದನ್ನು ವಿರೋಧಿಸಿದ್ದರು. ಇದಕ್ಕೆ ಶನಿವಾರ ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಖರ್ಗೆ, ‘ಮೈತ್ರಿ ಬಗ್ಗೆ ನಿರ್ಧರಿಸುವುದು ಅಧೀರ್ ಅಲ್ಲ. ಪಕ್ಷದ ಹೈಕಮಾಂಡ್‌. ಪಕ್ಷದ ನಿಲುವು ಒಪ್ಪದೇ ಇದ್ದವರು ಹುದ್ದೆಯಿಂದ ಕೆಳಗಿಳಿಯಬಹುದು’ ಎಂದಿದ್ದಾರೆ.

ಇದರ ಬೆನ್ನಲ್ಲೇ ಅಧೀರ್‌ ಕೂಡ ಗರಂ ಆಗಿದ್ದು, ‘ನಾನು ಕಾಂಗ್ರೆಸ್‌ನ ನಿರ್ಣಾಯಕ ಸಮಿತಿಯಾದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ (ಸಿಡಬ್ಲುಸಿ) ಸದಸ್ಯ. ನಾನೂ ಕೂಡ ಹೈಕಮಾಂಡ್‌ನ ಭಾಗ’ ಎಂದು ತಿರುಗೇಟು ನೀಡಿದ್ದಾರೆ.