ಸಾರಾಂಶ
* ಇಸ್ರೇಲ್‌ಗೆ ಅ.14ರವರೆಗೆ ಏರ್ ಇಂಡಿಯಾ ವಿಮಾನ ಸಂಚಾರ ರದ್ದು - ಇಸ್ರೇಲ್‌ನಲ್ಲಿ ಸಿಲುಕಿದ್ದ ಏರ್ ಇಂಡಿಯಾ ಸಿಬ್ಬಂದಿ ರಕ್ಷಣೆ ನವದೆಹಲಿ: ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಅ.14 ರವರೆಗೆವಿಮಾನಯಾನ ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ ಭಾನುವಾರ ತಿಳಿಸಿದೆ. ಇದೇ ವೇಳೆ ತನ್ನ ವಿಮಾನ ರದ್ದಾದ ಕಾರಣ ಇಸ್ರೇಲ್‌ನಲ್ಲಿ ಸಿಲುಕಿದ್ದ ತನ್ನೆಲ್ಲ ಸಿಬ್ಬಂದಿಯನ್ನು ಇಥಿಯೋಪಿಯಾ ಏರ್‌ಲೈನ್ಸ್ ಮೂಲಕ ಏರ್ ಇಂಡಿಯಾ ತೆರವು ಮಾಡಿದೆ.
ಏರ್ ಇಂಡಿಯಾ ದಿಲ್ಲಿಯಿಂದ ಟೆಲ್ ಅವೀವ್‌ಗೆ ವಾರಕ್ಕೆ 5 ದಿನ ವಿಮಾನ ಸಂಚಾರ ನಡೆಸುತ್ತವೆ. ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ- ಇವು ವಿಮಾನ ಸಂಚಾರದ ದಿನಗಳಾಗಿವೆ. ‘ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ವಿಮಾನ ಸಂಚಾರ ರದ್ದು ಮಾಡಲಾಗಿದೆ. ಈ ಅವಧಿಯಲ್ಲಿ ಬುಕಿಂಗ್ ದೃಢಪಡಿಸಿದ ಪ್ರಯಾಣಿಕರಿಗೆ ಏರ್‌ಲೈನ್ ಸಾಧ್ಯವಿರುವ ಎಲ್ಲ ನೆರವನ್ನು ನಾವು ನೀಡಿತ್ತೇವೆ’ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.