ಸಾರಾಂಶ
ಅಡ್ವಾಣಿಯ 5 ರಥಯಾತ್ರೆಗಳು: ಬಿಜೆಪಿಯನ್ನು ಕೇಂದ್ರದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಿಸುವಲ್ಲಿ ಹಾಗೂ ಅಡ್ವಾಣಿಗೆ ಅವರಿಗೆ ವೈಯಕ್ತಿಕ ವರ್ಚಸ್ಸು ಹೆಚ್ಚಿಸುವಲ್ಲಿ ನೆರವಾಗಿದ್ದು ಅವರು ಕೈಗೊಂಡ ಐದು ರಥಯಾತ್ರೆಗಳು.
ಅವುಗಳೆಂದರೆ ರಾಮ ರಥಯಾತ್ರೆ, ಜನಾದೇಶ ಯಾತ್ರೆ, ಸ್ವರ್ಣ ಜಯಂತಿ ರಥೆಯಾತ್ರೆ, ಭಾರತ್ ಉದಯ್ ಯಾತ್ರಾ, ಭಾರತ ಸುರಕ್ಷಾ ಯಾತ್ರಾ.
ರಾಮರಥ ಯಾತ್ರಾ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಅಡ್ವಾಣಿ 1990 ಸೆ.25ರಂದು ಸೋಮನಾಥಪುರದಿಂದ ಅಯೋಧ್ಯೆಗೆ ರಾಮರಥ ಯಾತ್ರೆ ಆರಂಭಿಸಿದರು.
ವಿದೇಶಿ ದಾಳಿಕೋರರಿಂದ ಹಲವು ಬಾರಿ ಆಕ್ರಮಣಕ್ಕೆ ಒಳಗಾದ ಸೋಮನಾಥಪುರ ಹಲವು ಬಾರಿ ಪುನರ್ ನಿರ್ಮಾಣಗೊಂಡಿತ್ತು. ಇದೇ ಕಾರಣಕ್ಕಾಗಿ ಅಡ್ವಾಣಿ ಇಲ್ಲಿಂದ ತಮ್ಮ ರಥಯಾತ್ರೆ ಆರಂಭಿಸಿದ್ದರು.
ಯಾತ್ರೆಗೆ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ನೇತೃತ್ವದ ಸರ್ಕಾರ ಹಾಗೂ ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್ ನೇತೃತ್ವದ ಸರ್ಕಾರ ಅಡ್ಡಿ ಮಾಡಿದರೂ ಸುಮಾರು 10000 ಕಿ.ಮೀ ದೂರ ಪ್ರಯಾಣದ ಬಳಿಕ ಅಯೋಧ್ಯೆಯಲ್ಲಿ ಯಾತ್ರೆ ಸಮಾಪ್ತಿಗೊಂಡಿತು.
ಮೈಸೂರಿನಿಂದ ಜನಾದೇಶ ಯಾತ್ರೆ: 1993ರಲ್ಲಿ ಅಂದಿನ ನರಸಿಂಹ್ ರಾವ್ ಸರ್ಕಾರ ಸಂವಿಧಾನದ 80ನೇ ಕಾಯ್ದೆಗೆ ತಿದ್ದುಪಡಿ ಮಸೂದೆ ಹಾಗೂ ಜನಪ್ರತಿನಿಧಿ ಕಾಯ್ದೆಯನ್ನು ಅಂಗೀಕರಿಸಲು ನಿರ್ಧರಿಸಿತ್ತು. ಇದರ ವಿರುದ್ಧ ಜನಾಂದೋಲನ ರೂಪಿಸುವ ನಿಟ್ಟಿನಲ್ಲಿ ಅಡ್ವಾಣಿ 1993ರ ಸೆ.11ರಂದು ಜನಾದೇಶ ಯಾತ್ರೆ ಆರಂಭಿಸಿದರು.
ಸ್ವಾಮಿ ವಿವೇಕಾನಂದರ ಜನ್ಮದಿನದಂದು ದೇಶದ ನಾಲ್ಕು ಭಾಗದಲ್ಲಿ ಈ ಯಾತ್ರೆ ಆರಂಭಗೊಂಡಿತು. ಅಡ್ವಾಣಿ ಮೈಸೂರಿನಿಂದ, ಭೈರೋನ್‌ಸಿಂಗ್ ಶೇಖಾವತ್ ಜಮ್ಮುವಿನಿಂದ, ಮರುಳಿ ಮನೋಹರ್ ಜೋಷಿ ಪೋರಬಂದರ್‌ನಿಂದ ಹಾಗೂ ಕಲ್ಯಾಣ್‌ಸಿಂಗ್ ಕೊಲ್ಕತ್ತಾದಿಂದ ಈ ಯಾತ್ರೆ ಆರಂಭಿಸಿದರು.
14 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿದ ಪ್ರದೇಶಗಳನ್ನು ಹಾಯ್ದು ಬಂದ ಈ ಯಾತ್ರೆ 1993ರ ಸೆ. 23ರಂದು ಭೋಪಾಲ್‌ನಲ್ಲಿ ಮುಕ್ತಾಯಗೊಂಡಿತು.
ಸ್ವರ್ಣಜಯಂತಿ ರಥಯಾತ್ರೆ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ 50 ವರ್ಷಗಳ ಸಂಭ್ರವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಅಡ್ವಾಣಿ 1997ರಲ್ಲಿ ದೇಶಾದ್ಯಂತ ಸ್ವರ್ಣಜಯಂತಿ ರಥಯಾತ್ರೆ ಕೈಗೊಂಡರು. ಈ ರಥೆಯಾತ್ರೆ ಸ್ವಾತಂತ್ರ್ಯ ಯೋಧರಿಗೆ ನಮನ ಸಲ್ಲಿಸುವ, ಅವರ ಬಲಿದಾನವನ್ನು ನೆನಪಿಸಿಕೊಳ್ಳುವ ಉದ್ದೇಶ ಹೊಂದಿತ್ತು.
ಭಾರತ್ ಉದಯ ಯಾತ್ರೆ: ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರದ ಅವಧಿಯಲ್ಲಿ ದೇಶದಲ್ಲಿ ಮಾಡಲಾದ ಸಾಧನೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ 2004ರಲ್ಲಿ ಅಡ್ವಾಣಿ ಭಾರತ್ ಉದಯ್ ಯಾತ್ರೆ ಕೈಗೊಂಡರು. ಈ ಮೂಲಕ ಸರ್ಕಾರ ಜಾರಿ ಮಾಡಿದ ಯೋಜನೆಗಳು, ಜನಸ್ನೇಹಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಕೈಗೊಂಡರು.
ಭಾರತ್ ಸುರಕ್ಷಾ ಯಾತ್ರಾ: ಕೋಮು ಭಾವನೆಯಿಂದ ದೇಶವನ್ನು ರಕ್ಷಿಸುವ, ಮತೀಯ ಉದ್ದೇಶದ ರಾಜಕೀಯದ ಬಣ್ಣ ಬಯಲು ಮಾಡುವ, ಉಗ್ರರಿಂದ ದೇಶವನ್ನು ರಕ್ಷಿಸುವ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸಲು ಅಡ್ವಾಣಿ 2006ರ ಏಪ್ರಿಲ್ 6ರಿಂದ ಅಡ್ವಾಣಿ ಭಾರತ್ ಸುರಕ್ಷಾ ಯಾತ್ರೆ ನಡೆಸಿದರು.