ಸಾರಾಂಶ
ಮುಂಬೈ: ತನ್ನ ಒಡೆತನದ ಯಾವುದೇ ಬೋಯಿಂಗ್ 787 ಮತ್ತು 737 ಮಾದರಿಯ ವಿಮಾನಗಳಲ್ಲಿ ಇಂಧನ ನಿಯಂತ್ರಣ ಮಾಡುವ ಸ್ವಿಚ್ ವ್ಯವಸ್ಥೆಯಲ್ಲಿ ಯಾವುದೇ ಲೋಪದೋಷ ಕಂಡುಬಂದಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಇತ್ತೀಚಿಗೆ ಅಹಮದಾಬಾದ್‌ನಲ್ಲಿ ಅಪಘಾತಕ್ಕೆ ತುತ್ತಾದ ವಿಮಾನದಲ್ಲಿ ಇಂಧನ ನಿಯಂತ್ರಣ ಸ್ವಿಚ್ ಆಫ್ ಆಗಿದ್ದು ತನಿಖೆಯಲ್ಲಿ ಕಂಡುಬಂದಿತ್ತು. ಆದರೆ ಪೈಲಟ್‌ಗಳ ತಪ್ಪಿನಿಂದ ಆಗಿದ್ದೋ ಅಥವಾ ತಾಂತ್ರಿಕ ದೋಷದಿಂದ ಆಗಿದ್ದೋ ಎಂದು ಕಂಡುಬಂದಿರಲಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೋಯಿಂಗ್ ಕಂಪನಿಯ ಎಲ್ಲಾ ಇಂಧನ ಸ್ವಿಚ್ ವ್ಯವಸ್ಥೆಯನ್ನು ಜು.21ರೊಳಗೆ ಪರಿಶೀಲಿಸಬೇಕು ಎಂದು ಏರ್ ಇಂಡಿಯಾಕ್ಕೆ ವಿಮಾನಯಾನ ನಿಯಂತ್ರಣ ಸಂಸ್ಥೆಯಾದ ಡಿಜಿಸಿಎ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಇಂಧನ ಸ್ವಿಚ್‌ಗಳ ಲಾಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ ಎಂದು ಏರ್ ಇಂಡಿಯಾ ಸಂಸ್ಥೆ ಪ್ರಕಟಣೆ ನೀಡಿದೆ. ಇಂಧನ ಸ್ವಿಚ್‌ಗಳನ್ನು ವಿಮಾನದ ಎಂಜಿನ್‌ಗೆ ಇಂಧನ ಪೂರೈಕೆ ಮಾಡಲು ಮತ್ತು ಸ್ಥಗಿತ ಮಾಡಲು ಬಳಸಲಾಗುತ್ತದೆ.
ಸದ್ಯ ಭಾರತದಲ್ಲಿ ವಿವಿಧ ವಿಮಾನಯಾನ ಕಂಪನಿಗಳ ಬಳಿ ಮೇಲ್ಕಂಡ ಮಾದರಿಯ 150ಕ್ಕೂ ಹೆಚ್ಚು ವಿಮಾನಗಳಿವೆ.
ದಿಲ್ಲಿಗೆ ಬಂದಿಳಿಯುತ್ತಿದ್ದಂತೆ ಏರಿಂಡಿಯಾ ವಿಮಾನದಲ್ಲಿ ಬೆಂಕಿ: ತಪ್ಪಿದ ಅನಾಹುತ
ನವದಹಲಿ: ಹಾಂಕಾಂಗ್‌ನಿಂದ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಣ್ಣ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ವಿಮಾನಕ್ಕಾಗಲೀ, ಪ್ರಯಾಣಿಕರಿಗಾಗಲೀ ಯಾವುದೇ ತೊಂದರೆ ಆಗಿಲ್ಲ. ವಿಮಾನ ಬಂದಿಳಿಯುತ್ತಿದ್ದಂತೆ ಅದರ ಆ್ಯಕ್ಸಿಲರಿ ಪವರ್ ಯುನಿಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡ ಹಿನ್ನೆಲೆಯಲ್ಲಿ ವಿಮಾನಕ್ಕೆ ವಿದ್ಯುತ್ ಪೂರೈಕೆ ಸ್ವಯಂ ಚಾಲಿತ ಸ್ಥಗಿತಗೊಂಡಿದೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ವಿಮಾನದ ಸಿಬ್ಬಂದಿ ಕೆಳಗಿಳಿಸಿ ಕಳುಹಿಸಿದರು. ಈ ಕುರಿತು ಏರಿಂಡಿಯಾ ತನಿಖೆಗೆ ಆದೇಶಿಸಿದೆ. ಆ್ಯಕ್ಸಿಲರಿ ಪವರ್ ಯುನಿಟ್ ಎನ್ನುವುದು ಗ್ಯಾಸ್ ಟರ್ಬೈನ್ ಎಂಜಿನ್ ಆಗಿದ್ದು, ವಿಮಾನದ ಮುಖ್ಯ ಎಂಜಿನ್ ಚಾಲಗೂ ಮುನ್ನವೇ ಚಾಲನೆಗೊಂಡಿರುತ್ತದೆ. ಇದು ವಿಮಾನದ ಬ್ಯಾಕಪ್ ವಿದ್ಯುತ್ ಪೂರೈಕೆ ಘಟಕವಾಗಿಯೂ ಕಾರ್ಯನಿರ್ವಹಿಸುತ್ತದೆ.
ಸುರಕ್ಷತೆಗಿಂತ ಪ್ರಚಾರಕ್ಕೆ ವಿಮಾನ ಕಂಪನಿಗಳ ವೆಚ್ಚ ಹೆಚ್ಚು: ಸಮೀಕ್ಷೆ!
ಮುಂಬೈ: ‘ಭಾರತದ ಬಹುತೇಕ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸುರಕ್ಷತೆಗಿಂತ ತಮ್ಮ ಪ್ರಚಾರಕ್ಕಾಗಿಯೇ ಹೆಚ್ಚು ಖರ್ಚು ಮಾಡುತ್ತಿವೆ’ ಎಂದು ದೇಶಾದ್ಯಂತ ನಡೆದ ಆನ್ಲೈನ್ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.76 ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ಸರಣಿ ವಿಮಾನ ತಾಂತ್ರಿಕ ದೋಷದ ಘಟನೆ ಹಿನ್ನೆಲೆಯಲ್ಲಿ ಲೋಕಲ್ ಸರ್ಕಲ್ಸ್ ಸಂಸ್ಥೆ 322 ಜಿಲ್ಲೆಗಳಿಂದ 44,000 ವಿಮಾನ ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಿತ್ತು.ಅದರಲ್ಲಿ, ‘ಭಾರತದ ವಿಮಾನ ಸಂಸ್ಥೆಗಳು ಸುರಕ್ಷತೆಗಿಂತ ಪ್ರಚಾರಕ್ಕಾಗಿ ಹೆಚ್ಚು ಖರ್ಚು ಮಾಡುತ್ತಿವೆ ಎಂದು ನೀವು ಭಾವಿಸುತ್ತೀರಾ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ 26,696 ಜನರ ಪೈಕಿ ಶೇ.76ರಷ್ಟು ಜನ ಹೌದು ಎಂದಿದ್ದಾರೆ.
ಇನ್ನು ‘ಕಳೆದ 3 ವರ್ಷಗಳಲ್ಲಿ ಎಷ್ಟು ವಿಮಾನಗಳ ಟೇಕಾಫ್, ಹಾರಾಟ ಮತ್ತು ಲ್ಯಾಂಡಿಂಗ್‌ನಲ್ಲಿ ಆಘಾತಕಾರಿ ಅನುಭವವಾಗಿದೆ?’ ಎಂಬ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ 17,630 ಜನರ ಪೈಕಿ ಶೇ.64ರಷ್ಟು ಮಂದಿ ತಮಗೆ ಕನಿಷ್ಠ ಒಂದು ಅಥವಾ ಅದಕ್ಕಿಂತ ಹೆಚ್ಚು ವಿಮಾನಗಳಲ್ಲಿ ಆಘಾತಕಾರಿ ಅನುಭವವಾಗಿದೆ ಎಂದು ತಿಳಿಸಿದ್ದಾರೆ.