ಶೇ.5 ಅಥವಾ ಶೇ.18 ಜಿಎಸ್‌ಟಿ? : ಪಾಪ್‌ಕಾರ್ನ್‌ ಬಳಿಕ ಡೋನಟ್‌ಗೂ ಸುತ್ತಿತು ವಿವಾದ

| N/A | Published : Mar 16 2025, 01:48 AM IST / Updated: Mar 16 2025, 07:00 AM IST

ಸಾರಾಂಶ

ಪಾಪ್‌ಕಾರ್ನ್‌ ಬಳಿಕ ಇದೀಗ ಯುವಕರ ಜನಪ್ರಿಯ ತಿನಿಸಾದ ಡೋನಟ್‌ ವಿಚಾರದಲ್ಲೂ ಇದೀಗ ಜಿಎಸ್‌ಟಿ ಗೊಂದಲ ಸೃಷ್ಟಿಯಾಗಿದೆ.

ನವದೆಹಲಿ: ಪಾಪ್‌ಕಾರ್ನ್‌ ಬಳಿಕ ಇದೀಗ ಯುವಕರ ಜನಪ್ರಿಯ ತಿನಿಸಾದ ಡೋನಟ್‌ ವಿಚಾರದಲ್ಲೂ ಇದೀಗ ಜಿಎಸ್‌ಟಿ ಗೊಂದಲ ಸೃಷ್ಟಿಯಾಗಿದೆ. ಡೋನಟ್‌ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಬೇಕೇ ಅಥವಾ ಶೇ.18ರಷ್ಟು ತೆರಿಗೆ ಹೇರಬೇಕೇ ಎಂಬ ಗೊಂದಲ ಇದೀಗ ಬಾಂಬೆ ಕೋರ್ಟ್‌ ಮೆಟ್ಟಿಲೇರಿದ್ದು, ಈ ಕುರಿತು 24ರಂದು ವಿಚಾರಣೆ ನಡೆಯಲಿದೆ.

ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ನೀಡಲಿರುವ ತೀರ್ಪು ದೇಶದ ಆಹಾರ ಮತ್ತು ಪಾನೀಯ ಕ್ಷೇತ್ರದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಏನಿದು ಪ್ರಕರಣ?:

ಡೋನಟ್‌ಗಳಿಗೆ ಹೆಸರುವಾಸಿಯಾದ ‘ಮ್ಯಾಡ್‌ ಓವರ್ ಡೋನಟ್ಸ್‌’ ಕಂಪನಿಗೆ 100 ಕೋಟಿ ತೆರಿಗೆ ಕಳ್ಳತನದ ನೋಟಿಸ್‌ ನೀಡಲಾಗಿತ್ತು. ‘ಡೋನಟ್‌ ಬೇಕರಿ ಉತ್ಪನ್ನ. ಆದರೂ ರೆಸ್ಟೋರೆಂಟ್‌ ಸೇವೆ ಎಂದು ಪರಿಗಣಿಸಿ ಶೇ.5 ತೆರಿಗೆ ಪಾವತಿಸುತ್ತಿದ್ದಾರೆ’ ಎಂದು ಅದರಲ್ಲಿ ಆರೋಪಿಸಲಾಗಿತ್ತು.

ಆದರೆ ಕಂಪನಿ ಮಾತ್ರ ತನ್ನ ಔಟ್‌ಲೆಟ್‌ಗಳು ರೆಸ್ಟೋರೆಂಟ್‌ ವ್ಯಾಪ್ತಿಗೆ ಬರುತ್ತವೆ. ಬೇಕರಿ ವ್ಯಾಪ್ತಿಗಲ್ಲ. ಯಾಕೆಂದರೆ ಅಲ್ಲಿ ಅಡುಗೆ ಮನೆ ಇದ್ದು, ಡೋನಟ್‌ಗಳನ್ನು ಬಿಸಿ ಮಾಡಿ ಅಂತಿಮ ಸಿದ್ಧತೆ ಮಾಡಿ ಮಾರಾಟ ಮಾಡಲಾಗುತ್ತದೆ ಎಂದು ವಾದಿಸಿದೆ.

ಕಾಂಗ್ರೆಸ್‌ ವ್ಯಂಗ್ಯ: ಡೋನಟ್‌ ಜಿಎಸ್‌ಟಿ ಗೊಂದಲ ಕುರಿತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದು, ವ್ಯವಹಾರಕ್ಕೆ ಪೂರಕ ವಾತಾವರಣ ನಿರ್ಮಿಸುವುದೆಂದರೆ ಇದು ಎಂದು ವ್ಯಂಗ್ಯವಾಡಿದ್ದಾರೆ. ಜತೆಗೆ, ಜಿಎಸ್‌ಟಿ ತುರ್ತು ಸುಧಾರಣೆಗೆ ಆಗ್ರಹಿಸಿದ್ದಾರೆ.