ವೈದ್ಯಕೀಯ ಕೋರ್ಸ್‌ಗಳ ಪ್ರವೇಶದ ನೀಟ್‌ ಮರುಪರೀಕ್ಷೆಯಲ್ಲಿ ಹರ್ಯಾಣ ಕೇಂದ್ರದ ಒಬ್ಬನಿಗೂ 720 ಅಂಕ ಇಲ್ಲ!

| Published : Jul 21 2024, 01:19 AM IST / Updated: Jul 21 2024, 04:55 AM IST

ವೈದ್ಯಕೀಯ ಕೋರ್ಸ್‌ಗಳ ಪ್ರವೇಶದ ನೀಟ್‌ ಮರುಪರೀಕ್ಷೆಯಲ್ಲಿ ಹರ್ಯಾಣ ಕೇಂದ್ರದ ಒಬ್ಬನಿಗೂ 720 ಅಂಕ ಇಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಈ ಬಾರಿ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪ ಕೇಳಿಬರಲು ಮೂಲ ಕಾರಣವಾಗಿದ್ದ ಹರ್ಯಾಣದ ನಿರ್ದಿಷ್ಟ ಪರೀಕ್ಷಾ ಕೇಂದ್ರದ ಬಣ್ಣ ಕೊನೆಗೂ ಬಯಲಾಗಿದೆ.

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಈ ಬಾರಿ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪ ಕೇಳಿಬರಲು ಮೂಲ ಕಾರಣವಾಗಿದ್ದ ಹರ್ಯಾಣದ ನಿರ್ದಿಷ್ಟ ಪರೀಕ್ಷಾ ಕೇಂದ್ರದ ಬಣ್ಣ ಕೊನೆಗೂ ಬಯಲಾಗಿದೆ. ಸುಪ್ರೀಂಕೋರ್ಟ್‌ನ ಆದೇಶದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಶನಿವಾರ ನಗರವಾರು ಹಾಗೂ ಕೇಂದ್ರವಾರು ನೀಟ್‌-ಯುಜಿ ಫಲಿತಾಂಶ ಪ್ರಕಟಿಸಿದ್ದು, ಅದರಲ್ಲಿ ಈ ಕೇಂದ್ರದ ಒಬ್ಬರೂ 720ಕ್ಕೆ 720 ಅಂಕ ಪಡೆದಿಲ್ಲ. ಜೂ.5ರಂದು ಪ್ರಕಟವಾಗಿದ್ದ ಫಲಿತಾಂಶದಲ್ಲಿ ಈ ಕೇಂದ್ರದ 6 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದರು.

ಜೂ.5ರಂದು ಮೊದಲ ಬಾರಿ ಫಲಿತಾಂಶ ಪ್ರಕಟವಾದಾಗ ಹರ್ಯಾಣದ ಬಹಾದುರ್‌ಗಢದಲ್ಲಿರುವ ಹರದಯಾಳ್‌ ಪಬ್ಲಿಕ್‌ ಶಾಲೆಯ ನೀಟ್‌ ಪರೀಕ್ಷಾ ಕೇಂದ್ರದ 6 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಪಡೆದಿರುವುದು ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು. ನಂತರ ದೇಶದ ಬೇರೆ ಬೇರೆ ಕಡೆ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಪರೀಕ್ಷೆ ರದ್ದುಪಡಿಸಿ ಮರುಪರೀಕ್ಷೆ ನಡೆಸಲು ಕೋರಿ ಅನೇಕ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಸುಪ್ರೀಂಕೋರ್ಟ್‌ 1563 ವಿದ್ಯಾರ್ಥಿಗಳಿಗೆ ನೀಡಿದ್ದ ಗ್ರೇಸ್‌ ಅಂಕ ರದ್ದುಪಡಿಸಿ, ಅವರಿಗೆ ಮರುಪರೀಕ್ಷೆ ನಡೆಸಲು ಸೂಚಿಸಿತ್ತು. ಅದರಂತೆ ಮರುಪರೀಕ್ಷೆ ನಡೆಸಿದಾಗ ಹರ್ಯಾಣದ ಈ ಕೇಂದ್ರದಲ್ಲಿ 494 ಮಂದಿ ಪರೀಕ್ಷೆ ಬರೆದಿದ್ದರು. ಈಗ ಪ್ರಕಟವಾದ ಕೇಂದ್ರವಾರು ಫಲಿತಾಂಶದಲ್ಲಿ ಈ ಕೇಂದ್ರದ ಒಬ್ಬ ಅಭ್ಯರ್ಥಿ ಮಾತ್ರ ಅತ್ಯಧಿಕ 682 ಅಂಕ ಪಡೆದಿದ್ದಾರೆ. ಕೇವಲ 13 ಮಂದಿ 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಹೀಗಾಗಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ಹೇಳಲಾಗುತ್ತಿದೆ.

ಎನ್‌ಟಿಎ ಶನಿವಾರ ಪ್ರಕಟಿಸಿದ ನಗರವಾರು ಹಾಗೂ ಕೇಂದ್ರವಾರು ಫಲಿತಾಂಶದ ಆಧಾರದಲ್ಲಿ ಸುಪ್ರಿಂಕೋರ್ಟ್‌ನಲ್ಲಿ ಜು.22ರಂದು ಮುಂದಿನ ವಿಚಾರಣೆ ನಡೆಯಲಿದೆ.

ಮೇ 5ರಂದು ನೀಟ್‌-ಯುಜಿ ಪರೀಕ್ಷೆ 571 ನಗರಗಳ, 4750 ಕೇಂದ್ರಗಳಲ್ಲಿ ನಡೆದಿತ್ತು. 14 ವಿದೇಶಿ ಕೇಂದ್ರಗಳಲ್ಲೂ ನಡೆದಿತ್ತು. 24 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರ ಪತ್ರಿಕೆ ತಿದ್ದಿರುವುದು, ತಪ್ಪಾಗಿ ಗ್ರೇಸ್‌ ಅಂಕ ನೀಡಿರುವುದೂ ಸೇರಿದಂತೆ ವ್ಯಾಪಕ ಅಕ್ರಮಗಳು ನಡೆದಿರುವ ಆರೋಪ ಕೇಳಿಬಂದಿತ್ತು.

ನೀಟ್‌ ಅಕ್ರಮ: ಮತ್ತೊಬ್ಬ ಮಾಸ್ಟರ್‌ಮೈಂಡ್‌ ಬಂಧನ

ನವದೆಹಲಿ: ನೀಟ್‌ ಪ್ರಶ್ನೆ ಪತ್ರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ ಪ್ರಕರಣದ ಮಾಸ್ಟರ್ ಮೈಂಡ್‌, ಜಮ್ಶೆಡ್‌ಪುರ ಎನ್‌ಐಟಿ ಪದವೀಧರ ಹಾಗೂ ರಾಜಸ್ಥಾನದ ಇಬ್ಬರು ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಬಂಧಿಸಿದೆ. ಈ ಮೂಲಕ ನೀಟ್‌ ಅಕ್ರಮದಲ್ಲಿ ಬಂಧಿತರಾದವರ ಸಂಖ್ಯೆ 21ಕ್ಕೇರಿಕೆಯಾಗಿದೆ.

ಶಶಿಕಾಂತ್ ಪಾಸ್ವಾನ್, ಮಂಗಳಂ ಬಿಷ್ಣೋಯಿ, ದೀಪೆಂದರ್‌ ಶರ್ಮಾ ಬಂಧಿತ ಆರೋಪಿಗಳು. ಈ ಪೈಕಿ ಶಶಿಕಾಂತ್ ಪಾಸ್ವಾನ್ ಬಿ.ಟೆಕ್ ಪದವೀಧರನಾಗಿದ್ದು, ನೀಟ್ ಅಕ್ರಮದಲ್ಲಿ ಈಗಾಗಲೇ ಬಂಧಿತರಾಗಿರುವ ಪಂಕಜ್ ಕುಮಾರ್ ಮತ್ತು ರಾಕಿ ಸಹಚರನಾಗಿದ್ದ. ಉಳಿದ ಇಬ್ಬರು ವಿದ್ಯಾರ್ಥಿಗಳು ರಾಜಸ್ಥಾನದ ಭರತಪುರದ ಮೆಡಿಕಲ್ ಸ್ಕೂಲ್‌ನ ವಿದ್ಯಾರ್ಥಿಗಳು. ಮೇ 05 ರಂದು ನೀಟ್ ಪರೀಕ್ಷೆಯ ದಿನ ಹಜರಿಬಾಗ್‌ನ ಪರೀಕ್ಷಾ ಕೇಂದ್ರದಲ್ಲಿ ಉಪಸ್ಥಿತರಿದ್ದರು. ಅಲ್ಲದೇ ಪಂಕಜ್ ಕುಮಾರ್ ಕದ್ದ ಪ್ರಶ್ನೆ ಪತ್ರಿಕೆ ಉತ್ತರ ಬರೆಯುವ ಕೆಲಸ ಮಾಡುತ್ತಿದ್ದರು.