ಸಾರಾಂಶ
ದೇಶದ 80 ಕೋಟಿ ಜನರಿಗೆ ಅನುಕೂಲ. ಮಧ್ಯಪ್ರದೇಶ ಬಿಜೆಪಿ ರ್‍ಯಾಲಿಯಲ್ಲಿ ಪ್ರಧಾನಿ ಘೋಷಣೆ.
ಭೋಪಾಲ್: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿಯಲ್ಲಿ ದೇಶದ ಪ್ರತಿ ವ್ಯಕ್ತಿಗೆ ನೀಡಲಾಗುವ 5 ಕೆ.ಜಿ. ಉಚಿತ ಪಡಿತರವನ್ನು ಇನ್ನೂ 5 ವರ್ಷಗಳ ಕಾಲ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ನಿಗದಿಯಾಗಿರುವ ಮಧ್ಯಪ್ರದೇಶದ ದುರ್ಗ್ ಮತ್ತು ರತ್ಲಂನಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದ ಮೋದಿ, ‘ಕೇಂದ್ರ ಸರ್ಕಾರ ವಿತರಿಸುತ್ತಿರುವ ಉಚಿತ ಪಡಿತರ ಯೋಜನೆಯನ್ನು 5 ವರ್ಷಗಳ ಕಾಲ ವಿಸ್ತರಿಸಲಾಗುತ್ತದೆ. ಇದರ ಪ್ರಯೋಜನವನ್ನು ದೇಶದ 80 ಕೋಟಿ ಜನರು ಪಡೆದುಕೊಳ್ಳಲಿದ್ದಾರೆ. ಇದು ಮೋದಿಯ ಗ್ಯಾರಂಟಿ’ ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್ ಪಕ್ಷ ಬಡವರನ್ನು ದ್ವೇಷಿಸುತ್ತದೆ. ಬಡವರು ಯಾವಾಗಲೂ ಅವರ ಎದುರು ನಿಂತು ಬೇಡಿಕೊಳ್ಳಬೇಕು ಎಂದು ಬಯಸುತ್ತದೆ. ಹಾಗಾಗಿ ಬಡವರು ಸದಾ ಬಡವರಾಗಿಯೇ ಇರುವಂತೆ ನೋಡಿಕೊಳ್ಳುತ್ತದೆ’ ಎಂದು ಹೇಳಿದ್ದಾರೆ. ‘ಪ್ರಧಾನಮಂತ್ರಿ ಅಂತ್ಯೋದಯ ಅನ್ನ ಯೋಜನೆಯಡಿಯಲ್ಲಿ ಕಳೆದ 3 ವರ್ಷಗಳಿಂದ ಬಡವರಿಗೆ ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಯ ಅವಧಿ 1 ತಿಂಗಳಲ್ಲಿ ಮುಕ್ತಾಯವಾಗಲಿತ್ತು. ಇದೀಗ ಅದನ್ನು ಮತ್ತೆ 5 ವರ್ಷ ವಿಸ್ತರಿಸಲಾಗುವುದು. ಇದು ಮೋದಿ ಗ್ಯಾರಂಟಿ. ಈ ಯೋಜನೆ 80 ಕೋಟಿ ಜನರ ಮನೆ ಅಡುಗೆ ಮನೆಯ ಸ್ಟೌವ್ ಇನ್ನೂ 5 ವರ್ಷ ಉರಿಯುವುದನ್ನು ಖಾತರಿಪಡಿಸಲಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.ಮೋದಿ ಗ್ಯಾರಂಟಿ
ಪ್ರಧಾನಮಂತ್ರಿ ಅಂತ್ಯೋದಯ ಅನ್ನ ಯೋಜನೆ ಅವಧಿ 1 ತಿಂಗಳಲ್ಲಿ ಮುಗಿಯಲಿತ್ತು. ಅದನ್ನು 5 ವರ್ಷ ವಿಸ್ತರಿಸಲಾಗುವುದು. ಇದು ಮೋದಿ ಗ್ಯಾರಂಟಿ. ಈ ಯೋಜನೆ 80 ಕೋಟಿ ಜನರ ಅಡುಗೆ ಮನೆಯ ಸ್ಟೌವ್ ಇನ್ನೂ 5 ವರ್ಷ ಉರಿಯುವುದನ್ನು ಖಾತ್ರಿಪಡಿಸಲಿದೆ.- ನರೇಂದ್ರ ಮೋದಿ, ಪ್ರಧಾನಿ