ಏರಿಂಡಿಯಾ ಊಟದಲ್ಲಿ ಬ್ಲೇಡ್‌ ಪತ್ತೆ!

| Published : Jun 18 2024, 12:49 AM IST / Updated: Jun 18 2024, 06:11 AM IST

ಸಾರಾಂಶ

ಟಾಟಾ ಒಡೆತನದ ಏರ್‌ ಇಂಡಿಯಾ ವಿಮಾನದಲ್ಲಿ ಅವಾಂತರಗಳು ಮುಂದುವರೆದಿದ್ದು, ಬೆಂಗಳೂರಿನಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ ಸಾಗುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರಿಗೆ ನೀಡಿದ ಆಹಾರದಲ್ಲಿ ಮೆಟಲ್‌ ಬ್ಲೇಡ್‌ ಪತ್ತೆಯಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದಕ್ಕೆ ಏರ್‌ ಇಂಡಿಯಾ ಕ್ಷಮೆಯಾಚಿಸಿದೆ.

ನವದೆಹಲಿ: ಟಾಟಾ ಒಡೆತನದ ಏರ್‌ ಇಂಡಿಯಾ ವಿಮಾನದಲ್ಲಿ ಅವಾಂತರಗಳು ಮುಂದುವರೆದಿದ್ದು, ಬೆಂಗಳೂರಿನಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ ಸಾಗುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರಿಗೆ ನೀಡಿದ ಆಹಾರದಲ್ಲಿ ಮೆಟಲ್‌ ಬ್ಲೇಡ್‌ ಪತ್ತೆಯಾಗಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದಕ್ಕೆ ಏರ್‌ ಇಂಡಿಯಾ ಕ್ಷಮೆಯಾಚಿಸಿದೆ.

ಪತ್ರಕರ್ತ ಮ್ಯಾಥುರೆಸ್‌ ಪಾಲ್‌ ಎಂಬುವವರು ಜೂ.9ರಂದು ಬೆಂಗಳೂರಿನಿಂದ ಅಮೆರಿಕಕ್ಕೆ ಏರ್‌ ಇಂಡಿಯಾ ವಿಮಾನದಲ್ಲಿ ಹೊರಟಿದ್ದರು. ಅದರಲ್ಲಿ ನೀಡಿದ ಫಿಗ್‌ ಚಾಟ್‌ ಆಹಾರವನ್ನು ಬಾಯಿಗೆ ಹಾಕಿ ಅಗಿದ ಬಳಿಕ ಅನುಮಾನಾಸ್ಪದ ವಸ್ತು ಇರುವುದು ಗಮನಕ್ಕೆ ಬಂದಿದೆ. ಬಳಿಕ ಆಹಾರವನ್ನು ಉಗಿದಾಗ ಅದರಲ್ಲಿ ಚೂಪಾದ ಬ್ಲೇಡ್‌ ಇರುವುದು ಪತ್ತೆಯಾಗಿದೆ. ನಂತರ ಗಗನಸಖಿಯರು ಕ್ಷಮೆಯಾಚಿಸಿ ಬದಲಿ ಚಿಕ್‌ಪೀಸ್‌ ಖಾದ್ಯವನ್ನು ನೀಡಿದರು ಎಂಬುದಾಗಿ ಮ್ಯಾಥುರೆಸ್‌ ಟ್ವೀಟ್‌ ಮಾಡಿದ್ದಾರೆ.

ಬ್ಲೇಡ್‌ ಬಂದಿದ್ದು ಹೇಗೆ?:

ಸಾಮಾನ್ಯವಾಗಿ ವಿಮಾನದಲ್ಲಿ ಲೋಹದ ವಸ್ತುಗಳನ್ನು ಒಯ್ಯಲು ಅವಕಾಶವಿಲ್ಲ. ಆದರೆ ವಿಮಾನದ ಆಹಾರ ಪೊಟ್ಟಣದಲ್ಲಿ ಮೆಟಲ್‌ ಬ್ಲೇಡ್‌ ಬಂದಿದ್ದು ಹೇಗೆ. ಜೊತೆಗೆ ಬ್ಲೇಡ್‌ನಿಂದ ನನ್ನ ನಾಲಿಗೆ ಕುಯ್ದಿದ್ದರೆ ಏನಾಗುತ್ತಿತ್ತು. ಅಥವಾ ಇದೇ ಆಹಾರ ಪೊಟ್ಟಣವನ್ನು ಒಂದು ಮಗುವಿಗೆ ನೀಡಿದ್ದರೆ ಅದರ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಸಂಸ್ಥೆ ಮನನ ಮಾಡಿಕೊಳ್ಳಬೇಕು ಎಂಬುದಾಗಿ ಪತ್ರಕರ್ತ ಮ್ಯಾಥುರೆಸ್‌ ಪಾಲ್ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏರ್‌ ಇಂಡಿಯಾ ಕ್ಷಮೆ:

ವಿಮಾನದಲ್ಲಿ ನೀಡಲಾದ ಆಹಾರದಲ್ಲಿ ಮೆಟಲ್‌ ಬ್ಲೇಡ್‌ ಇರುವ ಸಂಗತಿಯನ್ನು ಏರ್‌ ಇಂಡಿಯಾ ಸಂಸ್ಥೆ ಒಪ್ಪಿಕೊಂಡಿದ್ದು, ಇನ್ನು ಮುಂದೆ ಆಹಾರ ಪೂರೈಕೆದಾರರಿಗೆ ಮತ್ತಷ್ಟು ಬಿಗಿಯಾಗಿ ಆಹಾರವನ್ನು ಪರಿಶೀಲಿಸಿ ಪ್ಯಾಕ್‌ ಮಾಡುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆ.

ಬಿಜಿ಼ನೆಸ್‌ ಟಿಕೆಟ್‌ ಆಫರ್‌!

ಈ ನಡುವೆ, ಆಹಾರದಲ್ಲಿ ಬ್ಲೇಡ್‌ ಇರುವ ವಿಷಯ ಏರ್‌ ಇಂಡಿಯಾ ಗಮನಕ್ಕೆ ಬರುತ್ತಿದ್ದಂತೆ ಸಂಸ್ಥೆ ಕ್ಷಮೆಯಾಚಿಸಿ ಮ್ಯಾಥುರೆಸ್‌ ಅವರಿಗೆ ಪ್ರಪಂಚದ ಯಾವುದೇ ಭಾಗಕ್ಕೆ ಒಂದು ಪ್ರಯಾಣದ ಉಚಿತ ಬಿಜಿ಼ನೆಸ್‌ ಕ್ಲಾಸ್‌ ಟಿಕೆಟ್‌ ನೀಡುವುದಾಗಿ ಪ್ರಕಟಿಸಿದೆ. ಆದರೆ ಮ್ಯಾಥುರೆಸ್‌ ಇದನ್ನು ನಿರಾಕರಿಸಿದ್ದು, ಸಂಸ್ಥೆ ನೀಡುವ ಲಂಚವನ್ನು ತಿರಸ್ಕರಿಸುತ್ತೇನೆ ಎಂದಿದ್ದಾರೆ.