ಪಾಕಿಸ್ತಾನದಲ್ಲಿ ಜನಿಸಿ ಭಾರತದ ಮನಗೆದ್ದ ನಾಯಕ ಎಲ್‌.ಕೆ. ಅಡ್ವಾಣಿ

| Published : Feb 04 2024, 01:31 AM IST / Updated: Feb 04 2024, 09:08 AM IST

LK Advani
ಪಾಕಿಸ್ತಾನದಲ್ಲಿ ಜನಿಸಿ ಭಾರತದ ಮನಗೆದ್ದ ನಾಯಕ ಎಲ್‌.ಕೆ. ಅಡ್ವಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿ ಬಾಲ್ಯದಲ್ಲೇ ಭಾರತಕ್ಕೆ ವಲಸೆ ಬಂದ ಅಡ್ವಾಣಿ ಭಾರತದ ಮೇರು ನಾಯಕನಾಗಿ ಬೆಳೆದರು.

ಎಲ್‌.ಕೆ.ಅಡ್ವಾಣಿ ಹುಟ್ಟಿದ್ದು ಇಂದಿನ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಕರಾಚಿಯಲ್ಲಿ. ಅಡ್ವಾಣಿ ಅವರ ಮನೆ ಇದ್ದದ್ದು ಜಮ್‌ಷೆಡ್‌ ಕ್ವಾಟರ್ಸ್‌ನಲ್ಲಿ. ಅಡ್ವಾಣಿ ಕುಟುಂಬ ಸಿಂಧಿ ಹಿಂದು ಪಂಗಡದ ಅಮಿಲ್‌ ವಿಭಾಗಕ್ಕೆ ಸೇರಿತ್ತು. 

ಅಮಿಲ್‌ ಎಂದರೆ ಮುಸ್ಲಿಂ ರಾಜರಿಗೆ ಆಡಳಿತ ವ್ಯವಹಾರ ನಡೆಸಿಕೊಡುತ್ತಿದ್ದ ಮುನ್ಷಿಗಳಿಗೆ ಸಹಾಯ ಮಾಡುತ್ತಿದ್ದ ವರ್ಗ. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡ ಎಲ್‌.ಕೆ.ಅಡ್ವಾಣಿಯನ್ನು ಸಾಕಿ ಸಲಹಿ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡಿದ್ದು ಅವರ ತಂದೆ. ಹೀಗಾಗಿ ಅಡ್ವಾಣಿಗೆ ಮೊದಲಿನಿಂದಲೂ ತಂದೆಯ ಮೇಲೆ ಅಪಾರ ಪ್ರೀತಿ. 

ಪಾಕಿಸ್ತಾನದಲ್ಲೇ ಪ್ರಾಥಮಿಕ ಶಿಕ್ಷಣ: ಅಡ್ವಾಣಿ ಪ್ರೌಢಶಾಲೆ ಅಭ್ಯಾಸ ನಡೆದಿದ್ದು ಕರಾಚಿಯ ಸೆಂಟ್‌ ಪ್ಯಾಟ್ರಿಕ್ಸ್‌ ಹೈಸ್ಕೂಲ್‌ನಲ್ಲಿ. ಅಡ್ವಾಣಿ ಬುದ್ಧಿವಂತನಾಗಿದ್ದರಿಂದ ಶಾಲೆಯಲ್ಲಿ ಎಲ್ಲಾ ಶಿಕ್ಷಕರಿಗೂ ಮೆಚ್ಚಿನ ವಿದ್ಯಾರ್ಥಿಯಾಗಿದ್ದರು. 

ಅಡ್ವಾಣಿಗೆ 14 ವರ್ಷ ವಯಸ್ಸಾದ ಸಂದರ್ಭದಲ್ಲಿ ಅವರ ಕುಟುಂಬ ಕರಾಚಿಯಿಂದ ಸಿಂಧ್‌ ಪ್ರಾಂತ್ಯದಲ್ಲಿನ ಹೈದ್ರಾಬಾದ್‌ಗೆ ಸ್ಥಳಾಂತರಗೊಂಡಿತು. ಎಸ್‌ಎಸ್‌ಎಲ್‌ಸಿ ನಂತರದ ಶಿಕ್ಷಣವನ್ನು ಹೈದ್ರಾಬಾದ್‌ನ ಡಿ.ಜಿ.ನ್ಯಾಷನಲ್‌ ಕಾಲೇಜಿನಲ್ಲಿ ಪಡೆದರು. 

ನಂತರ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಪಾಕಿಸ್ತಾನದ ಹೈದ್ರಾಬಾದ್‌ನಲ್ಲಿ ಮುರಳಿ ಮುಖಿ ಮೂಲಕ ಆರ್‌ಎಸ್‌ಎಸ್‌ ನಂಟಿಗೆ ಬಂದ ಅಡ್ವಾಣಿ ಕೊನೆಯವರೆಗೂ ಆರ್‌ಎಸ್‌ಎಸ್‌ನ ಕಟ್ಟಾಳುವಾಗಿ ಉಳಿದಿದ್ದರು.

ಕರಾಚಿಯಿಂದ ದೆಹಲಿಗೆ ಕರೆ ತಂದ ಸ್ಫೋಟ: ಆಗಿನ್ನು ಭಾರತದ ವಿಭಜನೆಯಾಗಿ ತಿಂಗಳಾಗಿರಲಿಲ್ಲ. ಅಷ್ಟರಲ್ಲೇ, ಅಂದರೆ 1947ರ ಸೆ.9ರಂದು ಕರಾಚಿಯ ಶಿಕಾರಿಪುರಿ ಪ್ರಾಂತ್ಯದಲ್ಲಿ ಸ್ಫೋಟ ಸಂಭವಿಸಿತ್ತು. 

ಸ್ಫೋಟಕ್ಕೆ ಆರ್‌ಎಸ್‌ಎಸ್‌ ಕಾರಣ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡತೊಡಗಿದವು. ಇದರಿಂದಾಗಿ ಅಲ್ಲಿನ ಪೊಲೀಸರು ಕರಾಚಿಯ ಹಲವು ಪ್ರಮುಖ ಆರ್‌ಎಸ್‌ಎಸ್‌ ನಾಯಕರನ್ನು ಬಂಧಿಸಿ ಜೈಲಿಗೆ ಅಟ್ಟಿದರು. 

ಇದನ್ನು ಗಮನಿಸಿದ ಅಡ್ವಾಣಿಯ ಕೆಲ ಸ್ನೇಹಿತರು ಪಾಕಿಸ್ತಾನ ಬಿಟ್ಟು ಭಾರತಕ್ಕೆ ತೆರಳುವಂತೆ ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಸೆ.12ರಂದು ಅಡ್ವಾಣಿ ತಮ್ಮ ಸ್ನೇಹಿತ ಮರಳೀಧರ ಎಂಬುವವರ ಜೊತೆಗೂಡಿ ವಿಮಾನ ಏರಿ, ನವದೆಹಲಿ ಎಂಬ ಅಪರಿಚಿತ ನಗರಕ್ಕೆ ಬಂದಿಳಿದರು. ಹೀಗೆ ಭಾರತಕ್ಕೆ ಬಂದ ಅಡ್ವಾಣಿ ಮುಂದೆ ಭಾರತದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದರು.