ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ (80) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಭಾನುವಾರ ಲಂಡನ್‌ಗೆ ಕರೆದೊಯ್ಯಲಾಗುತ್ತದೆ.

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ (80) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಭಾನುವಾರ ಲಂಡನ್‌ಗೆ ಕರೆದೊಯ್ಯಲಾಗುತ್ತದೆ.

ಶುಕ್ರವಾರವೇ ಕರೆದೊಯ್ಯಬೇಕಿತ್ತು. ಆದರೆ ಏರ್‌ ಆ್ಯಂಬುಲೆನ್ಸ್‌ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರನ್ನುಶುಕ್ರವಾರ ಬದಲು ಭಾನುವಾರ ಕರೆದೊಯ್ಯಲಾಗುತ್ತದೆ ಎಂದು ಅವರ ಪಕ್ಷವಾದ ಬಿಎನ್‌ಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಈಗಾಗಲೇ ಬ್ರಿಟನ್‌ ಮತ್ತು ಚೀನಾ ವೈದ್ಯರು ಢಾಕಾ ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆಯಲ್ಲಿ ತೊಡಗಿದ್ದಾರೆ.

==

ಪಾಕ್‌ನಲ್ಲಿ ಹಿಂದೂ ಬಾಲಕಿ ಮತಾಂತರ: ತನಿಖೆಗೆ ಆದೇಶ

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕಿಯು ಹಿಂದೂ ವಿದ್ಯಾರ್ಥಿನಿಯರಿಗೆ ಇಸ್ಲಾಂಗೆ ಮತಾಂತರವಾಗಲು ಒತ್ತಾಯಿಸಿದ ಘಟನೆ ನಡೆದಿದೆ. ಘಟನೆ ಸಂಬಂಧ ಆಕೆಯ ಪೋಷಕರು ದೂರು ದಾಖಲಿಸಿದ್ದು, ತನಿಖೆಗೆ ಅಲ್ಲಿನ ಸರ್ಕಾರ ಸಮಿತಿ ರಚಿಸಿದೆ.ಸಿಂಧ್‌ನ ಮೀರ್‌ಪುರ್‌ ಸಕ್ರೋ ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಘಟನೆ ಜರುಗಿದೆ. ಮುಖ್ಯ ಶಿಕ್ಷಕಿಯು ಬಲವಂತವಾಗಿ ಮತಾಂತರವಾಗಲು ಒತ್ತಡ ಹೇರುತ್ತಿದ್ದು, ಕಲ್ಮಾ ಓದುವಂತೆ, ಇಸ್ಲಾಂಗೆ ಬರದಿದ್ದರೆ ಶಾಲೆಯಿಂದ ಹೊರಗಿಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹಲವು ಬಾರಿ ಮನೆಗೆ ಕಳುಹಿಸಿದ್ದಾರೆ ಎಂದು ವಿದ್ಯಾರ್ಥಿನಿಯ ಪೋಷಕರು ಆರೋಪಿಸಿದ್ದಾರೆ.

ಪಾಕ್‌ನಲ್ಲಿ ಸಿಂಧ್‌ ಪ್ರಾಂತ್ಯವು ಅತಿ ಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿದೆ. ಪಾಕ್‌ನಲ್ಲಿ ವರ್ಷಕ್ಕೆ ಸುಮಾರು 1000 ಹಿಂದೂ ಹೆಣ್ಣುಮಕ್ಕಳನ್ನು ಬಲವಂತವಾಗಿ ಹಿರಿ ವಯಸ್ಸಿನ ಮುಸ್ಲಿಂ ವ್ಯಕ್ತಿಗೆ ಮದುವೆ ಮಾಡಲಾಗುತ್ತಿದೆ.

==

ಇನ್ನೂ 8 ದೇಶಗಳಲ್ಲಿ ಶೀಘ್ರ ಯುಪಿಐ ಸೇವೆ ಆರಂಭ ಸಾಧ್ಯತೆ

ನವದೆಹಲಿ: ದೇಶದ ಆನ್‌ಲೈನ್ ಪಾವತಿಯ ಸರ್ಕಾರಿ ಆ್ಯಪ್‌ ಆದ ಭೀಮ್ ಯುಪಿಐನನ್ನು ಇನ್ನು ಹಲವು ದೇಶಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ಅದರ ಭಾಗವಾಗಿ 8 ದೇಶಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ.ನಾಗರಾಜು ತಿಳಿಸಿದ್ದಾರೆ.ಈಗಾಗಲೇ 8 ದೇಶಗಳಲ್ಲಿ ಯುಪಿಐ ಸೇವೆ ಇದೆ. ಇನ್ನೂ 8 ದೇಶಕ್ಕೆ ವಿಸ್ತರಣೆಯಾದರೆ ಇವುಗಳ ಸಂಖ್ಯೆ 16ಕ್ಕೇರಲಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,‘ಪೂರ್ವ ಏಷ್ಯಾ ಸೇರಿ ಹಲವು ದೇಶಗಳ ಜೊತೆಗೆ ಈಗಾಗಲೇ ಮಾತುಕತೆ ನಡೆಸುತ್ತಿದೆ. ದೇಶದ ಹಣಕಾಸು ಉದ್ಯಮದಲ್ಲಿ ಯುಪಿಐ ಪ್ರಮುಖ ಪಾತ್ರವಹಿಸಿದ್ದು, ವಿದೇಶಗಳಲ್ಲಿಯೂ ಭಾರತೀಯರು ಸುಲಲಿತವಾಗಿ ಪಾವತಿ ಮಾಡಬಹುದಾಗಿದೆ. ವ್ಯಾಪಾರ ಒಪ್ಪಂದಗಳ ಜೊತೆಗೆ ಯುಪಿಐನನ್ನು ಸೇರಿಸಲಾಗುತ್ತಿದೆ’ ಎಂದು ತಿಳಿಸಿದರು.