ಸಾರಾಂಶ
ತಾನು ನ್ಯಾಯಾಲಯದಿಂದ ನೇಮಕವಾದ ಮಧ್ಯಸ್ಥಿಕೆದಾರ ಎಂದು ಸುಳ್ಳು ಹೇಳಿ 5 ವರ್ಷಗಳಿಂದ ನಕಲಿ ನ್ಯಾಯಾಲಯ ನಡೆಸುತ್ತಿದ್ದ ಮೋರಿಸ್ ಸ್ಯಾಮ್ಯುಯುಲ್ ಕ್ರಿಸ್ಟಿಯನ್ ಎಂಬ ವ್ಯಕ್ತಿಯನ್ನು ಗುಜರಾತ್‌ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಅಹಮದಾಬಾದ್: ತಾನು ನ್ಯಾಯಾಲಯದಿಂದ ನೇಮಕವಾದ ಮಧ್ಯಸ್ಥಿಕೆದಾರ ಎಂದು ಸುಳ್ಳು ಹೇಳಿ 5 ವರ್ಷಗಳಿಂದ ನಕಲಿ ನ್ಯಾಯಾಲಯ ನಡೆಸುತ್ತಿದ್ದ ಮೋರಿಸ್ ಸ್ಯಾಮ್ಯುಯುಲ್ ಕ್ರಿಸ್ಟಿಯನ್ ಎಂಬ ವ್ಯಕ್ತಿಯನ್ನು ಗುಜರಾತ್‌ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಮೋರಿಸ್, ನಗರದ ಸಿಟಿ ಸಿವಿಲ್ ಕೋರ್ಟ್‌ಗೆ ಬರುತ್ತಿದ್ದ ಭೂವ್ಯಾಜ್ಯ ಸಂಬಂಧಿ ವ್ಯಕ್ತಿಗಳನ್ನು ಗುರುತಿಸಿ ಅವರೊಂದಿಗೆ ಡೀಲ್ ಕುದುರಿಸುತ್ತಿದ್ದ. ‘ನಾನು ನ್ಯಾಯಾಲಯದಿಂದ ನೇಮಕವಾದ ಮಧ್ಯಸ್ಥಿಕೆದಾರ. ನಿಮಗೆ ಬೇಕಾದ ರೀತಿ ತೀರ್ಪು ನೀಡುವೆ’ ಎಂದು ಹೇಳಿ ಅವರಿಂದ ಹಣ ಪಡೆಯುತ್ತಿದ್ದ.ಬಳಿಕ ಕೋರ್ಟ್‌ನಿಂದ ದೂರ ಇರುವ ಹಾಗೂ ನ್ಯಾಯಾಲಯ ರೀತಿಯಲ್ಲೇ ರೂಪಾಂತರ ಮಾಡಿದ್ದ ತನ್ನ ಕಚೇರಿಗೆ ಅವರನ್ನು ಕರೆಸಿಕೊಳ್ಳುತ್ತಿದ್ದ. ಅಲ್ಲಿ ಮೋರಿಸ್ ಜಡ್ಜ್ ಪಾತ್ರ ವಹಿಸಿದರೆ, ಆತನ ಇತರೆ ಆಪ್ತರು ಕೋರ್ಟ್ ಸಿಬ್ಬಂದಿ ಮತ್ತು ವಕೀಲರ ರೀತಿ ನಾಟಕ ಆಡುತ್ತಿದ್ದರು. ಅಲ್ಲಿ ಮೋರಿಸ್ ಕೆಲವು ದಿನ ವಿಚಾರಣೆ ನಾಟಕ ಆಡಿ ಬಳಿಕ ಹಣ ಪಡೆದವರ ಪರ ನಕಲಿ ಆದೇಶ ಹೊರಡಿಸುತ್ತಿದ್ದ.
ಇತ್ತೀಚೆಗೆ ಭೂವ್ಯಾಜ್ಯ ಪ್ರಕರಣವೊಂದರ ಬಗ್ಗೆ ಇದೇ ರೀತಿ ನಕಲಿ ಆದೇಶ ಹೊರಡಿಸಿದ್ದ. ಬಳಿಕ ಆ ಆದೇಶದ ಪ್ರತಿ ಇಟ್ಟುಕೊಂಡು ಅಸಲಿ ವಕೀಲರ ಮೂಲಕ ಕೋರ್ಟ್‌ನಿಂದ ‘ಆದೇಶ ಜಾರಿ ಪತ್ರ’ ಪಡೆಯಲು ಮುಂದಾಗಿದ್ದ.ಆದರೆ ಕೋರ್ಟ್‌ನ ರಿಜಿಸ್ಟ್ರಾರ್‌ಗೆ ಮೋರಿಸ್, ನ್ಯಾಯಾಲಯದಿಂದ ನೇಮಕವಾದ ಮಧ್ಯಸ್ಥಿಕೆದಾರ ಅಲ್ಲ ಎಂಬ ವಿಷಯ ತಿಳಿದುಬಂದ ಆತನ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.